ಹೊಸಬೆಟ್ಟು : ಶ್ರೀಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಯಕ್ಷಗಾನ ಬಳಗದ ದ್ವಿತೀಯ ವರ್ಷದ ವಾರ್ಷಿಕೋತ್ಸವವು ದಿನಾಂಕ 12-05-2024ರ ಆದಿತ್ಯವಾರದಂದು ಸಂಜೆ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟಿಸಿದ ಯಕ್ಷಗಾನಾಭಿಮಾನಿ ಹಾಗೂ ಪ್ರೋತ್ಸಾಹಕರದ ಶ್ರೀ ಎಚ್. ಗುರುರಾಜ ಆಚಾರ್ಯ ಮಾತನಾಡಿ “ಈ ಬಳಗದವರಿಗೆ ಪ್ರತೀ ತಿಂಗಳು ಯಕ್ಷಗಾನ ಮಾಡುವ ಅವಕಾಶ ಸಿಗಲಿ.” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಕರು, ಸಾಹಿತಿಗಳು ಹಾಗೂ ಕನ್ನಡ ಜಾನಪದ ಪರಿಷತ್ ವಿಜಯಪುರ ಇದರ ಜಿಲ್ಲಾಧ್ಯ ಕ್ಷರಾಗಿರುವ ಶ್ರೀ ಬಾಳನಗೌಡ ಎಸ್. ಪಾಟೀಲ “ಯಕ್ಷಗಾನವು ಕೇವಲ ಕರಾವಳಿಯ ಕಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ಕಲೆಯಾಗಿದ್ದು ತನ್ನ ಶಿಸ್ತುಬದ್ಧ ಪ್ರದರ್ಶನದಿಂದ ಕಡಲು ದಾಟಿ ಹೊರದೇಶಗಳಲ್ಲೂ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಕಲೆಯಾಗಿದೆ. ಇದು ಕೇವಲ ತುಳುನಾಡಿನ ಕಲೆಯಾಗದೆ ಕನ್ನಡ ನಾಡಿನ ಪ್ರತಿಷ್ಟಿತ ಜನಪದ ಕಲೆಯಾಗಿದ್ದು ಯುವಕರು ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವುದು ನಮ್ಮ ನಾಡಿನ ಹೆಮ್ಮೆಯಾಗಿದೆ.” ಎಂದು ಸಂತೋಷ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವ ಕನ್ಸ್ ಸ್ಟ್ರಕ್ಷನ್ ಹೊಸಬೆಟ್ಟು ಇದರ ಮಾಲಕರಾದ ಶ್ರೀ ವಿಶ್ವೇಶ್ವರ ನಾವಡ ಹಾಗೂ ವಕೀಲರು ಮತ್ತು ನೋಟರಿಯಾಗಿರುವ ಶ್ರೀ ಎಚ್. ವಿ. ರಾಘವೇಂದ್ರ ಹೊಸಬೆಟ್ಟು ಇವರು ಪ್ರೋತ್ಸಾಹಕ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಶ್ರೀ ಯಕ್ಷದೇವ ಮಿತ್ರ ಮಂಡಳಿ ಬೆಳುವಾಯಿ ಇದರ ಸ್ಥಾಪಕಾಧ್ಯಕ್ಷರಾಗಿರುವ ಶ್ರೀ ದೇವಾನಂದ ಭಟ್ ಬೆಳುವಾಯಿ ಮತ್ತು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗ ಕರ್ತರಾಗಿರುವ ಶ್ರೀ ಬೆಳ್ಳಾರೆ ಮಂಜುನಾಥ ಭಟ್ “ಇಂತಹ ಉತ್ತಮ ಸಂಸ್ಕೃತಿಯನ್ನು ಇನ್ನು ಮುಂದಕ್ಕೂ ಬೆಳೆಸುತ್ತಾ ಈ ಬಳಗವು ಯಶಸ್ಸಿನ ಪಥದಲ್ಲಿ ಸಾಗಲಿ.” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೇಯಸ್ ಪ್ರಾರ್ಥನೆಗೈದು, ಶ್ರೀ ಸಂಪತ್ ಎಸ್. ಬಿ. ಸ್ವಾಗತಿಸಿ, ಶ್ರೀ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಶ್ರೀನಿಧಿ ಭಟ್ ಧನ್ಯವಾದ ಸಮರ್ಪಿಸಿದರು. ಸಭಾಕಾರ್ಯಕ್ರಮದ ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಬಳಗದ ಸದಸ್ಯರಿಂದ ಶ್ರೀ ಬೆಳ್ಳಾರೆ ಮಂಜುನಾಥ ಭಟ್ ವಿರಚಿತ ‘ಶ್ರೀ ವಿಘ್ನ ವಿನೋದನ ಮಹಿಮೆ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.