ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕೇಂದ್ರ ಮಹಿಳಾ ಘಟಕದ ನವಮ ವಾರ್ಷಿಕೋತ್ಸವವು ದಿನಾಂಕ 02 ಫೆಬ್ರವರಿ 2026ರಂದು ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಅಧ್ಯಕ್ಷತೆ ವಹಿಸಿದ್ದು, “ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿಯವರು ಆಸಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು. ಟ್ರಸ್ಟ್ ಮೂಲಕ ನಿರಂತರ ಕಾರ್ಯಯೋಜನೆಗಳನ್ನು ಕೈಗೊಳ್ಳುತ್ತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ” ಎಂದು ತಿಳಿಸಿದರು.
ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ಕೇಂದ್ರೀಯ ಮಹಿಳಾ ಘಟಕ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ. ಕೇಂದ್ರೀಯ ಘಟಕ ಎಲ್ಲ ಕಡೆ ವಿಸ್ತರಣೆಯಾಗಲಿ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಮಹಿಳಾ ಘಟಕದ ವತಿಯಿಂದ ಗೌರವಿಸಲಾಯಿತು.

ಕಲಾ ಪೋಷಕರಾದ ಶಕುಂತಲಾ ರಮಾನಂದ ಭಟ್ ಇಡ್ಯಾ, ರೂಪರಾಣಿ ಶೆಟ್ಟಿ ಬೆಳ್ಳಣ್, ಆಶಾ ಪ್ರಭಾಕರ ರಾವ್ ಮಂಗಳೂರು, ಕವಿತಾ ಶಾಸ್ತ್ರಿ ಮಂಗಳೂರು, ಸರೋಜ ಟಿ. ಶೆಟ್ಟಿ ಸುರತ್ಕಲ್, ರಾಜೇಶ್ವರಿ ಡಿ. ಶೆಟ್ಟಿ ಸುರತ್ಕಲ್, ವಿದ್ಯಾ ಚಂದ್ರಹಾಸ ಶೆಟ್ಟಿ ಬಂಟ್ವಾಳ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುರತ್ಕಲ್ ದುರ್ಗಾಂಬಾ ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆ ಸುಲೋಚನಾ ರಾವ್ ತಡಂಬೈಲ್, ಕೆರೆಕಾಡು ಮಕ್ಕಳ ಮೇಳದ ರಂಗಸಹಾಯಕರಾದ ರೇಷ್ಠಾ ಇವರನ್ನು ಸಮ್ಮಾನಿಸಲಾಯಿತು. ಪೂಜಾ ಕೆರೆಕಾಡು ಇವರಿಗೆ ‘ಯಕ್ಷಧ್ರುವ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಪೂರ್ಣಿಮಾ ಶಾಸ್ತ್ರಿ ಉಪಸ್ಥಿತರಿದ್ದರು. ಡಾ. ಸುಧಾ ಚಂದ್ರಶೇಖರ ಶೆಟ್ಟಿ, ವಸುಂಧರ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪಾವಂಜೆ ಮೇಳದವರಿಂದ ‘ಛಾಯಾನಂದನ’ ಯಕ್ಷಗಾನ ನಡೆಯಿತು.
