ಮೈಸೂರು : ನಟನ ಪಯಣ ರೆಪರ್ಟರಿ ತಂಡದ ಹೊಸ ಪ್ರಯೋಗ ‘ಅಂಧಯುಗ’ ನಾಟಕದ ಪ್ರದರ್ಶನವು ದಿನಾಂಕ 29-10-2023ರ ಸಂಜೆ ಘಂಟೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ.
ಮೂಲ ಧರ್ಮವೀರ ಭಾರತಿ ವಿರಚಿತ ಈ ನಾಟಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿಯವರು ಕನ್ನಡಕ್ಕೆ ಅನುವಾಡಿಸಿದ್ದಾರೆ. ಖ್ಯಾತ ನಟ ಹಾಗೂ ನಿರ್ದೇಶಕರಾದ ಮಂಡ್ಯ ರಮೇಶ್ ನಿರ್ದೇಶಿಸಿಸಿರುವ ಈ ನಾಟಕಕ್ಕೆ ಮೇಘ ಸಮೀರ ದೃಶ್ಯ ಸಂಯೋಜನೆ ಹಾಗೂ ವಿನ್ಯಾಸ ಮಾಡಿದ್ದಾರೆ. ವಸ್ತ್ರಾಲಂಕಾರವನ್ನು ರಂಜನಾ ಕೇರಾ ನಿರ್ವಹಿಸಿದ್ದು, ದಿಶಾ ರಮೇಶ್ ಸಂಗೀತ ಸಂಯೋಜಿಸಿದ್ದಾರೆ.
ನಟನ ಪಯಣ ರೆಪರ್ಟರಿ
ನಟನದಲ್ಲಿ ಅನೇಕ ವರ್ಷಗಳಿಂದ ರಂಗ ಕಾರ್ಯದಲ್ಲಿ ತೊಡಗಿದ ನುರಿತ ಕಲಾವಿದರು ಮತ್ತು ನಟನ ರಂಗಶಾಲೆಯ ಡಿಪ್ಲೊಮಾ ತರಬೇತಿ ಮುಗಿಸಿದ ರಂಗಾಭ್ಯಾಸಿಗಳ ವೃತ್ತಿಪರ ತಂಡ ‘ನಟನ ಪಯಣ ರೆಪರ್ಟರಿ’. ವಾರಾಂತ್ಯಗಳಲ್ಲಿ ನಟನದ ರಂಗ ಮಂದಿರದಲ್ಲಿ ಪ್ರದರ್ಶನಗಳನ್ನು ನೀಡುವುದರ ಜೊತೆಗೆ ದೇಶದಾದ್ಯಂತ ನಟನ ರೆಪರ್ಟರಿಯು ವಿವಿಧೆಡೆ ನಾಟಕಗಳನ್ನು ಪ್ರಯೋಗಿಸಿದೆ. ವಾಸ್ತವವಾದಿ, ಶೈಲೀಕೃತ, ಭಾರತೀಯ, ಪಾಶ್ಚಾತ್ಯ, ಸಾಂಪ್ರದಾಯಿಕ, ಸಮಕಾಲೀನ, ಜನಪದ, ಆಧುನಿಕ ಹಾಗೂ ಆಧುನಿಕೋತ್ತರ… ಹೀಗೆ ವಿಭಿನ್ನ ಶೈಲಿಯ ಪ್ರಯೋಗಗಳನ್ನು ರಂಗಕ್ಕೆ ತಂದಿರುವ ಈ ತಂಡಕ್ಕೆ ನಾಡಿನ ಅನೇಕ ಹೆಸರಾಂತ ರಂಗ ನಿರ್ದೇಶಕರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಣ್ಣ ಪುಟ್ಟ ಊರಿನ ಜಾತ್ರೆ, ಉತ್ಸವಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ನಾಟಕೋತ್ಸವದವರೆಗೆ ಈ ತಂಡವು ನೀಡಿರುವ ಪ್ರದರ್ಶನಗಳು ಸುಮಾರು ಎರಡು ಸಾವಿರಕ್ಕೂ ಹೆಚ್ಚು.
ಧರ್ಮವೀರ ಭಾರತಿ
ಭಾರತದ ಪ್ರಸಿದ್ಧ ಬರಹಗಾರ, ಕವಿ, ಲೇಖಕ, ನಾಟಕಕಾರ, ಚಿಂತಕ, ಪ್ರಬಂಧಕಾರ ಮತ್ತು ಕಾದಂಬರಿಕಾರರಾದ ಇವರು ಭಾರತೀಯ ಆಧುನಿಕ ರಂಗಭೂಮಿಯ ಆರಂಭದ ಘಟ್ಟದಲ್ಲಿ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಧರ್ಮಯುಗ ಎಂಬ ವಾರಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದ ಇವರು ಪದ್ಮಶ್ರೀ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯಂತಹ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ‘ಅಂಧಾಯುಗ್’ ಭಾರತೀಯ ನಾಟ್ಯಸೃಷ್ಟಿಯ ಒಂದು ಅದ್ಭುತ. ಪ್ರಯೋಗಶೀಲ ಮನಸ್ಸುಗಳನ್ನು ನಿರಂತರ ಆಕರ್ಷಿಸುವ ಕಾವ್ಯ ನಾಟಕ ಇದು. ಭಾರತದಲ್ಲೊಂದೇ ಅಲ್ಲ, ಜಗತ್ತಿನ ಹಲವಾರು ಭಾಷೆಯ ರಂಗಭೂಮಿಯಲ್ಲಿ ಯಶಸ್ವಿ ಪ್ರಯೋಗ ಕಂಡ ವಿಶಿಷ್ಟ ನಾಟ್ಯ ಪ್ರಯೋಗವಿದು.
ನಾಟಕ ಪ್ರಯೋಗದ ಕುರಿತು ನಿರ್ದೇಶಕರ ಮಾತು
ಮಹಾ ಭಾರತದಷ್ಟು ಮೈನವಿರೇಳಿಸುವ ಮಹಾಕಾವ್ಯ ಈ ಮೂರುಲೋಕಗಳಲ್ಲಿ ಮತ್ತೊಂದಿಲ್ಲ ಅಂತ ಮೊದಲಿನಿಂದಲೂ ಮೆಚ್ಚಿಕೊಂಡವ ನಾನು. ಮತ್ತೆ ಮತ್ತೆ ಅದಕ್ಕೆ ಸಾಕ್ಷಿಯಾಗುತ್ತಿದೆ ಈ ವರ್ತಮಾನದ ತಲ್ಲಣಗಳ ಮಹಾಗಾಥೆ! ಕುರುಕ್ಷೇತ್ರ ಮಹಾಯುದ್ಧ ಹದಿನೇಳನೇ ದಿನದಿಂದ ಆರಂಭವಾಗುವ ಕೃಷ್ಣಾವಸಾನದವರೆಗೂ ಸಾಗುವ ಪ್ರಸಂಗಗಳ ಆಧುನಿಕ ಅವಲೋಕನ ಈ ಅಂಧಯುಗ.
ಅಂಧ ಧೃತರಾಷ್ಟ್ರ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಗಾಂಧಾರಿ, ಪಶುವಾಗಿರುವ ಅಶ್ವತ್ಥಾಮ, ಕೊಳದ ಬಳಿ ಬಿದ್ದಿರುವ ದೊರೆ ದುರ್ಯೋಧನ, ಅಸಹ್ಯದ ಅಟ್ಟಹಾಸಗೈದ ಪಾಂಡವ ಗಣಗಳು, ಮೂಕ ಸಾಕ್ಷಿಯಾಗಿ ಎಡದಿಂದ ಬಲಕ್ಕೆ ಚಲಿಸುವ ಸಾಮಾನ್ಯ ಸೈನಿಕರು, ಆತ್ಮಹತ್ಯೆಗೆದುರಾಗಿ ನಿಂತಿರುವ ನಾಡಿನ ಚಿಂತನಶೀಲ ಯುಯುತ್ಸು… ಹೀಗೆ ರಂಗದಲ್ಲಿ ಕಾಣಿಸಿಕೊಳ್ಳುವ ಪ್ರತೀ ಪಾತ್ರಗಳು ಹಾಗೂ ಇವತ್ತು ಸಮಾಜದಲ್ಲಿ ನಮ್ಮ ಜೊತೆ ಪ್ರತಿನಿತ್ಯ ಕಾಣುತ್ತಿರುವ ಮತ್ತು ಏರುತ್ತಿರುವ ‘ಯುದ್ಧೋನ್ಮಾದ’ ಇವತ್ತಿಗೆ ತುಂಬಾ ಪ್ರಸ್ತುತ ಅನಿಸಿದ್ದರಿಂದ ಈ ನಾಟಕ ಆರಿಸಿಕೊಂಡೆ.
ಜೈವಿಕ ಯುದ್ಧ ಆರಂಭದ ಜೊತೆಯಲ್ಲೇ ಅಣ್ವಸ್ತ್ರ ಬಳಕೆಯಿಂದಾಗುವ ಅನಾಹುತವನ್ನು ಪುರಾಣದ ಚೌಕಟ್ಟಿನಲ್ಲಿ ಸಮರ್ಥವಾಗಿ ಬಿಂಬಿಸುವ ‘ಅಂಧಯುಗ’ ಯುದ್ಧ ವಿರೋಧಿ ಧೋರಣೆಯನ್ನು ಪ್ರತಿಪಾದಿಸುವ ಕೃತಿಯಾಗಿ ಜಗತ್ತಿನ ಹಲವು ರಂಗಶಾಲೆಗಳಿಗೆ ಪಠ್ಯವಾಗಿದೆ. ಯುದ್ಧ ಸೃಷ್ಟಿಸುವ ಉನ್ಮಾದ ಮನುಷ್ಯ ಸಂಬಂಧಗಳ ಮಧುರತೆಯನ್ನು ಹೊಸಕಿ ಹಾಕುವುದು ಮಾತ್ರವಲ್ಲದೆ ಮುಂದಿನ ಎಷ್ಟೋ ಶತಮಾನಗಳವರೆಗೆ ಪೈಶಾಚಿಕ ಮನಸ್ಥಿತಿ ಎಲ್ಲಾ ವಯೋಮಾನದವರನ್ನೂ ದಿಕ್ಕು ತಪ್ಪಿಸುತ್ತಲೇ ಇರುತ್ತದೆ.
ಈ ಆತಂಕವನ್ನು ಕಲಾವಿದರೆನ್ನುವವರೂ ಎದುರಿಸಬೇಕಾಗಿರುವುದರಿಂದ ಪ್ರತೀ ಕಾಲ ಘಟ್ಟದಲ್ಲೂ ಕಲಾವಿದರಿಗೆ ಸವಾಲಾಗುವ ನಾಟಕವಿದು. ಅಭಿನಯದ ಸಾಧ್ಯತೆಗಳ ಪ್ರಯೋಗಕ್ಕೆ, ಅಭ್ಯಾಸಕ್ಕೆ, ಹುಡುಕಾಟಕ್ಕೆ ಸಾಕಷ್ಟು ಅವಕಾಶ ಇರುವ ಕೃತಿ ಇದು. ಹೀಗಿರುವುದರಿಂದ ನಟನದ ಅನುಭವಿ ಕಲಾವಿದರು ಮತ್ತು ನಟನ ರಂಗ ತರಬೇತಿಯನ್ನು ಮುಗಿಸಿದ ರಂಗಾಭ್ಯಾಸಿಗಳು ಒಡಗೂಡಿ, ಅವರೇ ರಂಗದ ಮೇಲೆ ಕಟ್ಟಿದ ಆ ಜಗತ್ತಿನ ಬಿಸಿಯನ್ನು ಉಸಿರಾಗಿಸಿಕೊಂಡಿದ್ದಾರೆ. ಆ ತಾಪವನ್ನು ನೀವು ಖಂಡಿತ ಅನುಭವಿಸುತ್ತೀರಿ.
ಶ್ರೀ ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿಯವರ ಕಾವ್ಯಮಯ ಭಾಷೆಯನ್ನು ನಮ್ಮ ಕಲಾವಿದರು ಸಧೃಢವಾಗಿಯೇ ನುಡಿಸಿದ್ದಾರೆ. ಅನ್ನೋ ವಿಶ್ವಾಸ ನನ್ನದು.