ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ’ ಪ್ರಕಟವಾಗಿದೆ. ಒಟ್ಟು ನಾಲ್ಕು ವರ್ಷಗಳ ಪ್ರಶಸ್ತಿ ಘೋಷಣೆಯಾಗಿದ್ದು, 2020, 2021, 2022 ಹಾಗೂ 2023ನೆಯ ಸಾಲಿಗೆ ಅನುಕ್ರಮವಾಗಿ ಅಲಕಾ ಕಟ್ಟೆಮನೆಯವರ ‘ಹೊರಳು ಹಾದಿಯ ನೋಟ’ ಕಥಾ ಸಂಕಲನ, ಎಲ್.ವಿ. ಶಾಂತಕುಮಾರಿಯವರ ‘ಎಪಿಕ್ಟೆಟಸ್’ ಅನುವಾದ ಕೃತಿ, ಹೆಚ್.ಆರ್. ಸುಜಾತಾ ಅವರ ‘ಮಣಿಬಾಲೆ’ ಕಾದಂಬರಿ ಹಾಗೂ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾಸಂಕಲನ ಆಯ್ಕೆಯಾಗಿವೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.
ಅಲಕಾ ಕಟ್ಟೆಮನೆ
ಎಲ್.ವಿ. ಶಾಂತಕುಮಾರಿ
ಹೆಚ್.ಆರ್. ಸುಜಾತಾ
ಅನುಪಮಾ ಪ್ರಸಾದ್
ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದ್ದು, ದಿನಾಂಕ 08 ನವೆಂಬರ್ 2024ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಖ್ಯಾತ ನ್ಯಾಯವಾದಿಗಳಾದ ಹೇಮಲತಾ ಮಹಿಷಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಖ್ಯಾತ ಅನುವಾದಕಿ ಹಾಗೂ ಕತೆ, ಕಾದಂಬರಿಗಾರ್ತಿಯಾಗಿದ್ದ ಎಚ್.ವಿ. ಸಾವಿತ್ರಮ್ಮನ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿಯನ್ನು ಇಡಲಾಗಿದ್ದು, ಅನುವಾದ ಸಾಹಿತ್ಯ ಹಾಗೂ ಕತೆ, ಕಾದಂಬರಿ ಸೇರಿದಂತೆ ಒಂದೊಂದು ಪ್ರಕಾರಗಳಿಗೆ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು ನಾಲ್ಕು ವರ್ಷಗಳಿಗೆ ಕೃತಿಗಳನ್ನು ಆಹ್ವಾನಿಸಿದ್ದು, ಆಯಾ ಪ್ರಕಾರಕ್ಕೆ ಸಾಕಷ್ಟು ಕೃತಿಗಳು ಬಂದಿದ್ದು, ಅಂತಿಮವಾಗಿ ಈ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪತ್ರಕರ್ತ ಹಾಗೂ ಕತೆಗಾರ ದೇವುಪತ್ತಾರ, ಉಪನ್ಯಾಸಕರಾದ ರುದ್ರೇಶ್ ಅದರಂಗಿ ಹಾಗೂ ಕಿರುತೆರೆ ನಟಿ, ಉಪನ್ಯಾಸಕಿ ವತ್ಸಲಾ ಮೋಹನ್ ಆಯ್ಕೆ ಸಮಿತಿಯಲ್ಲಿದ್ದರು.