Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ವಿಶ್ವವಿದ್ಯಾನಿಲಯ ‘ಕನಕ ಕೀರ್ತನ ಗಂಗೋತ್ರಿ’ ಫಲಿತಾಂಶ ಪ್ರಕಟ ಇಪ್ಪತ್ತು ಗಾಯಕರಿಗೆ ಕನಕ ಪುರಸ್ಕಾರ
    Awards

    ಮಂಗಳೂರು ವಿಶ್ವವಿದ್ಯಾನಿಲಯ ‘ಕನಕ ಕೀರ್ತನ ಗಂಗೋತ್ರಿ’ ಫಲಿತಾಂಶ ಪ್ರಕಟ ಇಪ್ಪತ್ತು ಗಾಯಕರಿಗೆ ಕನಕ ಪುರಸ್ಕಾರ

    April 6, 2024Updated:June 18, 2024No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 20 ಗಾಯಕರು ಮತ್ತು ಮೂರು ತಂಡಗಳು 2023-24ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನಕ ಕೀರ್ತನ ಗಂಗೋತ್ರಿಯಲ್ಲಿ ತೋನ್ಸೆ ಪುಷ್ಕಳ ಕುಮಾರ್, ರತ್ನಾವತಿ ಜೆ. ಬೈಕಾಡಿ, ಸುಮನ ಪ್ರಸಾದ್ ಮೂಡಬಿದ್ರೆ, ಪನ್ನಗ ಭಟ್ ಶಿರಸಿ, ಶ್ರೀದೇವಿ ಕಲ್ಲಡ್ಕ ಮತ್ತು ಕಾರ್ತಿಕ್ ಮಂಗಳೂರು ಮೌಲ್ಯಮಾಪಕರಾಗಿ ಭಾಗವಹಿಸಿದ್ದರು. ಕನಕ ಪುರಸ್ಕಾರವು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು 2000 ನಗದು ಬಹುಮಾನವನ್ನು ಹೊಂದಿದೆ.

    ಪ್ರೌಢ ಶಾಲಾ ವಿಭಾಗ :
    ಪೂರ್ವಿ ಬಿ.ಎಸ್.
    ಇವರು ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಅತ್ತಾವರದ ಶ್ರೀ ಬಿ. ಶೇಷಪ್ಪ ಬಂಬಿಲ ಮತ್ತು ಶ್ರೀಮತಿ ನಾಗರತ್ನ ಕೆ. ಯಸ್ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಸ್ತುತ ಇವರು ಕರ್ನಾಟಕ ಶಾಸ್ತ್ರಿಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಇವರ ಗಾನಂ ವೇಶಂ, ಮಂಗಳಾದೇವಿಯ ರಾಮಕೃಷ್ಣ ಮಿಷನ್ ಆಶ್ರಮದ ಅಮೃತ್ ಮಹೋತ್ಸವ ಸಂಗೀತ ಮತ್ತು ಸತ್ಯನಾರಾಯಣ ಭಜನಾ ಮಂಡಳಿ ಬಜಾಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗಳಿಸಿ, ಶಾಲಾ ಮಟ್ಟದ, ತಾಲ್ಲೂಕು ಮಟ್ಟದ ಮತ್ತು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿರುತ್ತಾರೆ ಹಾಗೂ ಬಾಲ್ಯದಿಂದಲೇ ವಿವಿಧ ವೇದಿಕೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿರುತ್ತಾರೆ.

    ತನ್ವಿ ಕಾವೂರು :
    ತನ್ವಿ ಕಾವೂರು ಇವರು ಶ್ರೀ ರಘುನಾಥ್ ಎನ್. ಮತ್ತು ಶ್ರೀಮತಿ ಗೀತಾಕ್ಷಿ ಕೆ.ಆರ್. ಇವರ ಸುಪುತ್ರಿ. ಇವರ ಪ್ರಧಾನ ಆಸಕ್ತಿ ಸಂಗೀತ. ಮೊದಲು ತಾನೇ ಸ್ವತಃ ಆಸಕ್ತಿಯಿಂದ ಅಲ್ಲಿ ಇಲ್ಲಿ ಕೇಳಿ ಸಂಗೀತ ಅಭ್ಯಾಸ ಮಾಡಿದರೂ, ಮುಂದೆ ಗುರು ಮುಖೇನ ಸಂಗೀತಾಭ್ಯಾಸ ಮುಂದುವರಿಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ. ಕೆಲವು ವರ್ಷ ಶಾಸ್ತ್ರೀಯ ನೃತ್ಯವನ್ನೂ ಅಭ್ಯಾಸ ಮಾಡಿರುವ ಇವರಿಗೆ ಚಿತ್ರಕಲೆಯಲ್ಲಿಯೂ ಆಸಕ್ತಿ ಇದೆ. ಹಲವಾರು ಸಂಗೀತ ಸ್ಪರ್ಧೆಗಳು,ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಇವರು ಕೇಂದ್ರೀಯ ವಿದ್ಯಾಲಯ ಪಣಂಬೂರು ಇಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

    ನಿಹಾಲ್ :
    ಶ್ರೀ ಸುಕೇಶ್ ಕುಮಾರ್ ಮತ್ತು ಶ್ರೀಮತಿ ಮಲ್ಲಿಕಾ ದಂಪತಿಯ ಸುಪುತ್ರನಾಗಿರುವ ನಿಹಾಲ್ ಮೂಡಬಿದ್ರೆಯ ರೋಟರಿ ಇಂಗ್ಲೀಷ್ ಮೀಡಿಯಂ ಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಯಕ್ಷಗಾನ, ಕೀಬೋರ್ಡ್, ನಾಟಕ, ಸಂಗೀತ ಹಾಗೂ ಕವನ ಬರೆಯುವುದು ಇವರ ಹವ್ಯಾಸಗಳು. ಕೀಬೋರ್ಡ್ ಗುರುಗಳಾದ ಸಂಸ್ಕೃತ ವಿದ್ವಾನ್ ಶ್ರೀ ಗಜಾನನ ಮರಾಟೆ ಇವರು ಸಂಗೀತವನ್ನು, ಶಾಸ್ತ್ರೀಯ ಸಂಗೀತವನ್ನು ಶ್ರೀಮತಿ ತುಳಸಿ ಪೇಜತೈ, ಸುಗಮ ಸಂಗೀತವನ್ನು ಝೀ ಕನ್ನಡ ಸರಿಗಮಪದಲ್ಲಿ ಆಯ್ಕೆಯಾಗಿರುವ ವಿದ್ವಾನ್ ಯಶವಂತ್, ಯಕ್ಷಗಾನ ಅಭ್ಯಾಸವನ್ನು ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ನಾಟಕ ಹಾಗೂ ಕವನ ಬರೆಯುವುದನ್ನು ಮೋಹನ್ ಹೋಸ್ಮಾರ್ ಇವರಿಂದ ಕಲಿಯುತ್ತಿದ್ದಾರೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಬೆಸ್ಟ್ ಅವಾರ್ಡ್ ಪಡೆದ ಇವರು ರಾಜ್ಯ ಮಟ್ಟದ ಭಾವಗೀತ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದಾರೆ.

    ಪದವಿ ಪೂರ್ವ ವಿಭಾಗ :
    ಸುದೀಕ್ಷಾ ಆರ್.
    ಸುದೀಕ್ಷಾ ಆರ್. ಇವರು 6ನೇ ವರ್ಷದ ಎಳವೆಯಲ್ಲಿಯೇ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ, 10ನೇ ವಯಸ್ಸಿನಲ್ಲಿ ಕಛೇರಿ ನೀಡಿದ ಪ್ರತಿಭಾವಂತೆ. ಇವರು ಎನ್.ಐ.ಟಿ.ಕೆ.ಯಲ್ಲಿ ನಡೆದ ಸ್ಪಿಕ್ ಮೆಕೆ ಆರಾಧನಾ ಕಾರ್ಯಕ್ರಮದಲ್ಲಿ, ಸಂಗೀತ ಪರಿಷತ್ ಮಂಗಳೂರು ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಮತ್ತು ಆಳ್ವಾಸ್ ನುಡಿಸಿರಿಯಲ್ಲಿ ಬಹುಪಾಲು ಬಹುಮಾನವನ್ನು ತನ್ನದಾಗಿಸಿಕೊಂಡವರು. ಭಾವಗೀತೆ, ಭಕ್ತಿಗೀತೆ ಜನಪದ ಗೀತೆಗಳ ದೈವದತ್ತ ಕಂಠಸಿರಿ ಈಕೆಯದ್ದು. 4 ವರ್ಷಗಳಿಂದ ಮೃದಂಗ ಅಭ್ಯಾಸ, ಯಕ್ಷಗಾನದ ಹಿಮ್ಮೇಳವಾದ ಭಾಗವತಿಗೆ, ಚೆಂಡೆ, ತಾಳ, ಮದ್ದಳೆಯೊಂದಿಗೆ ನಾಟ್ಯವನ್ನು ಅಭ್ಯಾಸ ಮಾಡಿ ವೇದಿಕೆಯ ಮೇಲೆ ಲಕ್ಷ್ಮೀದೇವಿಯಾಗಿ, ಹನುಮಂತನಾಗಿ, ಕೃಷ್ಣನಾಗಿ ಪ್ರೇಕ್ಷಕರ ಮನ ಸೂರೆಗೊಂಡ ಸುದೀಕ್ಷಾ ಆರ್. ಇವರು ಶ್ರೀ ರಾಜೇಶ್ ಪಿ. ಮತ್ತು ಶ್ರೀಮತಿ ರಮ್ಯಾ ಆರ್. ದಂಪತಿಯ ಸುಪುತ್ರಿ. ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಅಧ್ಯಯನ ಮಾಡುತ್ತಿದ್ದಾರೆ.

    ಮೇಧಾ ಉಡುಪ
    ಮೇಧಾ ಉಡುಪ ಕೆನರಾ ಪಿಯು ಕಾಲೇಜು ಮಂಗಳೂರು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಏಳು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ಈಗಾಗಲೇ ಹಲವು ಕಡೆ ಕಛೇರಿಗಳನ್ನು ನೀಡಿದ್ದು, ಕೊಳಲು ನುಡಿಸುವುದನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹೆಚ್ಚಾಗಿ ಪ್ರಥಮ ಬಹುಮಾನಗಳೊಂದಿಗೆ ಅಲ್ಲಿಂದ ಹೊರಬರುವ ಇವರು ಶ್ರೀ ರಾಜಗೋಪಾಲ್ ಉಡುಪ ಮತ್ತು ಶ್ರೀಮತಿ ಅಂಜನಾರವರ ಸುಪುತ್ರಿ.

    ಭೂಮಿಕಾ ಹೆಗಡೆ
    ಶ್ರೀಯುತ ಶ್ರೀಧರ ಹೆಗಡೆ ಮತ್ತು ಶ್ರೀಮತಿ ಗೀತಾ ಹೆಗಡೆ ಇವರ ಸುಪುತ್ರಿಯಾಗಿರುವ ಇವರು ಮಂಗಳೂರಿನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಶ್ರೀಮತಿ ಜಯಶ್ರೀ ಅರವಿಂದ ಹಾಗೂ ವಿದ್ವಾನ್ ಮಹಾಬಲೇಶ್ವರ ಭಾಗವತ್ ಇವರ ಶಿಷ್ಯೆಯಾಗಿದ್ದಾರೆ.

    ಪದವಿ ವಿಭಾಗ :
    ಕೀರ್ತನ್ ನಾಯ್ಗ
    ಕೀರ್ತನ್ ನಾಯ್ಗ ಕೋಟೆಕಾರು ಇವರು ಹಂಪನಕಟ್ಟದ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ತನ್ನ 8ನೇ ವಯಸ್ಸಿನಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದು, ಬೇರೆ ಬೇರೆ ವೇದಿಕೆಗಳಲ್ಲಿ ಕಛೇರಿಗಳನ್ನು ನೀಡಿದ್ದಾರೆ ಮತ್ತು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಸಂಗೀತದೊಂದಿಗೆ ತಬ್ಲಾ ಮತ್ತು ಹಾರ್ಮೋನಿಯಂ ಕೂಡ ಗುರು ಮುಖೇನ ತರಬೇತಿ ಪಡೆಯುತ್ತಿರುವ ಇವರು ಶ್ರೀ ಹರಿಶ್ಚಂದ್ರ ಮತ್ತು ಶ್ರೀಮತಿ ಸತ್ಯ ನಾಯ್ಗ ದಂಪತಿಗಳ ಸುಪುತ್ರ.

    ಕು. ಆಶ್ವೀಜಾ ಉಡುಪ
    ಕಿನ್ನಿಗೋಳಿಯ ವೈದ್ಯರಾದ ಡಾ. ರತೀಶ್ ಉಡುಪ ಹಾಗೂ ಶ್ರೀಮತಿ ಅರುಣಾ ಉಡುಪ ಇವರ ಸುಪುತ್ರಿ. ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದು, ಶ್ರೀಮತಿ ಜಯಶ್ರಿ ಆರ್. ಭಟ್ ಪೆರ್ಲ ಇವರಲ್ಲಿ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದಾರೆ. ಶಿವಮೊಗ್ಗ ಶ್ರೀ ಶಾರದಾ ಸಂಗೀತ ವಿದ್ಯಾಲಯದ ಮನೋಧರ್ಮ ಸಂಗೀತ ಸ್ಪರ್ಧೆ, ಬೆಂಗಳೂರು ಗಾಯನ ಸಮಾಜ ಮತ್ತು ಬೆಂಗಳೂರಿನ ಶ್ರೀ ತ್ಯಾಗರಾಜ ಗಾನಸಭಾ ನಡೆಸಿದ ಸೀನಿಯರ್ ವಿಭಾಗದ ಸಂಗೀತ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮಂಗಳೂರಿನ ರಾಗ ತರಂಗ ಶಾಸ್ತ್ರೀಯ ಸಂಗೀತ ವಿಭಾಗದ ಪ್ರಶಸ್ತಿ ಮತ್ತು 2020ರಲ್ಲಿ ಕನಕಪೀಠ ಏರ್ಪಡಿಸಿದ ಕನಕದಾಸರ ಕೀರ್ತನೆಗಳ ಗಾಯನ ಸ್ಪರ್ಧೆಯಲ್ಲಿ ಕನಕ ಪುರಸ್ಕಾರಕ್ಕೆ ಪಾತ್ರಳಾಗಿದ್ದು, 2020-21ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನವನ್ನು ಪಡೆದಿರುತ್ತಾಳೆ.

    ಅನನ್ಯಲಕ್ಷ್ಮಿ ಎನ್.
    ಶ್ರೀ ವಸಂತ ಕುಮಾರ್ ನಾಟಿಕೆರೆ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಯ ಸುಪುತ್ರಿಯಾಗಿರುವ ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ 3ನೇ ವರ್ಷ ವಿದ್ಯಾರ್ಥಿಯಾಗಿದ್ದಾರೆ. ವಿದ್ವಾನ್ ಕಾಂಚನ ಈಶ್ವರ ಭಟ್ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರದ ಪ್ರತಿಭಾ ಕಾರಂಜಿ ಪ್ರಶಸ್ತಿ ಮತ್ತು ಐದು ಬಾರಿ ಪ್ರತಿಭಾ ರತ್ನ ಪ್ರಶಸ್ತಿಗಳನ್ನು ಹಾಗೂ ಅಂತರ್ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

    ರೋಹಿತ್ ಕಾಮತ್
    ಎನ್.ಎಂ.ಎ.ಎಂ.ಐ.ಟಿ. ನಿಟ್ಟೆ ಕಾರ್ಕಳ ಇಲ್ಲಿ ಕೊನೆಯ ವರ್ಷದ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಗುರುಗಳಾದ ಜಿ. ವಿಠ್ಠಲದಾಸ್ ಭಟ್ ಉಡುಪಿ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸುಮಾರು 11 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ.

    ಸ್ನಾತಕೋತ್ತರ ವಿಭಾಗ :
    ಸುಶಾನ್ ಸಾಲಿಯಾನ್
    ಶ್ರೀ ಸುಶಾನ್ ಸಾಲಿಯಾನ್ ಪಣಂಬೂರು ಇವರು ಶ್ರೀ ಸುಂದರ ಹಾಗೂ ಶ್ರೀಮತಿ ಭವಾನಿಯವರ ಸುಪುತ್ರರಾಗಿದ್ದಾರೆ. ಪ್ರಸ್ತುತ ನಿಟ್ಟೆಯಲ್ಲಿ ಎಂ.ಟೆಕ್ ಮಾಡುತ್ತಿರುವ ಇವರು ಧ್ಯಾನ ಸಂಗೀತ ಅಕಾಡೆಮಿಯ ಗುರುಗಳಾದ ವಿದ್ವಾನ್ ಶ್ರೀ ಅಮಿತ್ ಕುಮಾರ್ ಬೆಂಗ್ರೆ ಇವರ ಬಳಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಸುಶಾನ್ ಸಾಲಿಯಾನ್ ವಿದ್ಯಾರ್ಥಿ ಜೀವನದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.

    ಶ್ರೀವರದಾ ಪಿ.
    ಶ್ರೀವರದಾ ಪಟ್ಟಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡುತ್ತಿರುವ ಇವರು 15 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಮತ್ತು 7 ವರ್ಷಗಳಿಂದ ವಯೋಲಿನ್ ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 7 ವರ್ಷಗಳಿಂದ ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲೂ ತರಬೇತು ಪಡೆಯುತ್ತಿದ್ದಾರೆ. ಹಲವು ಘನವೆತ್ತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ವೈಶಿಷ್ಟ್ಯ ಇವರದ್ದು. ಇವರು ಶ್ರೀ ಮಹಾಲಿಂಗ ಭಟ್ ಹಾಗೂ ಶ್ರೀಮತಿ ಗೌರಿ ಇವರ ಸುಪುತ್ರಿ.

    ವಿಭಾಶ್ರೀ ಎಂ.ಎಸ್.
    ವಿಭಾಶ್ರೀ ಎಂ.ಎಸ್. ಇವರು ಶ್ರೀ ಸುರೇಶ್ ಎ. ಮತ್ತು ಶ್ರೀಮತಿ ಅನುಪಮ ಡಿ. ಇವರ ಸುಪುತ್ರಿ. 7ನೇ ವರ್ಷದ ಎಳವೆಯಲ್ಲಿ ಸಂಗೀತ ಅಭ್ಯಾಸ ಆರಂಭ ಮಾಡಿದ ಇವರು 10ನೆಯ ತರಗತಿಯಲ್ಲಿರುವಾಗಲೇ ಶಾಸ್ತ್ರೀಯ ಸುಗಮ ಸಂಗೀತ ಕಛೇರಿ ಮಾಡಿದ ಅನುಭವ. ಬೆಂಗಳೂರಿನ ಜ್ಞಾನ ಮಂದಾರ ಅಕಾಡಮಿಯ ‘ಅರಳು ಮಲ್ಲಿಗೆ’ ಪ್ರಶಸ್ತಿ, ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ‘ಪ್ರತಿಭಾ ರತ್ನ’ ಪ್ರಶಸ್ತಿ, ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ. ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಸನ್ಮಾನ ಸ್ವೀಕರಿಸಿದ ಗೌರವ ಇವರಿಗಿದೆ.

    ಪ್ರಜ್ವಲ್
    ಪ್ರಜ್ವಲ್ ಇವರು ಕಿನ್ನಿಗೋಳಿ ನಿವಾಸಿಗಳಾದ ಶ್ರೀ ದಯಾನಂದ ಹಾಗೂ ಶ್ರೀಮತಿ ಸೌಮಿನಿ ದಂಪತಿಯ ಸುಪುತ್ರ. ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಇವರು ಪ್ರಸ್ತುತ ಪೂರ್ಣಕಾಲಿಕ ಸಂಶೋಧನಾರ್ಥಿಯಾಗಿರುತ್ತಾರೆ. ಹಿಂದುಸ್ತಾನಿ ಸಂಗೀತ ಅಭ್ಯಾಸವನ್ನು ವಿದ್ವಾನ್ ಶ್ರೀ ಅಮಿತ್ ಕುಮಾರ್ ಬೆಂಗ್ರೆ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

    ಅಧ್ಯಾಪಕ ವಿಭಾಗ :
    ಸ್ವಾತಿ ಎನ್.ಎಸ್.
    ಇವರು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿದ್ದಾರೆ. ಮೈಸೂರು ಯೂನಿವರ್ಸಿಟಿಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುತ್ತಾರೆ. ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆಯಾಗಿದ್ದಾರೆ.

    ಪೃಥ್ವಿ ಶೆಣೈ
    ಶ್ರೀ ಪುಂಡಲೀಕ ನಾಯಕ್ ಮತ್ತು ಶ್ರೀಮತಿ ಪ್ರತಿಮಾ ನಾಯಕ್ ಇವರ ಸುಪುತ್ರಿಯಾಗಿರುವ ಪೃಥ್ವಿ ಶೆಣೈಯವರು ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರು ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎರಡರಲ್ಲೂ ಆಸಕ್ತಿ ಹೊಂದಿದ್ದಾರೆ. ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿವಿಧ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಗೆದ್ದಿರುವ ಇವರು 2004ರಲ್ಲಿ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಕೇರಳ ಸರ್ಕಾರದಿಂದ ‘ಕಲಾತಿಲಕಂ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನಕ ಕೀರ್ತನಾ ಗಾಯನದಲ್ಲಿ 4ನೇ ಬಾರಿ ಭಾಗವಹಿಸಿ ಬಹುಮಾನಿತರಾಗಿರುವ ಹೆಗ್ಗಳಿಕೆ ಇವರದು.

    ಶೋಭಾ ಐತಾಳ್
    ಶ್ರೀಮತಿ ಶೋಭಾ ಐತಾಳ್ ಇವರು ಕನ್ನಡ ಪ್ರೌಢಶಾಲಾ ಶಿಕ್ಷಕಿಯಾಗಿದ್ದು, ಪ್ರಸ್ತುತ ಸರಕಾರಿ ಪ್ರೌಢಶಾಲೆ ಕಸಬಾ ಬೆಂಗ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ, ಯಕ್ಷಗಾನ ತಾಳಮದ್ದಳೆಯ ಭಾಗವತಿಕೆ ಮತ್ತು ಗುಂಪು ಭಜನೆಯಲ್ಲಿ ಅನುಭವವಿರುವ ಇವರು ಬಲ್ಮಠ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಜಿಲ್ಲಾ ಮಟ್ಟದ ಯುವಜನೋತ್ಸವ, ಕಲೋತ್ಸವ ಇತ್ಯಾದಿ ಪ್ರತಿಷ್ಟಿತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಅನುಭವ ಹೊಂದಿರುವ ಇವರು ವಾಗೀಶ್ವರಿ ಯಕ್ಷ ಕಲಾವರ್ಧಕ ಸಂಘ ರಥಬೀದಿ ಮಂಗಳೂರು ಇವರಿಂದ ‘ವಾಗೀಶ್ವರಿ ಪ್ರಶಸ್ತಿ’ ಮತ್ತು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ವತಿಯಿಂದ ‘ಶಿಕ್ಷಕ ಕಲಾ ಪ್ರಶಸ್ತಿ’ ಪಡೆದಿರುತ್ತಾರೆ.

    ಅಧ್ಯಾಪಕೇತರ ವಿಭಾಗ :
    ಶ್ರೀ ರವಿದಾಸ ಕಾರ್ಕಳ
    ಶ್ರೀ ಮಂಜುನಾಥ ದಾಸ್ ಮತ್ತು ಶ್ರೀಮತಿ ವನಜಾ ದಾಸ್ ಇವರ ಸುಪುತ್ರರಾಗಿರುವ ಶ್ರೀ ರವಿದಾಸ್ ಇವರು ಕಾರ್ಕಳ ಭುವನೇಂದ್ರ ಪದವಿ ಕಾಲೇಜಿನ ಸಿಬ್ಬಂದಿಯಾಗಿದ್ದಾರೆ. ಇವರು ಯಾವುದೇ ಸಂಗೀತ ತರಗತಿಗೆ ಹೋಗಿರುವುದಿಲ್ಲ. ವಿದ್ಯಾಭೂಷಣರ ಗೀತೆ ಕೇಳುವುದು ಇವರ ಹವ್ಯಾಸ. ಉಡುಪಿ ಶ್ರೀ ಪುತ್ತಿಗೆ ಮಠದ ವತಿಯಿಂದ ನಡೆದ ಪುರಂದರ ದಾಸರ ಕೀರ್ತನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಈ ಮೊದಲು ಕನಕ ಕೀರ್ತನ ಗಂಗೋತ್ರಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.

    ಯಶವಂತ
    ಶ್ರೀ ಯಶವಂತ ಇವರು ಶ್ರೀ ಚಿಕ್ಕಯ್ಯ ಹಾಗೂ ಶ್ರೀಮತಿ ಕಮಲಾ ದಂಪತಿಯ ಸುಪುತ್ರ. ಮೂರು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿರುವ ಇವರು ಯಾವುದೇ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವುದಿಲ್ಲ. ದೈವದತ್ತವಾಗಿ ಬಂದ ಕಂಠಸಿರಿಯೇ ಇವರ ಆಸ್ತಿ. ಆರ್ಕೆಸ್ಟ್ರಾಗಳಲ್ಲಿ ಹಾಡುವುದನ್ನು ಹವ್ಯಾಸವಾಗಿಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿ “ಕನಕ ಕೀರ್ತನ ಗಂಗೋತ್ರಿ” ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ.

    ಸುಮಂಗಲಿ
    ರಾಧಾಕೃಷ್ಣ ರಾವ್‌ ಟಿ.ಡಿ. ಇವರ ಪತ್ನಿಯಾದ ಶ್ರೀಮತಿ ಸುಮಂಗಲಿಯವರು ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಕೀ ಬೋರ್ಡ್ ತರಬೇತಿ ಪಡೆಯುತ್ತಿರುವ ಇವರು ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿದ್ದಾರೆ. ಈ ಹಿಂದೆ ಎರಡು ಮೂರು ಬಾರಿ ವಿ.ವಿ. ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ.

    ಸಾರ್ವಜನಿಕ ವಿಭಾಗ ಸಮೂಹ ಗಾಯನ :
    ಬಂಟರ ಬಳಗ ಜಪ್ಪಿನಮೊಗರು
    ವಾಣಿ ಶೆಟ್ಟಿ, ಗುಣವೇಣಿ ಶೆಟ್ಟಿ, ಸುನೀತ ಶೆಟ್ಟಿ, ರಂಜಿನಿ ಶೆಟ್ಟಿ, ಪ್ರಮೋದಾ ಶೆಟ್ಟಿ, ವಿದ್ಯಾ ಶೆಟ್ಟಿ, ರಮಣಿ ಶೆಟ್ಟಿ, ಗಾಯತ್ರಿ ಮನಮೋಹನ್ ಎಂಟು ಮಂದಿ ಮಹಿಳೆಯರು 2023ರಲ್ಲಿ ಜಪ್ಪಿನಮೊಗರು ಗಣೇಶೋತ್ಸವ ವೇದಿಕೆಯಲ್ಲಿ ಭಜನೆ ಹಾಡುವುದರೊಂದಿಗೆ ‘ಬಂಟರ ಬಳಗ ಜಪ್ಪಿನಮೊಗರು’ ಎಂಬ ಭಜನಾ ತಂಡ ಅನಾವರಣಗೊಂಡಿತು. ಈವರೆಗೆ ಹಲವಾರು ದೇವಸ್ಥಾನಗಳು, ಭಜನಾ ಮಂದಿರಗಳಲ್ಲಿ ಭಜನಾ ಸೇವೆ ಸಲ್ಲಿಸಿದ ಅನುಭವ ಇವರದು. ಕಡ್ತಿಲ ಗೋಪಾಲಕೃಷ್ಣ ಮಠದಲ್ಲಿ ಜಪ್ಪಿನಮೊಗರು ಬಂಟರ ಬಳಗ ಭಜನೆ ಹಾಡಿದುದನ್ನು ಕೇಳಿದ ಉಡುಪಿಯ ಅದಮಾರು ಮಠದ ಶ್ರೀಗಳಾದ ಶ್ರೀಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಈ ತಂಡವನ್ನು ಪುರಸ್ಕರಿಸಿದ್ದಾರೆ. ಇದೀಗ ಈ ತಂಡ ಕನಕ ಕೀರ್ತನ ಗಂಗೋತ್ರಿಯ ಸಾರ್ವಜನಿಕ ವಿಭಾಗದ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕನಕ ಪುರಸ್ಕಾರಕ್ಕೆ ಪಾತ್ರವಾಗಿದೆ.

    ನಾದಮೇದ ತಂಡ ಮಂಗಳೂರು
    ಜಿಲ್ಲೆಯ ಹವ್ಯಾಸಿ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ರೂಪುಗೊಂಡ ತಂಡ ‘ನಾದಮೇದ’. ಮಂಗಳೂರಿನ ಕಟೀಲು ಮೇಳದ ಪ್ರಸಿದ್ಧ ಮದ್ದಳೆ ವಾದಕರಾದ ಜಯಕರ ಪಂಡಿತ ಇವರ ನೇತೃತ್ವದಲ್ಲಿ ಈ ತಂಡ ರಚನೆಯಾಗಿದೆ. ಹಾಡುಗಾರಿಕೆಯ ಗುರುಗಳಾದ ಹೇಮಂತ್ ಅಮೀನ್, ಹಾರ್ಮೋನಿಯಂ ವಾದಕರಾದ ರಾಘವ ಪುತ್ರನ್, ಹರೀಶ್ ಶೆಟ್ಟಿ ಹಾಗೂ ಪ್ರಸಾದ ಪಂಡಿತ್ ಈ ತಂಡದಲ್ಲಿದ್ದಾರೆ.

    ಶ್ರೀ ರಾಮಾರ್ಪಣ ಭಜನಾ ಮಂಡಳಿ ಮುಡಿಪು
    ‘ಶ್ರೀ ರಾಮಾರ್ಪಣ ಭಜನಾ ತಂಡ’ವು ದಿನಾಂಕ 08-03-2022ರಂದು ಮುಡಿಪು ಇಲ್ಲಿ ಆರಂಭಗೊಂಡಿದೆ. ಶ್ರೀಪತಿ ಭಟ್ ಬೆಳ್ಳೇರಿಯವರ ಮಾರ್ಗದರ್ಶನದಲ್ಲಿ ಭಜನೆ ತರಬೇತಿ ನಡೆಯುತ್ತಿದೆ. 20ಕ್ಕಿಂತಲೂ ಹೆಚ್ಚು ಜನರಿರುವ ಶ್ರೀ ರಾಮಾರ್ಪಣ ಭಜನಾ ತಂಡವು ವಾರದಲ್ಲಿ ಒಂದು ದಿನ ಎರಡು ಗಂಟೆಗಳ ಕಾಲ ಭಜನೆಯನ್ನು ಅಭ್ಯಾಸ ಮಾಡುವ ಸಂಪ್ರದಾಯವನ್ನಿಟ್ಟುಕೊಂಡಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯರಿಗೆ ‘ಷಷ್ಟ್ಯಬ್ದ ಅಭಿವಂದನ’ ಹಾಗೂ ಬಹುಭಾಷಾ ಕವನ ಹಾಗೂ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
    Next Article ಬಡಗುತಿಟ್ಟು ಯಕ್ಷಗಾನದ ಭಾಗವತಿಕೆಯ ವಿವಿಧ ಶೈಲಿ, ಮಟ್ಟುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ | ಏಪ್ರಿಲ್ 7
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.