ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷ ಕೊಡಮಾಡುವ ‘ಕನ್ನಡ ಗಡಿತಿಲಕ’ ಪ್ರಶಸ್ತಿಗೆ ಹಿರಿಯ ಸಾಹಿತಿ ಮತ್ತು ರಂಗಕರ್ಮಿ ಶಿರೀಷ ಜೋಶಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿರೀಷ ಜೋಶಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಅವರ ‘ಹಾರಿಹೋದ ಹಂಸ ಏಕಾಂಗಿ’, ‘ಗುಜರಿ ತೋಡಿ’ ಮತ್ತು ‘ತಾನಸೇನ’ ಕೃತಿಗಳು ಜನಪ್ರಿಯವಾಗಿವೆ. ‘ಮಿಂಚು’ ನಾಟಕವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಠ್ಯವಾಗಿಯೂ ಸೇರ್ಪಡೆಯಾಗಿದೆ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ರಾಷ್ಟ್ರೀಯ ಸಿರಿಗನ್ನಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
ಉದಯೋನ್ಮುಖ ಬರಹಗಾರರಿಗೆ ನೀಡುವ ರಾಜ್ಯಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ ಶಶಿ ತರೀಕೆರೆ ಇವರ ‘ಪ್ಯೂಪಾ’ ಕವನ ಸಂಕಲನ ಆಯ್ಕೆಯಾಗಿದೆ. ಚಿಕ್ಕಮಗಳೂರಿನ ತರೀಕೆರೆಯವರಾದ ಶಶಿ ಇವರು ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇವರ ಛಂದ ಪುಸ್ತಕ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಟೋಟೋ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ತಮ್ಮ ಡುಮಿಂಗ್, ತಿರಾಮಿಸು ಕಥಾ ಸಂಕಲನಗಳಿಂದ ಜನಪ್ರಿಯರಾಗಿದ್ದಾರೆ. ದಿನಾಂಕ 21 ಡಿಸೆಂಬರ್ 2025ರಂದು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಇಬ್ಬರಿಗೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಮರಾಠೆಯವರು ತಿಳಿಸಿದ್ದಾರೆ.
