ಕಾಸರಗೋಡು : “ಸರಳತೆಯಿಂದ ಶ್ರದ್ಧೆಯಿಂದ ಶರಣಾಗತಿಯಿಂದ ಮತ್ತು ಅಂತರಾಳದಿಂದ ಹುಟ್ಟುವ ಧ್ವನಿಯೇ ‘ಅಂತರ್ಧ್ವನಿ’.. ನಾವು ಭಕ್ತಿಯಿಂದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಅಭಿಷೇಕ, ಪೂಜೆ, ಪ್ರಾರ್ಥನೆ ಮಾಡಿ ಅದರಲ್ಲಿ ದೇವರನ್ನು ಕಾಣುತ್ತೇವೆ. ಅದೇ ದೇವಸ್ಥಾನ. ಈ ವೇದಿಕೆಯು ಕಲಾವಿದರಿಗೆ ದೇವಸ್ಥಾನವಿದ್ದಹಾಗೆ ನೂರಾರು ಸಾಹಿತಿಗಳು, ರಂಗ ನಿರ್ದೇಶಕರು, ನಟರು, ಸಂಗೀತಗಾರರು, ನಾಡಿನ ಶ್ರೇಷ್ಠ ಸಾಧಕರು ತಮ್ಮ ಕಲೆಯನ್ನು ಅನುಭವವನ್ನು ಹಂಚಿಕೊಂಡು ಈ ವೇದಿಕೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಲ್ಲಿ ಒಳ್ಳೆಯ ಕಂಪನವಿದೆ. ಅದಕ್ಕೆ ವೇದಿಕೆ ಹತ್ತುವ ಮೊದಲು ವೇದಿಕೆಗೆ ನಮಸ್ಕರಿಸುತ್ತೇವೆ” ಎಂದು ಖ್ಯಾತ ಚಲನಚಿತ್ರ ನಟರಾದ ಕೆ. ಎಸ್. ಶ್ರೀಧರ್ ಹೇಳಿದರು.
ಅವರು ‘ರಂಗ ಚಿನ್ನಾರಿ’ ಹಾಗೂ ‘ಸ್ವರ ಚಿನ್ನಾರಿ’ಯು ದಿನಾಂಕ 23 ಮಾರ್ಚ್ 2025ರಂದು ಏರ್ಪಡಿಸಿದ ‘ಅಂತರ್ಧ್ವನಿ-2’ ಕರೋಕೆ ಗಾಯಕರ ಕಾರ್ಯಕ್ರಮವನ್ನು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತುಳು ಚಲನಚಿತ್ರ ನಿರ್ಮಾಪಕ ಹಾಗೂ ವಿತರಕರಾದ ಟಿ. ಎ. ಶ್ರೀನಿವಾಸ ಅವರು ಸಾಂಸ್ಕೃತಿಕ ಸಾಹಿತ್ಯ ಸಂಘಟನೆಯನ್ನು ಕಟ್ಟುವ ಕಷ್ಟಗಳ ಬಗ್ಗೆ ತಿಳಿಸಿ “ಕಾಸರಗೋಡಿನಲ್ಲಿ ಕಳೆದ ಎರಡು ದಶಕಗಳಿಂದ ತಿಂಗಳಿಗೆ ಮೂರರಂತೆ ನಿರಂತರ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ರಂಗ ಚಿನ್ನಾರಿ ಸಂಸ್ಥೆಯ ಚಟುವಟಿಕೆಗಳು ಅಭಿನಂದನಾರ್ಹ” ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ‘ರಂಗ ಚಿನ್ನಾರಿ’ ಸಂಸ್ಥೆಯ ನಿರ್ದೇಶಕರಾದ ಕೆ. ಸತೀಶ್ ಚಂದ್ರ ಭಂಡಾರಿ ಅವರು “ಗ್ರಾಮೀಣ ಪ್ರದೇಶದ ಗಾಯಕರಿಗೆ ವೇದಿಕೆ ಒದಗಿಸುವ ಕೆಲಸವನ್ನು ‘ಅಂತರ್ಧ್ವನಿ’ ಮುಖಾಂತರ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿದ್ದೇವೆ” ಎಂದರು. ‘ರಂಗ ಚಿನ್ನಾರಿ’ ಸಂಸ್ಥೆಯ ಸಂಚಾಲಕರಾದ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಗೈದರು. ‘ಸ್ವರ ಚಿನ್ನಾರಿ’ಯ ಸಹ ಕಾರ್ಯದರ್ಶಿ ಖ್ಯಾತ ಗಾಯಕಿ ಪ್ರತಿಜ್ಞಾ ಕಣ್ಗಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಕಾಸರಗೋಡಿನ ಖ್ಯಾತ ಸಾಹಿತಿ ನಿವೃತ್ತ ಅಧ್ಯಾಪಕರಾದ ವೈ. ಸತ್ಯನಾರಾಯಣರವರು ಮಾತನಾಡಿ “ಗ್ರಾಮೀಣ ಪ್ರದೇಶದ ಗಾಯಕರು ರಾಜ್ಯ ಮಟ್ಟದಲ್ಲಿ ಬೆಳೆಯಬೇಕು. ಅದಕ್ಕೆ ತಾಳ್ಮೆ ಮತ್ತು ಶ್ರದ್ದೆ ಬೇಕು” ಎಂದರು. ಸುಮಾರು 30 ಗಾಯಕರು ಹಾಗೂ ಗಾಯಕಿಯರು ಕನ್ನಡ, ತುಳು, ಹಿಂದಿ, ಮಲಯಾಳಂ ಭಾಷೆಯ ಹಾಡುಗಳನ್ನು ಹಾಡಿದರು. ‘ಸ್ವರ ಚಿನ್ನಾರಿ’ಯ ಕಾರ್ಯಕಾರಿ ಸಮಿತಿ ಸದಸ್ಯೆ ಗಾಯಕಿ ಬಬಿತಾ ಆಚಾರ್ಯ ವಂದಿಸಿದರು.
‘ರಂಗ ಚಿನ್ನಾರಿ’ ಸಂಸ್ಥೆಯ ಪರವಾಗಿ ಚಲನಚಿತ್ರ ನಟರಾದ ಕೆ. ಎಸ್. ಶ್ರೀಧರ್ ಹಾಗೂ ವಿತರಕ ಟಿ. ಎ. ಶ್ರೀನಿವಾಸ ಇವರನ್ನು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ‘ರಂಗ ಚಿನ್ನಾರಿ’ಯ ನಿರ್ದೇಶಕರಾದ ಸತ್ಯನಾರಾಯಣ ಕೆ., ಕವಿಯತ್ರಿ ವಿಜಯಲಕ್ಷ್ಮಿ ಶಾನುಭೋಗ್ ಮುಂತಾದವರು ಉಪಸ್ಥಿತರಿದ್ದರು.