ಮುಂಬಯಿ : ಅಭಿಜಿತ್ ಪ್ರಕಾಶನ ಮತ್ತು ಕನಕ ಸಭಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಆಶ್ರಯದಲ್ಲಿ ಅಭಿಜಿತ್ ಪ್ರಕಾಶನ ಪ್ರಕಟಿಸಿದ ವಿದುಷಿ ಸರೋಜಾ ಶ್ರೀನಾಥ್ ಇವರ ಹನ್ನೊಂದನೆಯ ಕೃತಿ ‘ಅಂದು ಇಂದು’ ನೆನಪಿನ ಲಹರಿ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 20 ಏಪ್ರಿಲ್ 2025ರಂದು ಮುಂಬಯಿ ಚೆಂಬೂರಿನ ನೀಲಕಂಠ್ ಇಲ್ಲಿರುವ ಕನಕಾಸಭಾ ಫರ್ಫಾರ್ಮಿಂಗ್ ಆರ್ಟ್ಸ್ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಅಭಿಜಿತ್ ಪ್ರಕಾಶನದ ರೂವಾರಿಯಾಗಿರುವ ಡಾ. ಜಿ ಎನ್.ಉಪಾಧ್ಯ ಮಾತನಾಡಿ “ವಿದ್ವಾನ್ ಸರೋಜಾ ಶ್ರೀನಾಥ್ ಅವರದು ಮಾದರಿ ಸಾಧನೆ.ನಮ್ಮಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಆದರೆ ಕಲಾ ಸಾಹಿತ್ಯ ನಿರ್ಮಾಣ ಕಡಿಮೆ. ಹೀಗಿರುವಾಗ ಸಂಗೀತ, ನೃತ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ಅವರು ಗೈದ ಪರಿಚಾರಿಕೆ ಬಲು ದೊಡ್ಡದು.ಅವರದು ಸುಸಂಸ್ಕೃತ ವ್ಯಕ್ತಿತ್ವ. ಇಂದು 90ರ ಪ್ರಾಯದಲ್ಲೂ ಸರೋಜಾ ಅವರ ಬತ್ತದ ಅದಮ್ಯ ಜೀವನೋತ್ಸಾಹ, ಧನಾತ್ಮಕ ಚಿಂತನೆ ನಮಗೆಲ್ಲ ಪ್ರೇರಣದಾಯಿಯಾಗಿದೆ. ಸರೋಜಾ ಶ್ರೀನಾಥ್ ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಮಿಂಚಿದವರು. ಇವತ್ತಿಗೂ ಅವರ ಬರವಣಿಗೆ ಕೃಷಿ ಮುಂದುವರಿದಿರುವುದು ಕನ್ನಡದ ಭಾಗ್ಯ. ಇದು ಅಭಿಜಿತ್ ಪ್ರಕಾಶನದ 132ನೆಯ ಪ್ರಕಟಣೆ. ಹೊರನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಪ್ರಕಟಣೆ ಸಹ ಪೂರಕ ಚಟುವಟಿಕೆ. ಆದನ್ನು ಅಭಿಜಿತ್ ಪ್ರಕಾಶನ ಮುಂದುವರಿಸಿಕೊಂಡು ಬರುತ್ತಿದೆ. ಇದರ ಎಲ್ಲ ಶ್ರೇಯಸ್ಸು ಲೇಖಕ ಬಳಗಕ್ಕೆ ಸಲ್ಲುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಕೃತಿ ಲೋಕಾರ್ಪಣೆಗೊಳಿಸಿದ ಪತ್ರಕರ್ತ ಹಾಗೂ ಸಾಹಿತಿ ಶ್ರೀನಿವಾಸ ಜೋಕಟ್ಟೆ ಮಾತನಾಡಿ “ಸರೋಜಾ ಶ್ರೀನಾಥ್ ತಮ್ಮ ಎಂಭತ್ತು- ತೊಂಭತ್ತರ ವಯಸ್ಸಿನ ಈ ಹತ್ತು ವರ್ಷಗಳ ಅಂತರದಲ್ಲಿ ಅತಿಹೆಚ್ಚು ಬರವಣಿಗೆಗೆ ತಮ್ಮ ಸಮಯ ಮೀಸಲಿರಿಸಿದರು. ಇಂದು ಲೋಕಾರ್ಪಣೆಗೊಂಡ ‘ಅಂದು ಇಂದು’ ನೆನಪಿನ ಲಹರಿ ಕೃತಿ ಕಾಲಚಕ್ರದ ಆಗುಹೋಗುಗಳ ಸುಂದರ ಚಿತ್ರಣ. ಆ ಕಾಲದ ಜನಜೀವನದ ರಂಗು ರಂಗಿನ ಚಿತ್ರಣಗಳು ಇದರಲ್ಲಿ ದೊರೆಯುವುದು. ಈ ತೊಂಭತ್ತರ ವಯಸ್ಸಿನಲ್ಲೂ ಅವರ ಬರವಣಿಗೆಯ ಉತ್ಸಾಹ ನಮಗೆಲ್ಲ ಸ್ಪೂರ್ತಿದಾಯಕ. ಅವರ ಬರವಣಿಗೆ ನಿರಂತರ ಸಾಗುತ್ತಿರಲಿ, ನಮಗೆ ಇನ್ನಷ್ಟು ಅವರ ಅನುಭವಗಳು ಮಾರ್ಗದರ್ಶಕವಾಗಿರಲಿ” ಎಂದು ಶುಭ ಹಾರೈಸಿದರು.
ಕನಕ ಸಭಾ ಇದರ ನಿರ್ದೇಶಕರೂ ಪ್ರಸಿದ್ಧ ಕಲಾವಿದರೂ ಆದ ಡಾ. ಸಿರಿರಾಮ ಮಾತನಾಡಿ “ನಮ್ಮ ಅಮ್ಮನದು ವಿಶಿಷ್ಟ ವ್ಯಕ್ತಿತ್ವ. ಅವರು ಮೊದಲಿನಿಂದಲೂ ಶಿಸ್ತು, ಸಂಯಮ, ಸಹಕಾರ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಬಂದವರು. ಹಿಡಿದ ಕೆಲಸದಲ್ಲಿ ಅವರಿಗೆ ಅಪಾರವಾದ ಶ್ರದ್ದೆ, ಅಚ್ಚುಕಟ್ಟುತನ. ಅಂಜದೆ ಅಳುಕದೆ ಮುನ್ನುಗ್ಗಿ ಕೆಲಸ ಮಾಡುವ ಗುಣವೂ ಅವರಲ್ಲಿ ಇದೆ. ಸುತ್ತಲಿನ ಎಲ್ಲಾ ವಿದ್ಯಮಾನಗಳಿಗೆ ಸ್ಪಂದಿಸುವ ಪ್ರವೃತ್ತಿ ಅವರದು. ಲಲಿತ ಕಲೆ ಅವರ ಜೀವಾಳ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳಿಂದ ಬದುಕು ಸಮೃದ್ಧವಾಗುತ್ತದೆ ಅಂತ ಅಮ್ಮ ನಂಬಿಕೊಂಡು ಬಂದರು. ಹೀಗಾಗಿ ನಾನು ವಿಜ್ಞಾನ ವಿಷಯ ಓದಿದರೂ ಕಲಾ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ ಆಯಿತು” ಎಂದು ಸರೋಜಾ ಶ್ರೀನಾಥ್ ಅವರ ಸಾಧನೆಯ ವಿವಿಧ ಮುಖಗಳನ್ನು ಪುತ್ರಿ ಡಾ. ಸಿರಿರಾಮ ತೆರೆದಿಟ್ಟರು.
ಕೃತಿಕಾರರಾದ ವಿದುಷಿ ಸರೋಜಾ ಶ್ರೀನಾಥ್ ಮಾತನಾಡಿ “ಕನ್ನಡ ನನ್ನ ತಾಯಿನುಡಿ. ಮೈಸೂರಿನಂತಹ ಸಾಂಸ್ಕೃತಿಕ ನಗರದಲ್ಲಿ ಬೆಳೆದವಳು ನಾನು. ಅದೂ ಅಜ್ಜಿಯ ಮನೆಯಲ್ಲೇ ಹೆಚ್ಚು ಸಮಯ ಕಳೆದವಳು. ಬಾಲ್ಯದಿಂದಲೇ ಸಂಗೀತ, ನೃತ್ಯ ಹಾಗೂ ಸಾಹಿತ್ಯದ ಪರಿಚಯ ಆಗಿತ್ತು. ದೇವುಡು ನರಸಿಂಹ ಶಾಸ್ತಿಗಳು, ಜೆ. ಪಿ. ರಾಜರತ್ನಂ, ದ. ರಾ. ಬೇಂದ್ರೆ, ಕಣಗಾಲ್ ಪ್ರಭಾಕರ ಶಾಸ್ತ್ರಿ….ಇವರೆಲ್ಲರ ಮಾತುಗಳನ್ನು ಬಾಲ್ಯದಿಂದಲೇ ಕೇಳಿಸಿಕೊಂಡು ಬೆಳೆದವಳು. ಇಂದು ನನ್ನ ರಕ್ತಸಂಬಂಧಿಕರೆಲ್ಲ ಎಲ್ಲೆಲ್ಲೋ ಚದುರಿ ಹೋಗಿದ್ದಾರೆ. ಹಾಗಾಗಿ ಇಂದು ನನ್ನ ಬಳಿ ಇರುವ ನೀವುಗಳೇ ನನ್ನ ಬಂಧುಗಳು. ಈ ತನಕದ ಸಾಧನೆಗಳು ನನಗೆ ಪೂರ್ತಿ ತೃಪ್ತಿ ನೀಡಿಲ್ಲ. ಇನ್ನೂ ಸಾಧನೆ ಮಾಡಲು ಬಾಕಿ ಇದೆ. ಆದರೆ ಹೇಗೆ ಮಾಡಬೇಕು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ನನಗೆ ಏನು ತೋಚುತ್ತದೋ,ತೋಚಿದ್ದನ್ನು ಬರೆಯುತ್ತೇನೆ. ಕನಕಸಭಾ ಮೂಲಕ ಬಡ ಕಲಾಸಕ್ತರಿಗೆ ಉಚಿತವಾಗಿ ನೃತ್ಯವನ್ನೂ ಕಲಿಸಿದ ತೃಪ್ತಿ ತನಗಿದೆ. ವರ್ತಮಾನದಲ್ಲಿ ದ್ವೇಷ ಭಾವನೆ ಹೆಚ್ಚುತ್ತಿದೆ. ಸರಿಯಾಗಿ ಯಾರಿಗೂ ಮಾರ್ಗದರ್ಶನ ಸಿಗುತ್ತಿಲ್ಲವೇ ಎನ್ನವ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಸಮತೆ ಮತ್ತು ಮಮತೆ ಇಂದು ಸಮಾಜದಲ್ಲಿ ಕಡಿಮೆಯಾಗುತ್ತಿದೆ. ನಾವೆಲ್ಲ ಒಳ್ಳೆಯ ಕಾಲವನ್ನೂ ನೋಡಿದ್ದೆವು. ಆದರೆ ಈಗಿನಕಾಲ ನೋಡಿದರೆ ಪ್ರಪಂಚ ಮುಂದುವರಿಯುತ್ತಿರುವುದು ನಿಜವೇ….? ಎನ್ನುವ ಅನುಮಾನ ಬರತೊಡಗಿದೆ.ಇಂತಹ ಸ್ಥಿತಿಯಲ್ಲಿ ಮಹಾತ್ಮರಂಥವರು ಇರಬೇಕಾಗುತ್ತದೆ” ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವಿದ್ವಾನ್ ಸರೋಜಾ ಶ್ರೀನಾಥ್ ಇವರನ್ನು ಶಾಲುಹೊದೆಸಿ ಫಲಪುಷ್ಪ, ಪುಸ್ತಕ ಗುಚ್ಚ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸವಿತಾ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಜಯಲಕ್ಷ್ಮಿ ಜೋಕಟ್ಟೆ ವಂದಿಸಿದರು.ಈ ಸಂದರ್ಭದಲ್ಲಿ ಸರೋಜಾ ಶ್ರೀನಾಥ್ ಅವರ ಕನಕಸಭಾ ನೃತ್ಯಾಭಿಮಾನಿಗಳು ಉಪಸ್ಥಿತರಿದ್ದರು.