ಬೆಂಗಳೂರು : ಶಿರಸಿ ತಾಲೂಕಿನ ಸಣ್ಣಕೇರಿಯ ಪೂರ್ಣಿಮಾ ಭಟ್ಟ ಅವರ ‘ಕತೆ ಜಾರಿಯಲ್ಲಿರಲಿ’ ಅಪ್ರಕಟಿತ ಕಥಾಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆ ಮೋಳೆಯ ಡಾ. ವಿ.ಎ. ಲಕ್ಷ್ಮಣ ಅವರ ‘ಪರಿಮಳದ ಬಾಕಿ ಮೊತ್ತ’ ಅಪ್ರಕಟಿತ ಕವನ ಸಂಕಲನಕ್ಕೆ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪ್ರಕಟಿಸಲಾಗಿದೆ.
ಕಥೆ ವಿಭಾಗಕ್ಕೆ ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಹಾಗೂ ಕಾವ್ಯ ವಿಭಾಗಕ್ಕೆ ದೂರದರ್ಶನದ ನಿರ್ದೇಶಕಿ ಆರತಿ ಎಚ್.ಎನ್. ತೀರ್ಪುಗಾರರಾಗಿದ್ದರು. ಎರಡೂ ಪ್ರಶಸ್ತಿಗಳು ತಲಾ ರೂ.10,000/- ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ.
ಪೂರ್ಣಿಮಾ ಭಟ್ಟ ಸಣ್ಣಕೇರಿ :
‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಪೂರ್ಣಿಮಾ ಭಟ್ಟ ಸಣ್ಣಕೇರಿಯವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಇವರು ಕೆಲ ಕಾಲ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಕೆಲ ವರ್ಷ ಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಮಕ್ಕಳಿಗೆ ಮನೆಪಾಠ ಮಾಡುವ ಮೂಲಕ ಕನ್ನಡ ಕಲಿಸುತ್ತಿದ್ದಾರೆ. ಇವರು ಬರೆದ ಕತೆ, ಕವನ, ಲೇಖನಗಳು ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ.
ಡಾ. ಲಕ್ಷ್ಮಣ ವಿ.ಎ. :
‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ಡಾ. ಲಕ್ಷ್ಮಣ ವಿ.ಎ. ಇವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಪ್ರಕಟಿತ ಕೃತಿಗಳೆಂದರೆ ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’, ‘ಅಪ್ಪನ ಅಂಗಿ’, ‘ಕಾಯಿನ್ ಬೂತ್’ ಕವನ ಸಂಕಲನಗಳು, ‘ಗರ್ದಿ ಗಮ್ಮತ್ತು ನೋಡಾ ಗೋಲಗುಮ್ಮಟ ನೋಡಾ’, ‘ಮಿಲ್ಟ್ರಿ ಟ್ರಂಕು’ ಎಂಬ ಕಿರು ಪ್ರಬಂಧ ಸಂಕಲನಗಳು, ‘ಕವಲುಗುಡ್ಡ’ ಕಾದಂಬರಿ ಮತ್ತು ‘ಜಿರಿಮಳೆಯ ಕಣ್ಣು’ ಕಥಾ ಸಂಕಲನ.