ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪುರಸ್ಕಾರ’ ನೀಡುತ್ತಿದ್ದು, 2023ನೇಯ ಸಾಲಿಗೆ ಸಾಧಕರನ್ನು ಘೋಷಿಸಲಾಗಿದೆ. ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ಮಾರ್ಸೆಲ್ ಎಂ. ಡಿಸೋಜ ಮಂಗಳೂರು, ಕೊಂಕಣಿ ಕಲೆ ವಿಭಾಗದಲ್ಲಿ ಹ್ಯಾರಿ ಫರ್ನಾಂಡಿಸ್ ಮುಂಬಯಿ ಮತ್ತು ಕೊಂಕಣಿ ಜಾನಪದ ವಿಭಾಗದಲ್ಲಿ ಅಶೋಕ್ ದಾಮು ಕಾಸರಕೋಡು ಇವರನ್ನು ಆಯ್ಕೆ ಮಾಡಲಾಗಿದೆ.
ಪುಸ್ತಕ ಪುರಸ್ಕಾರಕ್ಕಾಗಿ ಕೊಂಕಣಿ ಕವನ ವಿಭಾಗದಲ್ಲಿ ಬಂಟ್ವಾಳದ ಲೇಖಕರಾದ ಮೇರಿ ಸಲೋಮಿ ಡಿ’ಸೋಜ ಇವರ ‘ಅಟ್ವೊ ಸುರ್’, ಕೊಂಕಣಿ ಸಣ್ಣ ಕತೆ ವಿಭಾಗದಲ್ಲಿ ಲೇಖಕರು ಫಾ. ರೊಯ್ಸನ್ ಫರ್ನಾಂಡಿಸ್ ಹಿರ್ಗಾನ್ ಇವರ ‘ಪಯ್ಲಿ ಭೆಟ್’ ಮತ್ತು ಕೊಂಕಣಿ ಭಾಷಾಂತರ ವಿಭಾಗದಲ್ಲಿ ಮಂಗಳೂರಿನ ಲೇಖಕ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಇವರ ‘ಎಕ್ಲೊ ಎಕ್ಸುರೊ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಪೇಟ ಸ್ಮರಣಿಕೆ, ಫಲಪುಷ್ಪಗಳನ್ನು ಹಾಗೂ ಪುಸ್ತಕ ಪುರಸ್ಕಾರವು ರೂ.25,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಸ್ಮರಣಿಕೆ ಫಲಪುಷ್ಪಗಳನ್ನು ಒಳಗೊಂಡಿದೆ. ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 10 ನವೆಂಬರ್ 2024ರಂದು ಹೊನ್ನಾವರದ ಕಾಸರಕೋಡಿನಲ್ಲಿರುವ ಶ್ಯಾನುಭಾಗ್ ರೆಸಿಡೆನ್ಸಿಯ ಆವರಣದಲ್ಲಿ ನಡೆಯಲಿದೆ.