ಶಿವಮೊಗ್ಗ : ರಂಗಾಯಣ ಶಿವಮೊಗ್ಗ ಸಹಯೋಗದಲ್ಲಿ ಕಡೆಕೊಪ್ಪಲ ಪ್ರತಿಷ್ಠಾನ, ಶಿವಮೊಗ್ಗ (ರಿ.) ಅರ್ಪಿಸುವ ರಂಗಬಂಡಿ ಮಳವಳ್ಳಿ (ರಿ.) ಪ್ರಸ್ತುತ ಪಡಿಸುವ ಶಶಿಕಾಂತ ಯಡಹಳ್ಳಿಯವರ ‘ಅನುರಕ್ತೆ’ (ದೇವಯಾನಿ ಬದುಕಿನ ದುರಂತ ಕಥನ) ಏಕವ್ಯಕ್ತಿ ರಂಗ ಪ್ರಯೋಗವು ದಿನಾಂಕ 08-03-2024ರಂದು ಸಂಜೆ 6.45ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಉಮಾಶ್ರೀ ಮಧು ಮಳವಳ್ಳಿ ಪ್ರಸ್ತುತಪಡಿಸಲಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಧು ಮಳವಳ್ಳಿ ನಿರ್ವಹಿಸಿರುತ್ತಾರೆ. ನಾಟಕದ ರಂಗ ವಿನ್ಯಾಸವನ್ನು ಶಶಿಧರ ಅಡಪ ನಿರ್ವಹಿಸಲಿದ್ದು, ಸಂಗೀತ ಜನಾರ್ದನ (ಜನ್ನಿ) ಅವರದ್ದು, ಬೆಳಕಿನ ವಿನ್ಯಾಸವನ್ನು ಅರುಣ್ ಮೂರ್ತಿ ಮತ್ತು ನಾಟಕಕ್ಕೆ ಆದಿತ್ಯ ಭಾರದ್ವಾಜ್ ಸಾಂಗತ್ಯ ನೀಡಲಿದ್ದಾರೆ.
ನಾಟಕದ ಕುರಿತು :
ಪೌರಾಣಿಕ ಕತೆಗಳು, ಪಾತ್ರಗಳು, ಘಟನೆಗಳು ಸದಾ ನಮ್ಮನ್ನಾವರಿಸುತ್ತವೆ. ಇವು ಸಾರ್ವಕಾಲಿಕವಾಗಿರುವುದೇ ಇದಕ್ಕೆ ಕಾರಣವಿರಬಹುದು! ಅಲ್ಲಿಯ ಪಾತ್ರಗಳ ರಸವತ್ತತೆ, ಮನುಜ ಸಹಜ ಗುಣಗಳು, ಜೀವನದ ಪಾಠಗಳು, ಬದುಕಿನೊಡನೆ ಬೆಸೆದ ಬರಹವಾಗಿರುತ್ತದೆ. ಮನುಷ್ಯನ ಮುಖವಾಡ ಕಳಚಲು ಸಹಾಯಕವಾಗುತ್ತದೆ. ನ್ಯಾಯದ, ನೀತಿಯ ಪರಾಮರ್ಷೆಯ ನೋಟಗಳು, ಬದುಕಿಗೆ ಹತ್ತಿರವಾಗುವಂತೆ ಗೋಚರಿಸುತ್ತವೆ. ಶರ್ಮಿಷ್ಟೆ ಮತ್ತು ದೇವಯಾನಿಯರ ಕಥೆಯೂ ಹೀಗೆ.. ದಾಂಪತ್ಯದಲ್ಲಿ ಬಿರುಕು ಎಲ್ಲಿಂದ ಆರಂಭಗೊಂಡು, ಎಲ್ಲಿಯವರೆಗೆ ಹರಿದುಹೋಗುವುದೋ, ಇಂದಿಗೂ ಯಾವ ಮನಃಶಾಸ್ತ್ರಜ್ಞರೂ ವಿವರಿಸಲಾಗಿಲ್ಲ.
ಮನುಜ ಸಹಜವಾದ ಆಸೆ, ಭೀತಿ, ಕೋಪ, ಅಹಂಕಾರ ಮತ್ತು ಇವೆಲ್ಲವನ್ನೂ ಮೀರಿಸುವ ಗಾಢವಾದ ಪ್ರೀತಿ, ಅದರಲ್ಲಿ ಮೋಸಗೊಂಡಾಗಿನ ಹತಾಶೆ…! ಇಂದಿನ ಜೀವನದ ಹಲವು ಮಜಲುಗಳಿಗೆ ಪಾಠವಾಗಿ ದೇವಯಾನಿ ಬರುವವಳಿದ್ದಾಳೆ. ಆಕೆ ಯಯಾತಿಯಲ್ಲಿ ಅನುರಕ್ತೆಯಾಗಿ, ತನ್ನನ್ನು ಸಮರ್ಪಿಸಿಕೊಂಡು, ನಂತರ ಗೆಳತಿ ಹಾಗೂ ದಾಸಿಯಾದ ಶರ್ಮಿಷ್ಟೆಯಿಂದಾಗಿ ಮೋಸಗೊಳ್ಳುವ ಮನಕಲುಕುವ ಕಥೆ ‘ಅನುರಕ್ತೆ’
ಉಮಾಶ್ರೀ ಮಧು ಮಳವಳ್ಳಿ :
ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ಸತತ 14 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸಾಣೇಹಳ್ಳಿಯ ಮೊದಲ ವಿದ್ಯಾರ್ಥಿಯಾಗಿದ್ದು ಶಿವ ಸಂಚಾರದಲ್ಲಿ 4ವರ್ಷ ತಿರುಗಾಟ ಮಾಡಿದ್ದಾರೆ. ರಂಗಾಯಣ ಕಲಬುರಗಿಯಲ್ಲಿ ನಟಿ ಮತ್ತು ಸಹ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಚಿದಂಬರ ರಾವ್ ಜಂಬೆ, ಭಾಗೀರಥಿ ಬಾಯಿ ಕದಂ, ಮಂಜುನಾಥ ಎಲ್. ಬಡಿಗೇರ, ಮಾಲತೇಶ್ ಬಡಿಗೇರ, ಮಹಾದೇವ ಹಡಪದ, ನಟರಾಜ್ ಹೊನ್ನವಳ್ಳಿ, ಸವಿತಾ, ಮಹೇಶ್ ಪಾಟೀಲ್ ಮುಂತಾದವರ ಜೊತೆ ಸಹ ನಿರ್ದೇಶಕಿಯಾಗಿ ಮತ್ತು ನಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಮಾಶ್ರೀ ಅವರು ಕಂಸಾಳೆ, ವೀರಗಾಸೆ, ಯಕ್ಷಗಾನ ನೃತ್ಯಗಳಲ್ಲಿ ಪರಿಣಿತಿ ಹೊಂದಿದ್ದು, ಕೆಂಪು ಹೂ, ಹಂಚಿನ ಮನೆ ಪರಸಪ್ಪ, ಧನ್ವಂತರಿ ಚಿಕಿತ್ಸೆ, ಮಕ್ಕಳ ರಾಜ್ಯ, ಹೇಮರೆಡ್ಡಿ ಮಲ್ಲಮ್ಮ, ಗುಡ್ಡದಿಲಿಗಳ ಕತಿ, ಗಂಗೆ ಗೌರಿ ಪ್ರಸಂಗ, ಕಿಂದರಿ ಜೋಗಿ, ನಾಣಿ ಭಟ್ಟನ ಸ್ವರ್ಗದ ಕನಸು, ಅಂಬೇಡ್ಕರ್, ಚಂದ್ರಗುಪ್ತ ಮೌರ್ಯ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.