ಕಾಸರಗೋಡು : “ಸಂಗೀತವು ಬದುಕಿನ ಆತ್ಮ. ಇದು ಕೇವಲ ಮನೋರಂಜನೆಗೆ ಮಾತ್ರವಲ್ಲ ; ಆಧ್ಯಾತ್ಮಿಕ ಮತ್ತು ಮನಸ್ಸಿಗಾದ ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ತಾಕತ್ತು ಸಂಗೀತಕ್ಕಿದೆ. ಒಳ್ಳೆಯ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಹೇಳಿದರು.
ಅವರು ದಿನಾಂಕ 24 ಆಗಸ್ಟ್ 2025 ರಂದು ಭಾನುವಾರ ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಕಾಸರಗೋಡಿನ ಸಾಹಿತ್ಯಿಕ -ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ‘ಅಂತರ್ಧ್ವನಿ -7’ ಕರೋಕೆ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ವ್ಯಾಪಾರಿ ಮನೋಭಾವ ಇಟ್ಟುಕೊಂಡು ನಗರಗಳಲ್ಲಿ ಹಲವಾರು ಕರೋಕೆ ಸಂಸ್ಥೆಗಳು ಹುಟ್ಟಿಕೊಂಡರೂ ಯಾವುದೇ ಫಲಪೇಕ್ಷೆ ಇಲ್ಲದೆ ಕಾಸರಗೋಡಿನ ಗಾಯಕ-ಗಾಯಕಿಯರಿಗಾಗಿ ವೇದಿಕೆ ನಿರ್ಮಾಣ ಮಾಡಿಕೊಟ್ಟ ರಂಗಚಿನ್ನಾರಿಯ ಕೆಲಸವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾರಿಚಿನ್ನಾರಿಯ ಅಧ್ಯಕ್ಷೆ, ನಗರ ಸಭಾ ಸದಸ್ಯೆ ಶ್ರೀಮತಿ ಸವಿತಾ ಟೀಚರ್ ಮಾತನಾಡಿ “ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಲು ‘ಸ್ವರಚಿನ್ನಾರಿ’ಯ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು” ಎಂದರು. ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕಾಸರಗೋಡಿನ ಖ್ಯಾತ ಮೂಳೆತಜ್ಞ ಡಾ. ಕೆ.ಕೆ. ಶ್ಯಾನುಭೋಗ್, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ಉಪಸ್ಥಿತರಿದ್ದರು.
‘ಪದ್ಮಗಿರಿ ಕಲಾ ಕುಟೀರ’ಕ್ಕೆ ದೇಣಿಗೆ ನೀಡಿದ ಖ್ಯಾತ ಸಾಹಿತಿ ವೈ. ಸತ್ಯನಾರಾಯಣ ಹಾಗೂ ವಾಸುದೇವ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಂತರ್ಧ್ವನಿ ಸಂಚಿಕೆ 7ರ ಉತ್ತಮ ಗಾಯಕ, ಗಾಯಕಿ ವಿಜೇತರಾದ ಪ್ರದೀಪ್ ಆಚಾರ್ಯ ಹಾಗೂ ಕುಮಾರಿ ವರ್ಷಾ ಅವರಿಗೆ ಸ್ಮರಣಿಕೆ, ಶಾಲು ಹೊದಿಸಿ ಅಭಿನಂದಿಸಲಾಯಿತು.
ಕುಮಾರಿ ಪ್ರಣೀತಾ ಪ್ರಾರ್ಥಿಸಿದರು. ರಂಗಚಿನ್ನಾರಿಯ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಸ್ವಾಗತಿಸಿದರು. ಶ್ರೀಮತಿ ಉಷಾ ಟೀಚರ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಬಬಿತಾ ಆಚಾರ್ಯ ವಂದಿಸಿದರು. ರಂಗಚಿನ್ನಾರಿಯ ಜನಾರ್ದನ ಅಣಂಗೂರು, ಉದಯ ಕುಮಾರ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.
ಅಂತರ್ಧ್ವನಿ -7ರ ಕಾರ್ಯಕ್ರಮದಲ್ಲಿ ಪದ್ಮಭೂಷಣ, ಅಭಿನವ ಕಂಠೀರವ ಡಾ. ರಾಜಕುಮಾರ್ ಅವರ ಹಾಡುಗಳನ್ನು ಹಾಡುವ ಮುಖಾಂತರ ಅವರಿಗೆ ಅರ್ಪಿಸಲಾಯಿತು.