ಧಾರವಾಡ : ಹಾವೇರಿಯ ಶ್ರೀ ಅಂಗರಾಜ ಸೊಟ್ಟಪ್ಪನವರ ಇವರ ‘ಅರ್ಧ ಮೊಳ ಹೂವು’ ಮತ್ತು ದಾವಣಗೆರೆಯ ಶ್ರೀ ರೇವಣಸಿದ್ದಪ್ಪ ಜಿ.ಆರ್್. ಇವರ ‘ಭವದ ಕಣ್ಣು’ ಕವನ ಸಂಕಲನಗಳ ಹಸ್ತಪ್ರತಿಗಳಿಗೆ ಬಿ.ಸಿ. ರಾಮಚಂದ್ರ ಶರ್ಮ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯು ತಲಾ ರೂ.10,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.
ಈ ಪ್ರಶಸ್ತಿಗಾಗಿ ಒಟ್ಟು ಐವತ್ತೇಳು ಕವನಸಂಕಲನಗಳ ಹಸ್ತಪ್ರತಿಗಳು ಬಂದಿದ್ದವು. ಅಂತಿಮ ಸುತ್ತಿನಲ್ಲಿ ಐದು ಕವನಸಂಕಲನಗಳಿದ್ದವು. ಈ ಐದು ಹಸ್ತಪ್ರತಿಗಳಲ್ಲಿ ಕವಿತೆಗಳ ಗುಣಮಟ್ಟವನ್ನು ಮಾತ್ರ ಆಯ್ಕೆಯ ಏಕೈಕ ಮಾನದಂಡವನ್ನಾಗಿಟ್ಟುಕೊಂಡು ಅತ್ಯುತ್ತಮವಾದ ಎರಡು ಕವನಸಂಕಲನಗಳಿಗೆ ಪ್ರಶಸ್ತಿ ನೀಡಲಾಗಿದೆಯೆಂದು ತೀರ್ಪುಗಾರರಾದ ಡಾ. ಸುಭಾಷ್ ಪಟ್ಟಾಜೆ ಕಾಸರಗೋಡು ಮತ್ತು ಕುಮಾರಿ ಭವ್ಯ ಭಟ್ ಮಡಿಕೇರಿ ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ಶ್ರೀ ಲಿಂಗರಾಜ ಸೊಟ್ಟಪ್ಪನವರ ಮತ್ತು ಶ್ರೀ ರೇವಣಸಿದ್ದಪ್ಪ ಇವರಿಗೆ ಸಾಹಿತ್ಯ ಗಂಗಾ ಮುಖ್ಯಸ್ಥರಾದ ಯುವ ವಿಮರ್ಶಕ ಶ್ರೀ ವಿಕಾಸ ಹೊಸಮನಿ ಮತ್ತು ಸಂಚಾಲಕರಾದ ಯುವ ಲೇಖಕ ಡಾ. ಸುಭಾಷ್ ಪಟ್ಟಾಜೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರಶಸ್ತಿ ಪುರಸ್ಕೃತ ಕವನಸಂಕಲನಗಳ ಬಿಡುಗಡೆ ಸಮಾರಂಭ ಸಾಂಸ್ಕೃತಿಕ ಕೇಂದ್ರವಾದ ಧಾರವಾಡದಲ್ಲಿ ಒಟ್ಟಿಗೇ ನಡೆಯಲಿದ್ದು, ಖ್ಯಾತ ಸಾಹಿತಿಗಳಾದ ಪ್ರೊ. ರಾಘವೇಂದ್ರ ಪಾಟೀಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀ ವಿಕಾಸ ಹೊಸಮನಿಯವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತ್ಯ ಗಂಗಾ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಮತ್ತು ಸಹೃದಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.