ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ (ರಿ.) ಕೊಡಮಾಡುವ 2024ರ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ಯನ್ನು ಪ್ರಕಟಿಸಿದ್ದು, ತುಂಬಾಡಿ ರಾಮಯ್ಯರವರ ‘ಜಾಲ್ಕಿರಿ’ ಮತ್ತು ಗುರುಪ್ರಸಾದ್ ಕಂಟಲಗೆರೆಯವರ ‘ಅಟ್ರಾಸಿಟ’ ಕಾದಂಬರಿಗಳು ಈ ಪ್ರಶಸ್ತಿಯನ್ನು ಸಮನಾಗಿ ಹಂಚಿಕೊಂಡಿವೆ. ಪ್ರಶಸ್ತಿಯು 25,000 ರೂಪಾಯಿ ನಗದು (ಇಬ್ಬರಿಗೂ ಸೇರಿ) ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ತೀರ್ಪುಗಾರರಾಗಿ ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ್ ಮತ್ತು ಹಿರಿಯ ಲೇಖಕಿ ಅನುಪಮಾ ಪ್ರಸಾದ್ ಕಾರ್ಯ ನಿರ್ವಹಿಸಿದ್ದರು. ಸ್ಪರ್ಧೆಗೆ 54 ಕಾದಂಬರಿಗಳು ಬಂದಿದ್ದು, ಅಂತಿಮ ಹಂತಕ್ಕೆ ತುಂಬಾಡಿರಾಮಯ್ಯ ಮತ್ತು ಗುರುಪ್ರಸಾದ್ ಕಂಟಲಗೆರೆಯವರ ಕೃತಿಗಲ್ಲದೆ, ಧರಣೇಂದ್ರ ಕುರಕುರಿ ಇವರ ‘ಜಾತ್ರಿ’, ಡಾ. ಶುಭದಾ ಎಚ್.ಎಸ್. ಇವರ ‘ದೇವಿ ಕುರುಬತಿ’ ಹಾಗೂ ಡಾ. ಹಳೆಮನೆ ರಾಜಶೇಖರ್ ಇವರ ‘ಒಡಲುಗೊಂಡವರು’ ಕಾದಂಬರಿಗಳು ತಲುಪಿದ್ದವು.
ದ್ವಾರನಕುಂಟೆ ಪಾತಣ್ಣನವರ ಜನ್ಮದಿನವಾದ ದಿನಾಂಕ 14 ಮಾರ್ಚ್ 2025ರ ಸಂಜೆ 5-00ಕ್ಕೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಆಡಿಟೋರಿಯಂನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶೇಷಾದ್ರಿಪುರಂ ದತ್ತಿ ಶಿಕ್ಷಣ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ಇವರು ತಿಳಿಸಿದ್ದಾರೆ.