ಮೂಡುಬಿದಿರೆ : ಕಳೆದ ನಲುವತ್ತಮೂರು ವರುಷಗಳಿಂದ ಪ್ರತಿಷ್ಠಿತ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2023ನೇ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು, ಆಗುಂಬೆ ಎಸ್. ನಟರಾಜ್ ಇವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಮತ್ತು ಶ್ರೀಧರ ಬನವಾಸಿ ಅವರಿಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂ.25,000/- ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂ.15,000/- ಗೌರವ ಸಂಭಾವನೆ, ತಾಮ್ರಪತ್ರದ ಜೊತೆ ಸನ್ಮಾನವನ್ನೂ ಒಳಗೊಂಡಿವೆ.
ಮೂಡುಬಿದಿರೆಯಲ್ಲಿ ಶನಿವಾರ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಉಪಾಧ್ಯಕ್ಷರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ. ಬಿ. ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ. ಬಿ.ಪಿ. ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ. ಮೂಡುಬಿದಿರೆಯ ಸಮಾಜಮಂದಿರ ಸಭಾ (ರಿ.) ಸಪ್ಟಂಬರ್ ತಿಂಗಳಲ್ಲಿ ನಡೆಸುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಅವರು ತಿಳಿಸಿದ್ದಾರೆ.
ಆಗುಂಬೆ ಎಸ್. ನಟರಾಜ್ :
ಮೂಲತಃ ತೀರ್ಥಹಳ್ಳಿಯವರಾದ ಆಗುಂಬೆ ಎಸ್. ನಟರಾಜ್ ಇವರು ಬಿಕಾಂ, ಬಿ.ಎಲ್, ಸಿ.ಎ.ಐ.ಐ.ಬಿ. ಪದವೀಧರರು. ಕಿರ್ಲೋಸ್ಕರ್ ಎಲೆಕ್ಟ್ರಿಕಲ್ ಕಂಪೆನಿ, ಕೆ.ಇ.ಬಿ. ಹಾಗೂ ಕೇಂದ್ರ ಸರಕಾರದ ರಕ್ಷಣಾ ಇಲಾಖೆಯ ಲೆಕ್ಕಪತ್ರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಇವರು ನಂತರ 32 ವರ್ಷಗಳ ಕಾಲ ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇತಿಹಾಸ ಮತ್ತು ಪ್ರವಾಸದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಅವರ ಪ್ರವಾಸ ಕಥನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕರ್ನಾಟಕ ರಾಜವಂಶಜರು ಹೊರನಾಡಿನಲ್ಲಿ ರಾಜ್ಯವಾಳಿದ ಚರಿತ್ರಾಂಶಗಳನ್ನು ಶೋಧನೆ ಮಾಡಿದ ಚಾರಿತ್ರಿಕ ದಾಖಲೆಗಳ ಸಹಿತ ಲೇಖನಗಳನ್ನು ಸುಧಾ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಹನಿಗವನ, ಪ್ರವಾಸ ಕಥನ, ಕಾದಂಬರಿ ಹಾಗೂ ಜೀವನ ಚರಿತ್ರೆ ಇತ್ಯಾದಿ 16ಕ್ಕೂ ಮಿಕ್ಕಿದ ಕೃತಿಗಳನ್ನು ರಚಿಸಿದ್ದು, ಇವರು ರಚಿಸಿರುವ ‘ಇದು ಕಾಳಿ. ಇದು ವಾರಣಾಸಿ’ ಸಂಶೋಧನಾತ್ಮಕ ಚಾರಿತ್ರಿಕ ಬೃಹತ್ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೊಂದು ವಿಶಿಷ್ಟ ಕೊಡುಗೆಯಾಗಿದೆ. ಹನ್ನೊಂದು ಕನ್ನಡ ಹಾಗೂ 192 ಇಂಗ್ಲೀಷ್ ಸಾಂದರ್ಭಿಕ ಗ್ರಂಥಗಳನ್ನು ಪರಾಮರ್ಶಿಸಿ ರಚಿಸಿರುವ ಒಂದು ವಿಶಿಷ್ಟ ಗ್ರಂಥವಾಗಿ ಇದು ಜನಪ್ರಿಯವಾಗಿದೆ. ಇವರು ರಚಿಸಿರುವ ‘ರಸ ವೈಚಾರಿಕತೆ’ ಎಂಬ ಕೃತಿ ಕೂಡಾ ವಿಶಿಷ್ಟ ಕೃತಿಯಾಗಿ ಹೆಸರು ಪಡೆದಿದೆ. ಇವರು ರಚಿಸಿರುವ ಕೃತಿಗಳೆಲ್ಲ ಕ್ಷೇತ್ರ ಕಾರ್ಯ ಹಾಗೂ ವಾಸ್ತವ ಜೀವನ ಘಟನೆಗಳ ಆಧಾರಿತವಾಗಿವೆ. ಸಂಪರ್ಕ ಸಂಖ್ಯೆ : 9481423004
ಶ್ರೀಧರ ಬನವಾಸಿ :
ಶ್ರೀಧರ ಬನವಾಸಿ ಕನ್ನಡ ಸಾಹಿತ್ಯ ವಲಯದಲ್ಲಿ ಹೊಸ ತಲೆಮಾರಿನ ಲೇಖಕರಲ್ಲಿ ಮಹತ್ವದ ಕತೆಗಾರರಾಗಿ ಜನಪ್ರಿಯರಾಗಿದ್ದಾರೆ. ಫೆಬ್ರವರಿ 6, 1985ರಲ್ಲಿ ಜನಿಸಿದ ಇವರು ಬನವಾಸಿ, ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಮಾಡಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯ ಜೊತೆಗೆ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ಕೂಡ ಅಧ್ಯಯನ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಅಭಿರುಚಿ ಹೊಂದಿದ್ದ ಇವರು ಸಾಹಿತ್ಯ ಕ್ಷೇತ್ರವನ್ನೇ ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಅದರಲ್ಲೇ ಲೇಖಕರಾಗಿ, ಪ್ರಕಾಶಕರಾಗಿ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಇವರ ಅನೇಕ ಕವಿತೆಗಳು, ಕತೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ. ಇವರ ಕತೆಗಳ ಮೇಲೆ ಎಂ.ಫಿಲ್ ಅಧ್ಯಯನವನ್ನು ಕೂಡ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಂಡ ಸಾಹಿತ್ಯ ಗೋಷ್ಠಿಗಳಲ್ಲಿ, ಸಂವಾದ ಕಾರ್ಯಕ್ರಮಗಳಲ್ಲಿ ಕನ್ನಡದ ಕತೆಗಾರನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ.
ಸಾಹಿತ್ಯಿಕವಾಗಿ ಕತೆ, ಕವಿತೆ, ಕಾದಂಬರಿ, ನಾಟಕ, ಜೀವನ ಕಥನ, ಅನುವಾದ, ಅಂಕಣ ಬರಹ, ಗ್ರಂಥ ಸಂಪಾದನೆ ಸೇರಿದಂತೆ 15 ಕೃತಿಗಳನ್ನು ಇಲ್ಲಿಯವರೆಗೆ ರಚಿಸಿದ್ದಾರೆ. 2017ರಲ್ಲಿ ಪ್ರಕಟಗೊಂಡ ಇವರ ‘ಬೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಕುವೆಂಪು ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಸೇರಿದಂತೆ ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ವಿಶೇಷ ದಾಖಲೆಯೆಂದು ಗುರುತಿಸಲ್ಪಟ್ಟಿದೆ. ಒಟ್ಟು ಇವರ ಸಾಹಿತ್ಯ ಕೃತಿಗಳಿಗೆ 17ಕ್ಕೂ ಹೆಚ್ಚು ಸಾಹಿತ್ಯಿಕ ಪ್ರಶಸ್ತಿಗಳು ಸಂದಿವೆ.
ಕನ್ನಡ ಕಥಾಜಗತ್ತಿನಲ್ಲಿ ಶ್ರೀಧರ ಬನವಾಸಿಯ ಕಥೆಗಳು ವಿಭಿನ್ನ ದೃಷ್ಟಿಕೋನದಲ್ಲಿ ನಿಂತು ತಮ್ಮದೇ ವಿಶಿಷ್ಟ ನಿರೂಪಣೆಯ ಮೂಲಕ ಓದುಗರ ಮನಸೆಳೆಯುತ್ತವೆ ಅನ್ನುವ ಅಂಶವನ್ನು ವಿಮರ್ಶಕರು ಗುರುತಿಸಿದ್ದಾರೆ. ವಿಶಿಷ್ಟ ಪಾತ್ರಗಳ ಹುಡುಕಾಟ ಮತ್ತು ಕಥಾವಸ್ತುವಿನಲ್ಲಿ ಕಲ್ಪನೆಗಿಂತ ವಾಸ್ತವ ಜಗತ್ತಿನ ಅಂತಃಸತ್ವವನ್ನು ಅನ್ವೇಷಿಸುವ ಪ್ರಯತ್ನವನ್ನು ಅವರ ಕಥೆಗಳಲ್ಲಿ ಕಾಣಬಹುದು. ಸಂಪರ್ಕ ಸಂಖ್ಯೆ : 9740069123