ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರವು ಮೂರು ವರ್ಷಗಳ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರ ನೇತೃತ್ವದ ಕಾರ್ಯಕಾರಿ ಸಮಿತಿಯು 2022, 2023 ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ‘ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಕ್ರಮವಾಗಿ ಮೈಸೂರಿನ ಪ್ರೊ. ಪಿ.ವಿ. ನಂಜರಾಜ ಅರಸ್, ಮಂಗಳೂರಿನ ಡಾ. ಇಂದಿರಾ ಹೆಗ್ಗಡೆ ಹಾಗೂ ವಿಜಯನಗರದ ಹೊಸಪೇಟೆಯ ಕೆ. ರವೀಂದ್ರನಾಥ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ ರೂ. ಎಪ್ಪತ್ತೈದು ಸಾವಿರ ನಗದು ಒಳಗೊಂಡಿದೆ.
‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಗದಗದ ಲಡಾಯಿ ಪ್ರಕಾಶನ, ಮೈಸೂರಿನ ಅಭಿರುಚಿ ಪ್ರಕಾಶನ ಹಾಗೂ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ರೂ. ಒಂದು ಲಕ್ಷ ನಗದು ಹೊಂದಿದೆ.
‘ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಮಂಡ್ಯದ ಪ್ರೊ. ಬಿ. ಜಯಪ್ರಕಾಶ ಗೌಡ, ಬಳ್ಳಾರಿಯ ಹಗರಿ ಬೊಮ್ಮನಹಳ್ಳಿಯ ಮೇಟಿಕೊಟ್ರಪ್ಪ, ಮೈಸೂರಿನ ರಂಗನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ. ಐವತ್ತು ಸಾವಿರ ನಗದು ಒಳಗೊಂಡಿದೆ.
‘ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ ಮೈಸೂರಿನ ಹರಿಪ್ರಸಾದ್, ಯಾದಗಿರಿಯ ಎಸ್.ಎಸ್. ಗುಬ್ಬಿ ಮತ್ತು ಬಾಗಲಕೋಟೆಯ ಡಾ. ಕರವೀರಪ್ರಭು ಕ್ಯಾಲಕೊಂಡ ಇವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ ರೂ. ಇಪ್ಪತ್ತೈದು ಸಾವಿರ ನಗದು ಹೊಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ ತಿಂಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಯೋಜಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದ್ದಾರೆ.