ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಪ್ರಕಾರಗಳಲ್ಲಿ ಪುರಸ್ಕಾರಗಳನ್ನು ನೀಡಲು ಒಟ್ಟು 54 ದತ್ತಿ ಪುರಸ್ಕಾರಗಳಿದ್ದು, ಇವುಗಳಿಗೆ 2024ರ ಜನವರಿ 1ರಿಂದ ಡಿಸಂಬರ್ 31ರೊಳಗೆ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ, ಕೃಷಿಗೆ ಸಂಬಂಧಿಸಿದ ಕೃತಿಗಳು, ಪ್ರವಾಸ ಸಾಹಿತ್ಯ, ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರು ರಚಿಸಿದ ಕೃತಿಗಳು, ನಾಟಕ, ಪ್ರಬಂಧ, ಸಂಪಾದನೆ, ಜೈನ ಸಾಹಿತ್ಯದ ಕುರಿತ ಸಂಶೋಧನೆ ಮೊದಲಾದ ಕ್ಷೇತ್ರಗಳಿಗೆ ರಚಿತವಾದ ಕೃತಿಗಳಿಗೆ ದತ್ತಿ ಪುರಸ್ಕಾರಗಳು ಇರುತ್ತವೆ.
ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕ ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು, ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವದ ಸಂಖ್ಯೆಯನ್ನು ನಮೂದಿಸಿರಬೇಕು, ಒಂದೊಮ್ಮೆ ಸದಸ್ಯರಾಗದಿದ್ದಲ್ಲಿ ಕೂಡಲೇ ಸದಸ್ಯತ್ವವನ್ನು ಪಡೆದು ಅರ್ಜಿಯನ್ನು ಸಲ್ಲಿಸ ಬಹುದು. ಪುರಸ್ಕಾರದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತೀರ್ಪುಗಾರರ ಮಂಡಳಿಯನ್ನು ರಚಿಸಿ ಆಯ್ಕೆಯನ್ನು ಮಾಡುತ್ತದೆ. ಈ ಮಂಡಳಿಯ ತೀರ್ಪು ಅಂತಿಮವಾಗಿರುತ್ತದೆ.
ಯಾವುದೇ ದತ್ತಿ ಪುರಸ್ಕಾರವನ್ನು ಪಡೆದವರು ಅದೇ ವಿಭಾಗಕ್ಕೆ ಮುಂದಿನ ಮೂರು ವರ್ಷಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಒಂದಕ್ಕಿಂತ ಹೆಚ್ಚು ಗ್ರಂಥಗಳು ಶ್ರೇಷ್ಠ ಎಂದು ಪರಿಗಣಿತವಾದರೆ ಪುರಸ್ಕಾರವನ್ನು ಹಂಚುವ ಹಕ್ಕು ಪರಿಷತ್ತಿಗೆ ಇರುತ್ತದೆ. ಪಿ. ಎಚ್. ಡಿ. ಮಹಾಪ್ರಬಂಧಗಳನ್ನು, ನಿಘಂಟುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಲೇಖಕರ ಕೃತಿಯ ಯಾವುದೇ ಭಾಗವು ಕೃತಿ ಚೌರ್ಯ ಎಂದು ಕಂಡು ಬಂದಿಲ್ಲ. ಕಾನೂನಿಯ ದೃಷ್ಟಿಯಿಂದ ಆಕ್ಷೇಪಾರ್ಹ ಎಂದು ಪರಿಗಣಿತವಾದಲ್ಲಿ ಅಂತಹ ಕೃತಿಗಳನ್ನು ಸ್ಪರ್ಧೆಯಿಂದ ದೂರವಿಡುವ ಹಕ್ಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಇರುತ್ತದೆ . ಪ್ರತಿ ಪ್ರವೇಶಕ್ಕೂ ಮೂರು ಪುಸ್ತಕಗಳನ್ನು ‘ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018’ ಇಲ್ಲಿಗೆ 20 ಜುಲೈ 2025ರೊಳಗಾಗಿ ತಲುಪುವಂತೆ ಕಳುಹಿಸ ಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಯಾವ ದತ್ತಿ ಪುರಸ್ಕಾರಕ್ಕೆ ಪುಸ್ತಕವನ್ನು ಕಳುಹಿಸಿದ್ದೇವೆ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದಿರಬೇಕು, ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
ದತ್ತಿ ಪುರಸ್ಕಾರದ ಸಂಪೂರ್ಣ ವಿವರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ www.kasapa.in ಮೂಲಕ ಪಡೆದು ಕೊಳ್ಳಬಹುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆಗಳಾದ 080-26612991/26623548/22423867/26672992 ಗಳನ್ನು ಸಂಪರ್ಕಿಸ ಬಹುದು.
Subscribe to Updates
Get the latest creative news from FooBar about art, design and business.