ಗಂಗಾವತಿ : ಜೀವನ್ ಪಬ್ಲಿಕೇಷನ್ಸ್ ವತಿಯಿಂದ ಆಯೋಜಿಸಲಾಗಿದ್ದ ಅರಳು ಕುಸುಮ ಕಥಾ ವಾಚನ ಕಾರ್ಯಕ್ರಮ ದಿನಾಂಕ 24-09-2023 ರಂದು ಗಂಗಾವತಿಯ ವಡ್ಡರಹಟ್ಟಿ ಶ್ರೀ ಸಾಯಿ ಬಾಬ ನಗರದ ಜೀವನ ನೀಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಡ್ಡರಹಟ್ಟಿ ಉಳ್ಳಿಡಗ್ಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಪ್ಪ ಜಂಬಲಗಿ “ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಮಕ್ಕಳ ಕಥಾವಾಚನ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾಗಿದೆ. ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕೇಳುವ ಹವ್ಯಾಸ ಮೂಡಿಸುವ ಮೂಲಕ ಮಕ್ಕಳನ್ನ ಮೊಬೈಲ್ ಗೀಳಿನಿಂದ ಹೊರ ತರಲು ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮುಮ್ತಾಜ್ ಬೇಗಂ “ಜೀವನ ಪಬ್ಲಿಕೇಷನ್ಸ್ ಕೇವಲ ಪುಸ್ತಕ ಮುದ್ರಣಕ್ಕೆ ಮಾತ್ರ ಸೀಮಿತವಾಗದೆ, ಸಾಂಸ್ಕೃತಿಕವಾಗಿಯೂ ಮಕ್ಕಳನ್ನು ಒಳಗೊಂಡಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವನ್ನು ಒಳಗೊಂಡಿದೆ. ಕಥೆ ಕೇಳುವ ಮತ್ತು ಹೇಳುವ ಪ್ರಕ್ರಿಯೆಯಿಂದ ನೆನಪಿನ ಶಕ್ತಿ, ಶಬ್ದ ಸಂಪತ್ತು, ಕಲ್ಪನಾ ಶಕ್ತಿ ವೃದ್ಧಿಸುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂಗಾಪುರದ ಜೈನ ಪಬ್ಲಿಕ್ ಶಾಲೆಯ ಶಿಕ್ಷಕಿ ಶ್ರೀಮತಿ ಕವಿತಾ ಮಾತನಾಡಿ “ಮಕ್ಕಳು ಶಾಲೆಯಿಂದ ಹೊರ ಹೋಗಿ ಕಥೆ ಹೇಳುವುದರ ಮೂಲಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಉಂಟಾಗಿ ಅವರ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.” ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿ ಪರಸಪ್ಪ ಕುರುಗೋಡ ಮಾತಾನಾಡಿ “ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಸಬೇಕಾಗಿದೆ. ಮೊಬೈಲ್ ತಲೆ ತಗ್ಗಿಸುವಂತೆ ಮಾಡಿದರೆ, ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ. ಪಾಲಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಸುಮ್ಮನಾಗಿಸದೆ ಅವರೊಂದಿಗೆ ಕತೆ ಹೇಳುವ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ” ಎಂದರು. ಮತ್ತೋರ್ವ ಅತಿಥಿ ಶ್ರೀಮತಿ ಮಮತಾ ಶರಣಪ್ಪ ಮಾತನಾಡಿ “ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಾಗಿವೆ. ಈ ಮೂಲಕ ಮಕ್ಕಳಲ್ಲಿ ಸಾಹಿತ್ಯಭಿರುಚಿ ಬೆಳಸಬಹುದು ಇದೊಂದು ಒಳ್ಳೆಯ ಕಾರ್ಯಕ್ರಮ” ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಚಂದ್ರಶೇಖರ್ ಹಾಗೂ ವೆಂಕುಬಾಯಿ ದಂಪತಿಗಳನ್ನು ಸನ್ಮಾನಿಸಲಾಯಿತು. ಪರಸಪ್ಪ ಕುರುಗೋಡ ಪ್ರಾರ್ಥಿಸಿ, ರಿಜ್ವಾನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಕೃತಿ, ಶ್ರೇಯಾ, ಸನ್ವಿತ್, ಜೀವನ್ ಬಿರಾದಾರ್, ಸಾನ್ವಿ, ಸಮರ್ಥ, ತಬಸ್ಸುಮ್, ಜಾಹ್ನವಿ, ಪ್ರೀತಂ, ಇಬ್ರಾಹಿಂ, ಕಾರ್ತಿಕ್ ಸೇರಿ ಹಲವು ಪುಟಾಣಿ ಮಕ್ಕಳು ಕಥಾ ವಾಚನ ಮಾಡಿ ಗಮನ ಸೆಳೆದರು.