ಮೂಡುಬಿದಿರೆ : ಮೂಡುಬಿದಿರೆಯ ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ಮಾಸಿಕ ಸಭೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 06-01-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ‘ನಾಗಾರಾಧನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ತಜ್ಞರಾಗಿರುವ ಪೊಳಲಿಯ ಶ್ರೀ ರಾಜಶೇಖರ ರಾವ್ ಎನ್. “ನಾಗಲೋಕ ಎನ್ನುವುದು ಭೂಮಿಯ ಗರ್ಭವಾಗಿದ್ದು ಅದರಿಂದ ಉಂಟಾಗುವ ತೊಂದರೆಗಳಿಗೆ ವಾಹಕವಾಗಿ ಸರ್ಪವನ್ನು ಕಾಣುತ್ತೇವೆ. ನಾಗ ಎಂದರೆ ಸರ್ಪ ಎನ್ನುವ ಹೆಸರಿರುವುದಾದರೂ ನಾಗಾರಾಧನೆಯಲ್ಲಿ ಬರುವ ನಾಗ ಎಂದರೆ ಸರ್ಪವಲ್ಲ. ನಾಗರ ಹಾವು ತೊಂದರೆಗಳನ್ನು ಮನಗಾಣಿಸುವ ಮಾಧ್ಯಮವಾಗಿ ಮಾತ್ರ ಮುಖ್ಯವಾಗುವುದರಿಂದಲೇ ಅದು ಆರಾಧನೆಗೆ ಯೋಗ್ಯವಾಗಿದೆ.”ಎಂದರು.
ನಾಗಾರಾಧನೆಯ ನಂಬಿಕೆ ಬೆಳೆದು ಬಂದ ಹಿನ್ನೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದ ಅವರು ನಂತರ ಸಂವಾದದಲ್ಲಿ ಪಾಲ್ಗೊಂಡು ಸದಸ್ಯರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನೂ ನೀಡಿದರು. ತುಳುಕೂಟದ ಅಧ್ಯಕ್ಷರಾದ ಶ್ರೀ ಧನಕೀರ್ತಿ ಬಲಿಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗರು ಸ್ವಾಗತಿಸಿ, ಕಾರ್ಯದರ್ಶಿಗಳಾದ ವೇಣುಗೋಪಾಲ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.