ಕಲಾಭಿ ಥಿಯೇಟರ್ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಜಂಟಿಯಾಗಿ ಬೇಸಿಗೆ ಶಿಬಿರವೊಂದನ್ನು ಡೊಂಗರಕೇರಿಯ ಕೆನರಾ ಪ್ರೈಮರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿತು. ‘ಅರಳು’ವ ಪ್ರತಿಭೆಗಳನ್ನು ಮತ್ತಷ್ಟು ಅರಳಿಸುವುದೇ ಶಿಬಿರದ ಉದ್ದೇಶ. ಹತ್ತು ದಿನಗಳ ಶಿಬಿರ ಮಕ್ಕಳ ಪಾಲಿಗೆ ಅಸಾಧಾರಣ ಅನುಭವ ಕೊಟ್ಟಿತು. ಸುತ್ತಣ ರಂಗತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ರಂಗಭೂಮಿ ತರಬೇತಿಯ ಜೊತೆಜೊತೆಗೇ ಒಂದಲ್ಲಾ, ಎರಡಲ್ಲಾ ಮೂರು ಮಕ್ಕಳ ನಾಟಕಗಳನ್ನು ಕೈಗೆತ್ತಿಕೊಂಡು ಸಿದ್ಧಪಡಿಸಿದ್ದೊಂದು ವಿಶೇಷವೆ. ನೂರರಷ್ಟು ಶಿಬಿರಾರ್ಥಿಗಳು ಮೂರು ನಾಟಕಗಳಲ್ಲಿ ಅಭಿನಯಿಸಿದರು. ಎಪ್ರಿಲ್ 26ರಂದು ಕೆನರಾ ಜ್ಯೂನಿಯರ್ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಆ ಮೂರೂ ಮಕ್ಕಳ ನಾಟಕಗಳು ಪ್ರದರ್ಶಿಸಲ್ಪಟ್ಟವು.
‘ದ ಜಂಗಲ್ ಬುಕ್’ನ ರಂಗರೂಪ ‘ಮೊಗ್ಲಿ’ಯನ್ನು ಭುವನ್ ಮಣಿಪಾಲ ನಿರ್ದೇಶಿಸಿದರೆ, ಶಂಕ್ರಯ್ಯ ಘಂಟಿ ರಚಿಸಿದ ‘ರಾಜನ ಸವಾಲ್, ಮಕ್ಕಳ ಕಮಾಲ್’ ನಾಟಕವನ್ನು ಬಿಂದು ರಕ್ಷಿದಿ ನಿರ್ದೇಶಿಸಿದ್ದರು. ಗಜಾನನ ಶರ್ಮ ರಚಿಸಿದ ‘ಮೃಗ ಮತ್ತು ಸುಂದರಿ’ಯನ್ನು ನವೀನ್ ಸಾಣೇಹಳ್ಳಿ ವೇದಿಕೆಯೇರಿಸಿದರು.
ವೇದಿಕೆಯ ಕೆಳಗಡೆ ಮಕ್ಕಳ ಹೆತ್ತವರೂ ಪ್ರೇಕ್ಷಕರಾದರು!
ವರ್ಣರಂಜಿತವಾದ ಮಕ್ಕಳ ನಾಟಕಗಳು ಪ್ರೇಕ್ಷಕರನ್ನು ಮುದಗೊಳಿಸಿದುವು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿ ನಾಟಕಕ್ಕೂ ವೇದಿಕೆಯನ್ನು ಸೂಕ್ತವಾಗಿ ವಿನ್ಯಾಸಗೊಳಿಸಲಾಗುತ್ತಿತ್ತು. ‘ಮೊಗ್ಲಿ’ಯ ಕಾಡು ಹಾಗೂ ಕಾಡುಪ್ರಾಣಿಗಳು, ‘ರಾಜನ ಸವಾಲ್ ಮಕ್ಕಳ ಕಮಾಲ್’ನ ಅರಮನೆ ಹಾಗೂ ಒಡ್ಡೋಲಗ, ‘ಮೃಗ ಮತ್ತು ಸುಂದರಿ’ಯ ಹೂದೋಟ ಹಾಗೂ ಸುಂದರಿಯ ಮನೆ ಎಲ್ಲವೂ ಅಚ್ಚುಕಟ್ಟು. ವೇಷಭೂಷಣಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಅದರಲ್ಲೂ ‘ಮೃಗ ಮತ್ತು ಸುಂದರಿ’ಯ ಮೃಗವನ್ನು ಯಕ್ಷಗಾನದ ಬಣ್ಣದ ವೇಷದಂತೆ ಅಣಿಗೊಳಿಸಿದ್ದಾಗಲೀ ಹೂದೋಟದಲ್ಲಿ ಮಕ್ಕಳ ತಲೆತುಂಬ ಹೂವಿಟ್ಟು ಗಿಡಗಳನ್ನಾಗಿಸಿದ್ದಾಗಲೀ ಸಲೆ ಸೊಗಸು. ಮೂರೂ ನಾಟಕಗಳ ಸಂಗೀತವೂ ಪೂರಕವಾದುದಾಗಿತ್ತು.
ಮಕ್ಕಳು ಅಲ್ಲಲ್ಲಿ ಸಭಾಷಣೆ ಮರೆತು ಬಿಡುತ್ತಿದ್ದುದು, ಕೊನೆಯ ನಾಟಕದಲ್ಲಿ ಕತೆ ಹೇಳುವ ಪ್ರಕ್ರಿಯೆ ಜಾಳಾದದ್ದು, ಒಂದಿಬ್ಬರು ತುಳುವಿನ ಉಚ್ಛಾರದಲ್ಲಿ ಕನ್ನಡ ಮಾತನಾಡುತ್ತಿದ್ದುದು ಬಿಟ್ಟರೆ ಹೇಳಿಕೊಳ್ಳುವ ಯಾವ ಕೊರತೆಗಳೂ ಕಾಣಿಸಲಿಲ್ಲ.
ಕೇವಲ ಹತ್ತು ದಿನಗಳಲ್ಲಿ ರಂಗಭೂಮಿಯ ಮೂಲಭೂತ ವಿವರಗಳನ್ನು ತಿಳಿಸಿಕೊಡುತ್ತಲೇ ಒಂದೆರಡಲ್ಲ, ಮೂರು ನಾಟಕಗಳನ್ನು ಕಟ್ಟಿಕೊಟ್ಟದ್ದು ದೊಡ್ಡ ಸಾಧನೆಯೆ. ಅದಕ್ಕಾಗಿ ಎಲ್ಲ ಮಕ್ಕಳನ್ನು, ಅವರ ಹೆತ್ತವರನ್ನು, ನಿರ್ದೇಶಕರನ್ನು ಹಾಗೂ ಆಯೋಜಕರನ್ನು ಪ್ರೀತಿಪೂರ್ವಕ ಪ್ರಶಂಸಿಸ ಬಯಸುತ್ತೇನೆ.
‘ಅರಳು’ ಶಿಬಿರದ ಪರಿಕಲ್ಪನೆಯೊಂದನ್ನು ತಲೆಯೊಳಗೆ ತುಂಬಿ, ಇತರರ ತಲೆಯೊಳಗೂ ತುಂಬಿಸಿ ಅದನ್ನು
ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದ ಉಜ್ವಲ್ ಯು. ವಿ. ವಿಶೇಷ ಪ್ರಶಂಸೆಗೆ ಪಾತ್ರರಾಗುತ್ತಾರೆ.
– ಡಾ. ನಾ.ದಾಮೋದರ ಶೆಟ್ಟಿ