ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’, ‘ಯಕ್ಷಸಿರಿ’ ಪ್ರಶಸ್ತಿ’, ‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ ಮತ್ತು ‘ಪುಸ್ತಕ ಬಹುಮಾನ ಪ್ರಶಸ್ತಿ’ಯನ್ನು ಪ್ರಕಟ ಮಾಡಲಾಗಿದ್ದು, ಎಲ್ಲಾ ಪ್ರಶಸ್ತಿಗಳನ್ನು ದಿನಾಂಕ 21 ಡಿಸೆಂಬರ್ 2025ರಂದು ಉಡುಪಿ ಜಿಲ್ಲೆ ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಯಕ್ಷಗಾನ ಕಲಾವಿದರಾದ ಬೆಳ್ತಂಗಡಿಯ ರೆಂಜಾಳ ರಾಮಕೃಷ್ಣ ರಾವ್ (ತೆಂಕುತಿಟ್ಟು), ಉತ್ತರ ಕನ್ನಡ ಜಿಲ್ಲೆಯ ವಿಷ್ಣು ಆಚಾರಿ ಬಳಕೂರು (ಬಡಾಬಡಗು), ಬಂಟ್ವಾಳದ ಡಿ. ಮನೋಹರ್ ಕುಮಾರ್ (ತೆಂಕುತಿಟ್ಟು), ಉಡುಪಿಯ ಮುರಲಿ ಕಡೆಕಾರ್ (ಬಡಗುತಿಟ್ಟು), ರಾಮನಗರದ ರಮೇಶ್ (ಮುಖವೀಣೆ, ಮೂಡಲಪಾಯ) ಇವರನ್ನು 2025ನೇ ಸಾಲಿನ ಅಕಾಡೆಮಿಯ ‘ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ರೂ.50 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಕಾಸರಗೋಡು ದಾಸನಡ್ಕ ರಾಮ ಕುಲಾಲ್ (ತೆಂಕುತಿಟ್ಟು), ಕುಂದಾಪುರದ ರಾಜೀವ ಶೆಟ್ಟಿ ಹೊಸಂಗಡಿ (ಬಡಗುತಿಟ್ಟು), ಬೆಳ್ತಂಗಡಿಯ ದಾಸಪ್ಪಗೌಡ ಗೈರುಕಟ್ಟೆ (ತೆಂಕುತಿಟ್ಟು), ಮಂಗಳೂರಿನ ಶ್ರೀನಿವಾಸ್ ಸಾಲ್ಯಾನ್ (ತೆಂಕುತಿಟ್ಟು), ವೇಣೂರಿನ ಸದಾಶಿವ ಕುಲಾಲ್ (ತೆಂಕುತಿಟ್ಟು), ಪುತ್ತೂರಿನ ಬೆಳ್ಳಾರೆ ಮಂಜುನಾಥ ಭಟ್ (ತೆಂಕುತಿಟ್ಟು), ದಕ್ಷಿಣ ಕನ್ನಡ ಜಿಲ್ಲೆಯ ಕೇಶವ ಶಕ್ತಿನಗರ (ತೆಂಕುತಿಟ್ಟು), ಲಕ್ಷ್ಮಣಗೌಡ ಬೆಳಾಲ್ (ತೆಂಕುತಿಟ್ಟು), ಮೈಸೂರಿನ ಸಣ್ಣಮಲ್ಲಯ್ಯ (ಮೂಡಲಪಾಯ), ತುಮಕೂರಿನ ಎ.ಜಿ. ನಾಗರಾಜು (ಮೂಡಲಪಾಯ) ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ’ಗೆ ಕುಂದಾಪುರದ ದೇವದಾಸ ರಾವ್ ಕೊಡ್ಲಿ (ಬಡಗುತಿಟ್ಟು) ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.25 ಸಾವಿರ ನಗದು ಒಳಗೊಂಡಿದೆ. 2024ನೇ ಸಾಲಿನ ‘ಪುಸ್ತಕ ಬಹುಮಾನ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಕೆರೆಮನೆ ಶಿವಾನಂದ ಹೆಗಡೆ, ಅಶೋಕ ಹಾಸ್ಯಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಆಯ್ಕೆ ಮಾಡಲಾಗಿದೆ. ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದ್ದ ಕಲಾವಿದರು ನಿಧನ ಹೊಂದಿರುವ ಕಾರಣ ಮುಂದಿನ ಸಭೆಯಲ್ಲಿ ತೀರ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
