ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2022-2023ನೇ ಸಾಲಿನ ‘ಗೌರವ ಪ್ರಶಸ್ತಿ’ಗಾಗಿ ಅರ್ಜಿ ಆಹ್ವಾನಿಸಿದೆ. ಬ್ಯಾರಿ ಭಾಷೆ, ಕಲೆ ಮತ್ತು ಬ್ಯಾರಿ ಸಾಹಿತ್ಯ- ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 6 ಮಂದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.
ಗೌರವ ಪ್ರಶಸ್ತಿಯು ₹50,000/- ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪವನ್ನೊಳಗೊಂಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ 2022ನೇ ಸಾಲಿಗೆ ಮೂವರು ಹಾಗೂ 2023ನೇ ಸಾಲಿಗೆ ಮೂವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಪರವಾಗಿ ಇತರರು ಶಿಫಾರಸು ಮಾಡಬಹುದು.
ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗದಿರುವ ಸಾಧಕರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಪೂರಕ ವಿವರಗಳಿದ್ದಲ್ಲಿ ಮಾತ್ರ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿ, ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿ ಕೊಡಬೇಕು.
ಲಕೋಟೆಯ ಮೇಲೆ ‘ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ’ ಎಂದು ಬರೆದು, ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯಿತಿ ಹಳೇ ಕಟ್ಟಡ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು- 575001. ಈ ವಿಳಾಸಕ್ಕೆ ಅಥವಾ [email protected] ಇ-ಮೇಲ್ ಗೆ ದಿನಾಂಕ 20-07-2024ರ ಒಳಗೆ ಸಲ್ಲಿಸಬಹುದು ಎಂದು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.