ಕಾಸರಗೋಡು : ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವದ ಅಂಗವಾಗಿ ‘ಪುರಾತನ ಕಲಾಕೃತಿ ಮತ್ತು ಕರಕುಶಲ ವಸ್ತು ಪ್ರದರ್ಶನ’ವನ್ನು ದಿನಾಂಕ 23-09-2023ರಂದು ಏರ್ಪಡಿಸಲಾಗಿತ್ತು.
ಈ ವೇಳೆ ಹಿಂದಿನ ತಲೆಮಾರುಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತಾಳೆಗರಿ, ವಾಲುರುಳಿ, ಚಾಪೆ, ಗೆರಸೆ, ತೈಲ ಬಾಂಡಲೆ, ರಾಟೆ, ಪೀಕದಾನಿ, ಬುಡ್ಡಿದೀಪ, ಕುಂಭ, ಕಡೆಗೋಲು, ಭಸ್ಮ ಪೆಟ್ಟಿಗೆ, ಚಿಮಣಿ ದೀಪ, ಗೆರಟೆಯ ವಿವಿಧ ವಸ್ತುಗಳು, ಪೂಜಾ ದೀಪಗಳು, ಟೇಪ್ ರೆಕಾರ್ಡರ್, ಕ್ಯಾಸೆಟ್, ಪ್ರಾಚೀನ ಕಾಲದ ಡಯಲ್ ಗಳು ಇತ್ಯಾದಿ ಗಮನ ಸೆಳೆದವು.
ವಸ್ತು ಪ್ರದರ್ಶನವು ಹೊಸ ಪೀಳಿಗೆಗೆ ಆಸಕ್ತಿದಾಯಕವಾಗಿ ಆಕರ್ಷಿಸಿದವು. ಅಲ್ಲದೆ ಗೆರಟೆ, ಹುಲ್ಲು, ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕರಕುಶಲ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ವಸ್ತು ಪ್ರದರ್ಶನ ವೀಕ್ಷಿಸಲು ಪರಿಸರದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು. ಇದೇ ಸಂದರ್ಭ ನಡೆದ ವಿಜ್ಞಾನ ಮೇಳ, ಸಮಾಜ ವಿಜ್ಞಾನ ಮೇಳ, ಗಣಿತ ಮೇಳ, ಐಟಿ ಮೇಳ ಹಾಗೂ ವೃತ್ತಿ ಪರಿಚಯ ಮೇಳದಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಮುಳಿಯಾರು ಗ್ರಾ.ಪಂ. ಅಧ್ಯಕ್ಷ ಪಿ.ವಿ.ಮಿನಿ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣನ್, ಪ್ರಾಂಶುಪಾಲ ಸಜೀವನ್ ಮದಪರಂಬತ್, ವಿ.ಎಚ್.ಎಸ್.ಇ. ವಿಭಾಗದ ಪ್ರಾಂಶುಪಾಲ ಸುಚೀಂದ್ರನಾಥ್, ಪಿಟಿಎ ಅಧ್ಯಕ್ಷ ರಾಜಾರಾಮ್, ಹಿರಿಯ ಸಹಾಯಕಿ ಸಿ. ಶಾಂತಕುಮಾರಿ, ಸಿಬ್ಬಂದಿ ಕಾರ್ಯದರ್ಶಿ ಕೆ. ಬಿಂದು, ಐಟಿ ಸಂಯೋಜಕ ವಿ.ಎಂ. ಕೃಷ್ಣಪ್ರಸಾದ್ ಮಾತನಾಡಿದರು. ಮುಖ್ಯ ಶಿಕ್ಷಕ ಎ.ಎಂ. ಅಬ್ದುಲ್ ಸಲಾಂ ಸ್ವಾಗತಿಸಿದರು. ಎಸ್.ಆರ್.ಜಿ. ಸಂಚಾಲಕ ಕೆ. ನಿಮಿಷ ಬಾಬು ವಂದಿಸಿದರು.