ಬೆಂಗಳೂರು : ಬೆಂಗಳೂರಿನ ಸಿರಿಕಲಾ ಮೇಳದ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 20 ಅಕ್ಟೋಬರ್ 2024 ರಂದು ನಂದಿನಿ ಬಡಾವಣೆಯ ಉತ್ತರ ಕನ್ನಡ ಸಂಘದಲ್ಲಿ ನಡೆಯಿತು.
ಪಿ. ವಾಸುದೇವ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಭಾಗವತ ಕೆ. ಪಿ. ಹೆಗಡೆ, ನ್ಯಾಯವಾದಿ ಡಾ. ಸುಧಾಕರ್ ಪೈ, ಉತ್ತರ ಕನ್ನಡ ಸಂಘದ ಅಧ್ಯಕ್ಷ ಅರವಿಂದ ನಾಯಕ್ ಅವರನ್ನು ಸಿರಿಕಲಾ ಪುರಸ್ಕಾರ ಮತ್ತು ಪೋಷಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಗವತ ಕೆ. ಪಿ. ಹೆಗಡೆ “ಸಿರಿಕಲಾ ಮೇಳದ 14 ವರ್ಷಗಳ ಸಾಧನೆ ಅಭೂತಪೂರ್ವ, ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಇವರ ಈ ಕಾರ್ಯ ಅಭಿನಂದನಾರ್ಹ.” ಎಂದರು.
ಸಿರಿಕಲಾ ಪೋಷಕ ಪುರಸ್ಕಾರ ಸ್ವೀಕರಿಸಿದ ಡಾ. ಸುಧಾಕರ್ ಪೈ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಶ್ರೀಮಂತ ಕಲಾವಿದರನ್ನು ಗುರುತಿಸಿ ರೂಪಾಯಿ 25000 ಗೌರವಧನದ ಜೊತೆ ಸನ್ಮಾನಿಸುವ ಕಾರ್ಯ ಶ್ಲಾಘನೀಯ. ಇವರ ಈ ಕಾರ್ಯಕ್ಕೆ ಹಿಂದಿನಿಂದಲೂ ಸಹಕರಿಸುತ್ತಿದ್ದು ಇನ್ನು ಮುಂದೆಯೂ ಸಹಕಾರ ನೀಡಲಾಗುವುದು. ದೇಶ ವಿದೇಶದಲ್ಲಿ ಕಾರ್ಯಕ್ರಮ ನೀಡಿ ಯಶಸ್ವಿಯಾಗಿರುವ ಈ ಸಂಸ್ಥೆಯ ರಜತ ಮಹೋತ್ಸವ ನೋಡುವ ತವಕ ಮೂಡಿದೆ.” ಎಂದರು.
ಉತ್ತರ ಕನ್ನಡ ಸಂಘದ ಅಧ್ಯಕ್ಷ ಅರವಿಂದ ನಾಯಕ್ ಮಾತನಾಡಿ “ಸಿರಿಕಲಾ ಮೇಳವು 14ವರ್ಷಗಳನ್ನು ಪೂರೈಸಿ 15ನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಸಂಸ್ಥೆಯ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಸದಸ್ಯರು ಮುಖ್ಯವಾಗಿ ಸಂಸ್ಥೆಯ ಸಂಚಾಲಕ ಶ್ರೀ ಸುರೇಶ್ ಹೆಗ್ಡೆ ಇವರ ಕಾರ್ಯ ವೈಖರಿ ಅಭಿನಂದನಾರ್ಹ.” ಎಂದರು.
ಅಧ್ಯಕ್ಷತೆ ವಹಿಸಿದ ಪಿ. ವಾಸುದೇವ ರಾವ್ ಮಾತನಾಡಿ “ಸಿರಿಕಲಾ ಮೇಳವನ್ನು ವಿ. ಆರ್. ಹೆಗ್ಡೆ ಹಾಗೂ ಹೆಗ್ಡೆ ಮನೆತನದವರು ಬೆಳೆಸಿಕೊಂಡು ಬಂದವರು. ಇವರ ಪರಿಶ್ರಮ ಹಾಗೂ ಕಾರ್ಯ ಬದ್ಧತೆಯನ್ನು ಮೊದಲಿನಿಂದಲೂ ನೋಡಿಕೊಂಡು ಬಂದವನು ನಾನು. ಇವರ ಈ ಕಾರ್ಯಕ್ಕೆ ಮುಂದೆಯೂ ನನ್ನ ಸಂಪೂರ್ಣ ಸಹಕಾರವಿದೆ.” ಎಂದರು.
ವೇದಿಕೆಯಲ್ಲಿ ಗುರುರಾಜ ಅಡಿಗ, ಅಮೃತ ದೇವ, ಸಿರಿಕಲಾ ಮೇಳದ ಸಂಚಾಲಕ ಸುರೇಶ ಹೆಗಡೆ, ಮೇಳದ ಅಧ್ಯಕ್ಷೆ ಶ್ರೀದೇವಿ ಹೆಗಡೆ, ಭಾಗವತರಾದ ಸರ್ವೇಶ್ವರ ಹೆಗಡೆ, ಸುಶೀಲಾ, ಕೃಷ್ಣಮೂರ್ತಿ ನಾಯಕ್, ಬನವಾಸಿ ಕೃಷ್ಣಮೂರ್ತಿ, ಪೊಲೀಸ್ ಆಯುಕ್ತ ಜಿ. ಬಿ. ಕೌರಿ ಹಾಗೂ ಸುಜಾತಾ ಮಹಾಬಲೇಶ್ವರ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ಸಿರಿಕಲಾ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಪಾಂಚಜನ್ಯ’ ಯಕ್ಷಗಾನ ಬಯಲಾಟ ಪ್ರಸ್ತುತಗೊಂಡಿತು.

