ಉಪ್ಪಿನಕುದ್ರು : ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರ ಜಂಟಿ ಆಶ್ರಯದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಹರಿಕೃಷ್ಣ ಪುನರೂರುರವರು ಮಾತನಾಡಿ “ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ. ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು” ಎಂದು ನುಡಿದರು.
ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಗಂಗೊಳ್ಳಿ ಇವರ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ಡಾ. ಕಾಶೀನಾಥ್ ಪೈಯವರು ಪ್ರಾರ್ಥಿಸಿದರು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗರು “ಯಕ್ಷಗಾನದ ಇತಿಹಾಸಕ್ಕಿಂತ ಗೊಂಬೆಯಾಟ ಕಲೆಯೇ ಪುರಾತನವಾದದ್ದು” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಕುಂದಾಪುರದ ಮೊಕ್ತೇಸರರಾದ ರಾಧಾಕೃಷ್ಣ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲ್ಲೂರು ಇದರ ಮೊಕ್ತೇಸರ ವಸಂತ ಆರ್. ಹೆಗ್ಡೆ, ಓಂ ಗಣೇಶ್ ಟ್ರಾಕ್ಟರ್ಸ್, ಶಿವಮೊಗ್ಗದ ಆಡಳಿತ ಪಾಲುದಾರ ಭಾಸ್ಕರ್ ಜಿ. ಕಾಮತ್, ಎಸ್.ವಿ. ಪದವಿಪೂರ್ವ ಕಾಲೇಜು ಗಂಗೊಳ್ಳಿ ಇದರ ಉಪನ್ಯಾಸಕ ಸುಜಯೀಂದ್ರ ಹಂದೆಯವರು ಉಪಸ್ಥಿತರಿದ್ದರು. ಪಾಕಶಾಲೆಯನ್ನು ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ ಉಡುಪಿ ಇವರು ಉದ್ಘಾಟಿಸಿದರು. ಅಕಾಡೆಮಿಯು ವರ್ಷಂಪ್ರತಿ ಕೊಡಮಾಡುವ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ-2025’ನ್ನು ಬಹುಮುಖ ಪ್ರತಿಭೆಯ ಕಲಾವಿದ ಓಂ ಗಣೇಶ್ ಉಪ್ಪುಂದ ಇವರಿಗೆ ನೀಡಲಾಯಿತು. ಪ್ರಶಸ್ತಿ ಪತ್ರವನ್ನು ರಾಜೇಂದ್ರ ಪೈ ವಾಚಿಸಿದರು.
ಇದೇ ವೇದಿಕೆಯಲ್ಲಿ ಧಾರ್ಮಿಕ ಕ್ಷೇತ್ರದ ಧುರೀಣ ವಸಂತ ಆರ್. ಹೆಗ್ಡೆ, ಹಿಂದೂಸ್ತಾನಿ ಸಂಗೀತದಲ್ಲಿ ವಿದ್ವಾನ್ ಪದವಿ ಗಳಿಸಿದ ವಿದ್ವಾನ್ ಡಾ. ಹೆಚ್.ಆರ್. ಹೆಬ್ಬಾರ್, ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿದ ಶಿಶಿರ ಶಂಕರ ಪೂಜಾರಿ ಹಾಗೂ ಬಾಲ ಚಿತ್ರಕಲಾವಿದ ವಿವೇಕ್ ಭಟ್ ಇವರನ್ನು ಸಂಮಾನಿಸಲಾಯಿತು. ಶ್ರೀಮತಿ ರಾಜಶ್ರೀ ಆರ್. ಪೈ ಮತ್ತು ಎಮ್. ರತ್ನಾಕರ ಪೈಯವರು ಶ್ರೀ ಗಣೇಶ ಯಕ್ಷಗಾನ ಮಂಡಳಿ ಉಪ್ಪಿನಕುದ್ರು ಇದರ ಚಂಡೆಗಾರ ಶಂಕರ ಕುಮಾರ ಮೊಗವೀರ ಇವರಿಗೆ ಗೃಹ ನಿರ್ಮಾಣದ ಬಗ್ಗೆ ಧನಸಹಾಯ ನೀಡಿದರು. ಪ್ರತೀಕ್ಷಾ ಕಾಮತ್ ರವರು ಕುಮಾರಿ ದೀಕ್ಷಾಳಿಗೆ ಹಾಗೂ ಶ್ರೀಮತಿ ಸಹನಾ ಶ್ರೀಲತಾ ನಾಯಕ್ ಮುಂಬಯಿ ಇವರು ಕುಮಾರಿ ಸಮೀಕ್ಷಾಳಿಗೆ ಶಾಲಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಉಪ್ಪಿನಕುದ್ರು ನಿವಾಸಿ ವಾಸುದೇವ ಆಚಾರ್ ಇವರಿಗೆ ಗಂಗೊಳ್ಳಿಯ ಶ್ರೀಮತಿ ಜಿ. ಜಯಂತಿ ಗಣಪತಿ ಸೇರುಗಾರ್ ಇವರು ವೈದ್ಯಕೀಯ ನೆರವು ನೀಡಿದರು.
ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಿಸಲಾಯಿತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಜನಾರ್ದನ ಹಂದೆ ಮಂಗಳೂರು ಇವರ ಗೀತೆಗಳು, ವಸಂತಿ ಆರ್. ಪಂಡಿತ್ ಇವರ ದೇವರ ನಾಮ, ಶ್ರೀಮತಿ ಪೂಜಾ ಭಟ್ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಮಂಡಳಿ ಚೇಂಪಿ ಇವರ ಕುಣಿತದ ಭಜನೆ, ತಲ್ಲೂರಿನ ಅಂಗನವಾಡಿ ಕೇಂದ್ರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನೃತ್ಯ ವೈಭವ ನೆರೆದ ಪ್ರೇಕ್ಷರನ್ನು ರಂಜಿಸಿತು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿ, ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ವಂದಿಸಿದರು.