ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ (ರಿ), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ದಿನಾಂಕ 25 ಜನವರಿ 2026ರಂದು ಯಕ್ಷಗಾನ ಕೇಂದ್ರದ 53ನೇ ವರ್ಷದ ವಾರ್ಷಿಕೋತ್ಸವ ಹಾಗೂ ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ಯಕ್ಷಗಾನ ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಪರಂಪರೆ. ಈ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಜನತೆಯ ಮೇಲಿದೆ. ಯಕ್ಷಗಾನ ತರಬೇತಿ, ಪ್ರದರ್ಶನ ಹಾಗೂ ಅಧ್ಯಯನಗಳಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಿದರೆ ಪ್ರಬುದ್ಧವಾದ ಈ ಕಲೆಯ ಉಳಿವಿಗೆ ಹೊಸ ಉಸಿರು ನೀಡಿದಂತಾಗುತ್ತದೆ. ಮಾಹೆ ವಿ.ವಿ. ಮತ್ತು ಯಕ್ಷಗಾನ ಕೇಂದ್ರದ ಸಹಯೋಗದೊಂದಿಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದ್ದು, ಇದರಲ್ಲಿ ಯುವ ಜನರಿಂದ ಹಿಡಿದು ವಯೋವೃದ್ಧರೂ ಸೇರಲ್ಪಟ್ಟು ಕಲೆಯನ್ನು ಭಕ್ತಿಯಿಂದ ಕಲಿತು, ಆರಾಧಿಸಿ ಸಂಭ್ರಮಿಸುತ್ತಿರುವುದು ಸಂತೋಷದೊಂದಿಗೆ ಹೆಮ್ಮಯಾಗುತ್ತಿದೆ” ಎಂದು ಹೇಳಿದರು.
ಮಾಹೆ ವಿ.ವಿ. ಸಹಕುಲಪತಿ ಡಾ. ನಾರಾಯಣ ಸಭಾಹಿತ್, ಟೆಲಿಕಮ್ಯುನಿಕೇಶನ್‌ನ ನಿವೃತ್ತ ಎಂಜಿನಿಯರ್ ವೈ. ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾರಣಕಟ್ಟೆ ಮೇಳದ ಹಿರಿಯ ಕಲಾವಿದ ಚಂದ್ರಗೌಡ ಗೋಳಿಕೆರೆ ಇವರನ್ನು ಯಕ್ಷರಂಗದ ಭೀಷ್ಮ ‘ಎಂ.ಎಂ. ಹೆಗ್ಡೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಚಂದ್ರಗೌಡ ಗೋಳಿಕೆರೆ ಮಾತನಾಡಿ “ಎಂ.ಎಂ. ಹೆಗ್ಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ನನಗೆ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯ” ಎಂದು ಧನ್ಯತಾ ಭಾವ ಸೂಚಿಸಿದರು.

ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಪ್ರಶಿಕ್ಷಣಾರ್ಥಿ ವಾಣಿ ಮಾತನಾಡಿ “ಗುರುಗಳು ನೀಡಿದ ಮಾರ್ಗದರ್ಶನ, ತರಬೇತಿಯ ಕ್ರಮವು ಎಲ್ಲ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಕೆಗೆ ಸ್ಫೂರ್ತಿ ನೀಡುತ್ತದೆ. ಈ ನೆಲೆಯಲ್ಲಿ ಕಲೆ ಮತ್ತು ಗುರುತ್ರಯರ ಪರಿಶ್ರಮದಿಂದ ಯಕ್ಷಗಾನ ಕಲಿಯುವುದಕ್ಕೆ ವಯಸ್ಸು ಗೌಣವಾಗಿರುವುದು ಸುಳ್ಳಲ್ಲ” ಎಂದು ಅಭಿಪ್ರಾಯಪಟ್ಟರು. ಎಂ.ಐ.ಟಿ. ಪ್ರಾಧ್ಯಾಪಕ ಡಾ. ಪ್ರವೀಣ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಸರ್ಟಿಫಿಕೇಟ್ ಕೋರ್ಸ್ ನಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಭುವನ ಪ್ರಸಾದ್ ಹೆಗ್ಡೆ, ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಗೋಪಾಡಿ, ಕೃಷ್ಣಮೂರ್ತಿ ಭಟ್ ಬಗ್ವಾಡಿ, ಬಸವ ಮುಂಡಾಡಿ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಸಲಹಾ ಸಮಿತಿ ಸದಸ್ಯ ಮಂಜುನಾಥ ಮಯ್ಯ ಸರ್ಟಿಫಿಕೇಟ್ ಕೋರ್ಸ್ ನಡಿ ತರಬೇತಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕ ಪ್ರೊ. ಕೆ. ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು. ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ, ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ ‘ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನಗೊಂಡಿತು.
