ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು ಇದರ 14ನೇ ವಾರ್ಷಿಕೋತ್ಸವ ದಿನಾಂಕ 18-05-2024ರಂದು ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು “ಹರಿಕಥಾ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಹರಿಕಥಾ ಪರಿಷತ್ತಿನ ಕಾರ್ಯ ಶ್ಲಾಘನೀಯ. ಹರಿಕಥೆಯಂತಹ ಚಟುವಟಿಕೆಗಳಿಗೆ ಸರಕಾರದ ಪ್ರೋತ್ಸಾಹ ಏನೇನೂ ಸಾಲದು. ಸರಕಾರ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಜನತೆಯ ಸಹಕಾರವೂ ಅತ್ಯಗತ್ಯ.” ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಮಾತನಾಡಿ “ಈ ಕಲೆಯ ಮೇಲೆ ಮಕ್ಕಳು ಆಸಕ್ತಿ ವಹಿಸುವ ನಿಟ್ಟಿನಲ್ಲಿ ಹೆತ್ತವರು ಪ್ರೇರೇಪಿಸಬೇಕು.” ಎಂದರು. ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಹರಿದಾಸ ಪ್ರವಚನಕಾರರಾದ ಯಜೇಶ್ ಹೊಸಬೆಟ್ಟು, ಕಲಾಪೋಷಕ ರಘುರಾಮ್ ಭಟ್ ಕಣ್ವತೀರ್ಥ, ಹಾರ್ಮೋನಿಯಂ ಹಾಗೂ ಕೀಬೋರ್ಡ್ ವಾದಕರಾದ ಸತೀಶ್ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಅಧ್ಯಕ್ಷ ಎ. ಸಿ. ಭಂಡಾರಿ, ವಿಶ್ವನಾಥ್ ಶೆಟ್ಟಿ ತೀರ್ಥಹಳ್ಳಿ, ಕೆ. ದಾಮೋದರ ರೈ, ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ, ಶೈಲೇಂದ್ರ ವೈ, ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಧರ ಮಣಿಯಾಣಿ, ನಾರಾಯಣ್ ರಾವ್, ಶ್ರೀನಿವಾಸ್ ಭಟ್ ಕಣ್ವತೀರ್ಥ, ಹರೀಶ್ ಮಾಡ ಮತ್ತಿತರರು ಉಪಸ್ಥಿತರಿದ್ದರು.
ಹರಿಕಥಾ ಪರಿಷತ್ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಚಾಲಕ ಸುಧಾಕರ ರಾವ್ ಪೇಜಾವರ ನಿರೂಪಿಸಿ, ಖಜಾಂಚಿ ಡಾ. ಎಸ್. ಪಿ. ಗುರುದಾಸ್ ವಂದಿಸಿದರು.