ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿರುವ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅವರ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿ ಆಯ್ಕೆಯಾಗಿದೆ.
ಜಿಲ್ಲೆಯ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟು ಗೂಡಿಸಿ ಅತಿ ಹೆಚ್ಚು ಅಂಕ ಪಡೆದ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯನ್ನು ಆಯ್ಕೆ ಮಾಡಿದೆ.
ಡಾ. ಕೆ.ಬಿ. ಸೂರ್ಯಕುಮಾರ್ ಅವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿದ್ದು, 90ರ ದಶಕದಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿದ್ದ ಏಕೈಕ ವಿಧಿ ವಿಜ್ಞಾನ ಪರಿಣಿತರಾಗಿದ್ದರು. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆದ ಅಸ್ವಾಭಾವಿಕ ಮರಣಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ಪೊಲೀಸರಿಗೆ ಅನೇಕ ಕೊಲೆಗಳನ್ನು ಭೇದಿಸಲು ಸಹಾಯ ಮಾಡಿರುವ ಇವರು, ಕೊಡಗು ಸರಕಾರಿ ವೈದ್ಯರ ಸಂಘ ಮತ್ತು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ತಿಳಿಸಿದ್ದಾರೆ.
