ಮಂಗಳೂರು : ಮಂಗಳೂರಿನ ಪುರಭವನದಲ್ಲಿ ‘ಯಕ್ಷನಂದನ’ ಪಿ.ವಿ. ಐತಾಳರ ಆಂಗ್ಲ ಭಾಷಾ ಯಕ್ಷಗಾನ ತಂಡದ 43ನೇ ವರ್ಷಾಚರಣೆಯು ದಿನಾಂಕ 02-07-2024ರಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಆಂಗ್ಲ ಭಾಷೆಯಲ್ಲಿ 43 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಆಯೋಜಿಸಲು ಯಕ್ಷನಂದನ ಸಂಸ್ಥೆಯಿಂದ ಮಾತ್ರ ಸಾಧ್ಯ. ಪಿ.ವಿ. ಐತಾಳರ ಕನಸಾಗಿರುವ ಈ ಯಕ್ಷಗಾನ ಪ್ರದರ್ಶನ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿ. ಯಕ್ಷನಂದನ ಭವಿಷ್ಯದಲ್ಲಿಯೂ ‘ನಂದನ’ವಾಗಿಯೇ ಇರಲಿ” ಎಂದು ಹೇಳಿದರು.
ಎನ್.ಐ.ಟಿ.ಕೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ. ಚಿತ್ತರಂಜನ್ ಹೆಗ್ಡೆ ಇವರು “ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನಗಳೆಲ್ಲವೂ ನಮ್ಮ ಜೀವನಕ್ಕೆ ಆನಂದವನ್ನು ನೀಡುವಂತಹುದು. ಯಕ್ಷಗಾನದಂತಹಾ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ ಸಂಗೀತ ನೃತ್ಯಾದಿ ಪ್ರಕಾರಗಳು ಮಾನವನ ಬದುಕಿನ ಸಂಗಾತಿಗಳು. ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ ರೂವಾರಿ. ನಲವತ್ತಮೂರು ವರ್ಷಗಳ ಈ ಇಂಗ್ಲೀಷ್ ಯಾನ ಅಭೂತಪೂರ್ವವಾದುದು. ಅವರ ನಂತರವೂ ಅವರ ಮಕ್ಕಳು ಅದನ್ನು ಮುಂದುವರಿಸಿಕೊಂಡು ಯಕ್ಷಕ್ರಾಂತಿಯನ್ನುಂಟು ಮಾಡಿದ್ದಾರೆ. ಪಿ.ವಿ. ಐತಾಳ್ ಆಂಗ್ಲ ಭಾಷಾ ತಂಡ ಸುವರ್ಣ, ಶತಮಾನ ಉತ್ಸವಗಳನ್ನು ಕಾಣಲಿ” ಎಂದು ಅಧ್ಯಕ್ಷೀಯ ಪೀಠದಿಂದ ನುಡಿದರು.
ಮುಖ್ಯ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ರಾಜಮಣಿ ಎ. ಮತ್ತು ಶ್ರೀಧರ ಐತಾಳ್ ಇವರುಗಳು ಭಾಗವಹಿಸಿದ್ದರು. ‘ಯಕ್ಷನಂದನ’ದ ಸಂಚಾಲಕ ಸಂತೋಷ್ ಐತಾಳರು ಪ್ರಸ್ತಾವನೆಗೈದು ‘ಯಕ್ಷನಂದನ’ದ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಡಾ. ಸತ್ಯಮೂರ್ತಿ ಐತಾಳರು ಸ್ವಾಗತಿಸಿ, ಸುರೇಶ್ ಕುಮಾರ್ ಪಿ. ಇವರು ಪಿ.ವಿ. ಐತಾಳರಿಗೆ ನುಡಿನಮನ ಅರ್ಪಿಸಿದರು. ಅತಿಥಿಗಳೆಲ್ಲರೂ ಐತಾಳರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಇದೇ ಸಂದರ್ಭದಲ್ಲಿ ಕುಮಾರಿಯರಾದ ಅನಘಾ ಐತಾಳ್, ವೈಷ್ಣವಿ ಐತಾಳ್ ಮತ್ತು ಪ್ರತೀಕ್ಷಾ ಬಿ.ವಿ.ಯವರಿಗೆ ಪಿ.ವಿ. ಐತಾಳರ ಸ್ಮರಣಾರ್ಥ ಪಿ.ವಿ. ಐತಾಳ ಮೆಮೋರಿಯಲ್ ವೆಂಕಟರತ್ನ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಸಹಕಾರವೂ ನಡೆಯಿತು. ಯಕ್ಷನಂದನದ ಕಲಾವಿದರಾಗಿದ್ದ ಎಂ.ಸಿ.ಎಫ್.ನ ನಿವೃತ್ತ ಉದ್ಯೋಗಿ ಪಿ. ಪುರುಷೋತ್ತಮ ರಾವ್ ಇವರನ್ನು ಗೌರವಿಸಲಾಯಿತು. ಯಕ್ಷನಂದನದ ಅಧ್ಯಕ್ಷರಾದ ಡಾ. ಪಿ. ಸತ್ಯಮೂರ್ತಿ ಐತಾಳ ಸ್ವಾಗತಿಸಿ, ಸಂಚಾಲಕರಾದ ಪಿ. ಸಂತೋಷ್ ಐತಾಳರು ಪ್ರಸ್ತಾಪಿಸಿ ಕಾರ್ಯಕ್ರಮ ನಿರೂಪಿಸಿದರು. ‘ಯಕ್ಷನಂದನ’ದ ಹಿರಿಯ ಬಣ್ಣದ ವೇಷಧಾರಿ ಪಿ. ನಾಗೇಶ ಕಾರಂತರು ಸಹಕರಿಸಿದವರಿಗೆ ಧನ್ಯವಾದವಿತ್ತರು. ಬಳಿಕ ನ್ಯಾಯವಾದಿಗಳಾದ ಪಿ. ಸಂತೋಷ್ ಐತಾಳರು ಬರೆದ ‘ಸೀತಾಪಹಾರ – ಜಟಾಯು ಮೋಕ್ಷ’ ಎಂಬ ಆಂಗ್ಲ ಭಾಷೆಯ ಯಕ್ಷಗಾನ ಬಯಲಾಟ ಪ್ರಸ್ತುತಗೊಂಡಿತು.