ನಾಟಕಕಾರ, ನಿರ್ದೇಶನ ಬೇಲೂರು ರಘುನಂದನ್ ಬರೆದಿರುವ ಹತ್ತು ಕತೆಗಳ ಸಂಕಲನ ‘ಅಪ್ಪ ಕಾಣೆಯಾಗಿದ್ದಾನೆ’. ಈ ಶೀರ್ಷಿಕೆಯ ಕತೆಯಲ್ಲಿ ಅಪ್ಪ ನಾಪತ್ತೆಯಾಗಿದ್ದಾನೆ. ಕುಟುಂಬವನ್ನು ಸಾಕುವ, ಮಕ್ಕಳನ್ನು ಬೆಳೆಸುವ, ಕುಟುಂಬದ ಗೌರವವನ್ನು ಉಳಿಸುವ ಹೊಣೆ ತಾಯಿ ಸೂರಾಪುರದ ಸೀತಕ್ಕನ ಮೇಲೆ ಬಿದ್ದಿದೆ. ಸೀತಕ್ಕನಿಗೆ ಜೀವನದಲ್ಲಿ ಸುಖವಿಲ್ಲ. ಬಡತನ ಮತ್ತು ಅವಮಾನದ ನಡುವೆ ಜೀಕುತ್ತಿರುವ ಜೀವ ಅದು.
ಕತೆ ಶುರುವಾಗುವ ಹೊತ್ತಿಗೆ ಮಾರ್ನಮಿ ಹಬ್ಬ ಸಮೀಪಿಸುತ್ತಿದೆ. ಅ೦ದು ಎಲ್ಲರೂ ಹಿರಿಯರಿಗೆ ಧೂಪ ಹಾಕುವುದು ಶಾಸ್ತ್ರ. ಹಾಕದೇ ಹೋದರೆ ಅಪಶಕುನ ಎಂಬ ನಂಬಿಕೆ. ಆ ಕಾರ್ಯಕ್ರಮ ಸೀತಕ್ಕನ ಮನೆಯಲ್ಲಿ ನಡೆಯುತ್ತದೆ. ಊಟ ಬಂದವರಿಗೆ, ಕೆಲಸ ಸೀತಕ್ಕನಿಗೆ, ಅವಳ ಮನೆಯಲ್ಲಿ ಇತಿಹಾಸ ಅಂತ ಇರುವುದು ನೀರು ಕಾಯಿಸುವ ಹ೦ಡೆಗೆ ಮಾತ್ರ.
ಹೀಗೆ ರಘುನಂದನ್ ತಾನು ಕಂಡ ಕತೆಗಳನ್ನು ತನ್ನಿಷ್ಟದ ಭಾಷೆಯಲ್ಲಿ ಕಟ್ಟುತ್ತಾ ಹೋಗುತ್ತಾರೆ. ಗೆಂಡೇಹಳ್ಳಿ, ಸೂರಾಪುರ, ಮೂಡಿಗೆರೆ ಸಮೀಪದ ಊರುಗಳು, ಹೆಸರಿಲ್ಲದ ಮಲೆನಾಡಿನ ಹಳ್ಳಿಗಳ ಕತೆಗಳೆಲ್ಲ ಈ ಸಂಕಲನದ ಕತೆಗಳ ಒಳಗೆ ಸೇರಿಕೊಂಡಿವೆ. ಇಂಥ ಕತೆಗಳ ನಡುವೆ ಕೊಂಚ ತಮಾಷೆ ಬೆರೆತ ನಾಟಕಕಾರನ ಕತೆಯೂ ಬಂದಿದೆ. ಒ೦ದೆರಡು ಬೆಂಗಳೂರಿನ ಕತೆಗಳೂ ಇದರಲ್ಲಿವೆ.
ರಘುನ೦ದನ್ ಮೊದಲ ಕಥಾ ಸಂಕಲನ ದಟ್ಟವಾದ ಭಾಷೆ, ಗಾಢ ಅನುಭವದಿಂದ ಗಮನ ಸೆಳೆಯುತ್ತದೆ. ಈ ಕಥೆಗಳು ಕನ್ನಡ ಕಥಾಲೋಕವನ್ನು ವಿಸ್ತರಿಸಿವೆ ಎಂದು ಪಿ. ಚಂದ್ರಿಕಾ ಹೇಳುವ ಮೂಲಕ ರಘುನಂದನ್ ಕತೆಗಳಿಗೆ ಕನ್ನಡಿ ಹಿಡಿದಿದ್ದಾರೆ.
ಅಪ್ಪ ಕಾಣೆಯಾಗಿದ್ದಾನೆ
(ಕಥಾ ಸಂಕಲನ)
ಡಾ. ಬೇಲೂರು ರಘುನಂದನ್
ಅಮೂಲ್ಯ ಪುಸ್ತಕ, ಬೆಂಗಳೂರು
ಪುಟ.128 ಬೆಲೆ ರೂ.160