ಸುರತ್ಕಲ್ : ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಇದರ ವಾರ್ಷಿಕೋತ್ಸವವು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ದಿನಾಂಕ 23 ಫೆಬ್ರವರಿ 2025ನೇ ರವಿವಾರದಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇ. ಮೂ. ಸೀತಾರಾಮ ಆಚಾರ್ಯ ಪಚ್ಚನಾಡಿ ಹಾಗೂ ಸ್ವಾತಿ ಆಚಾರ್ಯ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿಮರ್ಶಕರಾದ ಸರ್ಪಂಗಳ ಈಶ್ವರ ಭಟ್ ಮಾತನಾಡಿ “ಶ್ರೀ ದುರ್ಗಾಂಬ ಯಕ್ಷಗಾನ ಮಂಡಳಿಯು ಹಲವಾರು ವರ್ಷಗಳಿಂದ ಯಕ್ಷಗಾನ ಕಲೆಗೆ ಪ್ರೋತ್ಸಾಹವನ್ನು ನೀಡುತ್ತಾ ಉತ್ತಮ ಸೇವಾ ಕಾರ್ಯವನ್ನು ನಡೆಸುತ್ತಿದೆ” ಎಂದು ಶ್ಲಾಘಿಸಿದರು.
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಮೊಕ್ತಸರ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರು ಆಶೀರ್ವಚನವನ್ನು ನೀಡಿ, ಮಂಡಳಿಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ, ಇನ್ನಷ್ಟು ಕಲಾಸೇವೆಯನ್ನು ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ವಿನಾಯಕ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯ ನಾಗೇಶ ಕಾರಂತ್ ಅವರನ್ನು ಸಮ್ಮಾನಿಸಲಾಯಿತು. ಮಂಡಳಿಯ ನಿರ್ದೇಶಕರಾದ ವಾಸುದೇವ ರಾವ್ ಇವರು ಬರೆದ ‘ಪ್ರಸಂಗ ಪಂಚಕ’ ಪುಸ್ತಕವನ್ನು ಉದ್ಯಮಿ ರಾಘವೇಂದ್ರ ರಾವ್ ಹಾಗೂ ಅನು ರಾಘವೇಂದ್ರ ರಾವ್ ಲೋಕಾರ್ಪಣೆಗೊಳಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಜೇಶ್ ಕುಳಾಯಿ, ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ, ನ್ಯಾಯವಾದಿ ದೀಪಿಕಾ ಶೆಟ್ಟಿ, ಬಂಟರ ಸಂಘ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಸರೋಜಾ ತಾರಾನಾಥ ಶೆಟ್ಟಿ, ಶಕುಂತಲಾ ಭಟ್ ಉಪಸ್ಥಿತರಿದ್ದರು.
ದುರ್ಗಾಂಬ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ವಿ. ರಾವ್ ಸ್ವಾಗತಿಸಿ, ಎಸ್. ವಾಸುದೇವ ರಾವ್ ಹಾಗೂ ಪಿ. ವೆಂಕಟರಮಣ ಐತಾಳ್ ಅಭಿನಂದಣಾ ಮಾತುಗಳನ್ನಾಡಿ, ವೃಂದಾ ಕೊನ್ನಾರ್ ನಿರೂಪಿಸಿ, ಸುಮಿತ್ರಾ ಕಲ್ಲೂರಾಯ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿನಾಯಕ ಯಕ್ಷಗಾನ ಮಂಡಳಿಯಿಂದ ‘ಹನುಮನೊಲುಮೆ’ ತಾಳಮದ್ದಳೆ ಹಾಗೂ ಮಂಡಳಿ ಸದಸ್ಯರಿಂದ ‘ರುಕ್ಕಿಣಿ ಸ್ವಯಂವರ’ ತಾಳಮದ್ದಳೆ ನಡೆಯಿತು.