ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ 19ನೇ ಕಲಾಕಾರ್ ಪುರಸ್ಕಾರಕ್ಕೆ ಕೊಂಕಣಿಯ ಹಿರಿಯ ಸಂಗೀತಗಾರ ಆಪೊಲಿನಾರಿಸ್ ಡಿಸೋಜರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂಪಾಯಿ 50,೦೦೦/- ನಗದು, ಶಾಲು, ಫಲ-ಪುಷ್ಪ, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ . ಈ ಸನ್ಮಾನವನ್ನು 05-11-2023ರಂದು ಸಂಜೆ ಘಂಟೆ 6.00ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ 263ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು.
2004ರಲ್ಲಿ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಅವರು ತನ್ನ ಕಾರ್ವಾಲ್ ಮನೆತನದ ಹೆಸರಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದು, ಕರ್ನಾಟಕ ಮೂಲದ ನೃತ್ಯ, ನಾಟಕ, ಸಂಗೀತ ಅಥವಾ ಜಾನಪದದಲ್ಲಿ ವಿಶೇಷ ಸಾಧನೆ ಮಾಡಿದ ಓರ್ವ ಕೊಂಕಣಿ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.
1953ರಲ್ಲಿ ಜನಿಸಿದ ಆಪೊಲಿನಾರಿಸ್ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ನಂತರ ಕೆಲಸಕ್ಕಾಗಿ ಓಮನ್ ಗೆ ತೆರಳಿದ ಅವರು ಓಮನ್ ಹಾಗೂ ಊರಿನಲ್ಲಿ ಸಂಗೀತ ಕ್ಷೇತ್ರಕ್ಕೆ ಅಪರಿಮಿತ ಸೇವೆ ಸಲ್ಲಿಸಿದ್ದಾರೆ. ಯುವಕ ರಾಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಲವು ಗಾಯನ ಸ್ಪರ್ಧೆಗಳನ್ನು ಜಯಿಸಿದ ಅವರು ನಂತರ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ, ಸಾಹಿತ್ಯ ಮತ್ತು ಗೀತರಚನೆಕಾರರಾಗಿ ಪರಿಚಿತರಾದರು. 9 ಸಂಗೀತ ಧ್ವನಿ ಸುರುಳಿಗಳನ್ನು ರಚಿಸಿರುವ ಇವರು ಸಂಗೀತಕ್ಕೆ ಸಂಭಂದಪಟ್ಟ 2 ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ತನ್ನದೇ ಯೂಟ್ಯೂಬ್ ಚಾನೆಲ್ ಮುಖಾಂತರ 250ಕ್ಕೂ ಮಿಕ್ಕಿ ಕೊಂಕಣಿ ಹಾಗೂ ಇಂಗ್ಲೀಶ್ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಿದ್ದಾರೆ.
ಕ್ರೈಸ್ತ ಧಾರ್ಮಿಕ ಕಾರ್ಯಗಳಲ್ಲಿ ಲ್ಯಾಟಿನ್ ಬದಲು ಕೊಂಕಣಿಯ ಬಳಕೆ ಆರಂಭವಾದಾಗ ಅವರು ರಚಿಸಿದ ಹಲವಾರು ಭಕ್ತಿಗೀತೆಗಳು ಇಂದಿಗೂ ಜನಪ್ರಿಯವಾಗಿವೆ. 1976ರಲ್ಲಿ ಮಸ್ಕತ್ತಲ್ಲಿ ಪ್ರಪ್ರಥಮ ಕೊಂಕಣಿ ಕಾರ್ಯಕ್ರಮ ನಡೆಸಿದ ಕೀರ್ತಿ ಇವರದ್ದು. ಆಪೊಲಿ ನೈಟ್ ಸಂಗೀತ ರಸಮಂಜರಿ ಸಾದರಪಡಿಸಿದ್ದಾರೆ. ಅದೇ ರೀತಿ ಸುಮಾರು 20 ವರ್ಷಗಳ ಕಾಲ ಸಂತ ಪಾವ್ಲ ಮತ್ತು ಸಂತ ಪೀಟರ್ ಇಗರ್ಜಿಯ ಗಾಯಕವೃಂದವನ್ನು ಮುನ್ನಡೆಸಿದ್ದಾರೆ. ಓಮಾನಿನ ಎಮ್.ಕೆ.ಸಿ.ಸಿ ಹಾಗೂ ಎಮ್.ಸಿ.ಸಿ.ಪಿ ಸಂಘಟನೆಗಳಲ್ಲಿ ದುಡಿದಿದ್ದಾರೆ. ಹಲವು ಸಂಗೀತ ಸ್ಪರ್ಧೆಗಳಿಗೆ ತೀರ್ಪುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ಐದು ದಶಕಕ್ಕೂ ಮಿಕ್ಕಿ ಕೊಂಕಣಿ ಸಂಗೀತ ಕ್ಷೇತ್ರಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ 2023ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ.