25 ಮಾರ್ಚ್ 2023, ಮಂಗಳೂರು: ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ‘ಕಲಾಭಿ’ ಕಲಾ ಸಂಸ್ಥೆ ವತಿಯಿಂದ ‘ಅರಳು 2023’ ರಂಗಭೂಮಿ ಕಾರ್ಯಾಗಾರ ಏಪ್ರಿಲ್ 16ರಿಂದ 26ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೊಡಿಯಾಲ್ ಬೈಲ್‌ನ ಕೆನರಾ ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 9ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ ನಡೆಯಲಿದೆ. ಭರವಸೆಯ ನಿರ್ದೇಶಕರಾದ ನವೀನ್ ಸಾಣೆಹಳ್ಳಿ, ಬಿಂದು ರಕ್ಷಿದಿ, ಭುವನ್ ಮಣಿಪಾಲ ಮತ್ತು ಉಜ್ವಲ ಯು.ವಿ.ರವರು ಈ ಕಾರ್ಯಾಗಾರದ ನಾಟಕಗಳನ್ನು ನಿರ್ದೇಶಿಸಲಿದ್ದಾರೆ ಎಂದು ಕೆನರಾ ಕಲ್ಚರಲ್ ಅಕಾಡೆಮಿ ಸಂಯೋಜಕ ಡಾ.ಶೃತಕೀರ್ತಿರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಾಭಿ ಸಂಸ್ಥೆ ಅಧ್ಯಕ್ಷೆ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿ, ಮಂಗಳೂರಿನಲ್ಲಿ ಕಲೆ, ಕಲಾವಿದ ಮತ್ತು ಕಲಿಕೆ; ಈ ಮೂರನ್ನು ಕೇ೦ದ್ರವಾಗಿರಿಸಿಕೊಂಡು ಕಲೆಗಾಗಿ ಕಲಾವಿದ; ಕಲಾವಿದನಿಗಾಗಿ ಕಲೆ ಎಂಬ ಧ್ಯೇಯದೊಂದಿಗೆ ಕಲಾಭಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಮಕ್ಕಳ ಸೃಜನಶೀಲತೆಯನ್ನು ಪೋಷಿಸಲು, ಕಲ್ಪನೆ, ನಟನಾ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಲು ಅರಳು ಕಾರ್ಯಾಗಾರ ವೇದಿಕೆ ಒದಗಿಸುತ್ತದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಉಜ್ವಲ್ ಯು.ವಿ., ಸುರೇಶ್ ನಾಯಕ್ ವರ್ಕಡಿ, ಭುವನ್ ಮಣಿಪಾಲ ಉಪಸ್ಥಿತರಿದ್ದರು.
ನವೀನ್ ಸಾಣೆಹಳ್ಳಿ: ಯುವನಟ ನಿರ್ದೇಶಕರಾದ ನವೀನ್ ಸಾಣೆಹಳ್ಳಿಯವರು “ನೀನಾಸಂ” ಪದವೀಧರರಾಗಿದ್ದು, ಇದುವರೆಗೆ 50 ನಾಟಕಗಳಲ್ಲಿ ಅಭಿನಯಿಸಿ 1500ಕ್ಕೂ ಹೆಚ್ಚು ಪ್ರದರ್ಶನಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನೀಡಿದ್ದಾರೆ. “ಶಿವಕುಮಾರ ಹವ್ಯಾಸಿ ಕಲಾ ಸಂಘ ಸಾಣೆಹಳ್ಳಿ” ಇಲ್ಲಿ ಬಾಲ ಕಲಾವಿದರಾಗಿ ತನ್ನ ಜೀವನವನ್ನು ಆರಂಭಿಸಿದ ಇವರು ಮುಂದೆ ಸಾಣೆಹಳ್ಳಿಯ “ಶಿವ ಸಂಚಾರ” ತಂಡದಲ್ಲಿ ಕಲಾವಿದ ಹಾಗೂ ತಂತ್ರಜ್ಞರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮುಂದೆ 3 ವರ್ಷಗಳ ಕಾಲ “ಥಿಯೇಟರ್ ಸಮುರಾಯ್” ತಂಡದಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ. ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿ ನಾಟಕ ತರಗತಿಯ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ನೀಡಿ ಅನೇಕ ವಿದ್ಯಾರ್ಥಿಗಳನ್ನು ನಟನಾ ಕ್ಷೇತ್ರಕ್ಕೆ ತಂದ ಖ್ಯಾತಿ ಇವರದ್ದು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದಿದ್ದಾರೆ.
ನಾಗತಿಹಳ್ಳಿ ಟೆಂಟ್ ಸಿನೇಮಾ, ಅಭಿನಯ ತರಂಗ, ನವರಸ ನಟನಾ ಅಕಾಡಮಿ ಹೀಗೆ ಹಲವಾರು ಹವ್ಯಾಸಿ ಹಾಗೂ ವೃತ್ತಿಪರ ತಂಡಗಳಲ್ಲಿ ಅಭಿನಯಿಸಿದ ಅನುಭವ ಇವರದ್ದು. ನವೀನ್ ಸಾಣೆಹಳ್ಳಿ ಬಿ.ಎ. ಪದವೀಧರರಾಗಿದ್ದು, “ಆಕ್ಟ್ ರಿಯಾಕ್ಟ್” ತಂಡದ ಸ್ಥಾಪಕ ಸದಸ್ಯರೂ ಆಗಿದ್ದಾರೆ. ಇವರು ರಾಜ್ಯಾದ್ಯಂತ ಹಲವಾರು ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಬಿಂದು ರಕ್ಷಿದಿ: ಬಿಬಿಎಂ ಪದವೀಧರೆಯಾದ ಬಿಂದು ರಕ್ಷಿದಿಯವರು “ನೀನಾಸಂ” ಪದವೀಧರೆಯೂ ಹೌದು.
“ನೀನಾಸಂ” ತಿರುಗಾಟದ ಬಳಿಕ “ಥಿಯೇಟರ್ ಸಮುರಾಯ್” ಹಾಗೂ “ನಟನ” ಮೈಸೂರು ಇಲ್ಲಿ ಕಲಾವಿದೆಯಾಗಿ ಅಭಿನಯಿಸಿದ್ದಾರೆ.
“ಚಾವಡಿ ಥಿಯೇಟರ್” ಹಾಗೂ “ಆಕ್ಟ್ ರಿಯಾಕ್ಟ್” ತಂಡದ ಸ್ಥಾಪಕ ಸದಸ್ಯೆಯಾದ ಬಿಂದು ರಕ್ಷಿದಿ “ಜಂಗಮ ಕಲೆಕ್ಟಿವ್” ಹಾಗೂ “ಆಕ್ಟ್ ರಿಯಾಕ್ಟ್”ನಲ್ಲಿಯೂ ಸೇವೆ ಸಲ್ಲಿಸುತ್ತಿರುವ ಇವರು ಬೆಳ್ಳೆಕೆರೆ ಹಳ್ಳಿ ಥಿಯೇಟರ್ ನಲ್ಲಿಯೂ ಕಲಾವಿದೆಯಾಗಿ ರಂಗಕ್ಕೆ ಬಂದಿದ್ದಾರೆ ಮತ್ತು ಇದುವರೆಗೆ 20ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ 500ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ನೀಡಿದ್ದಾರೆ.
ರಾಜ್ಯಾದ್ಯಂತ ಹಲವಾರು ನಾಟಕ ತರಬೇತಿ ಶಿಬಿರಗಳಲ್ಲಿ ಮತ್ತು ಮಕ್ಕಳ ಶಿಬಿರಗಳಲ್ಲಿ ನಿರ್ದೇಶಕಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನುಭವ ಇವರದ್ದು, “ಝೀ” ಕನ್ನಡ ವಾಹಿನಿಯ “ಕಾಮಿಡಿ ಕಿಲಾಡಿಗಳು” ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ ಇವರು “ಉಘೇ ಉಘೇ ಮದೇಶ್ವರ” ಧಾರಾವಾಹಿಯಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಪಡ್ಡಾಯಿ (ತುಳು) ಇದಂ ಭರತಂ (ಮಲಯಾಳಿ). ಉತ್ತಮರು, ಶುಭಮಂಗಳ, ಗವಿಸಿದ್ದ, ನೆಲೆ, ಪೆಂಟಗಾನ್, ಕಲ್ಸಕ್ರೆ, ಮಗಳೇ, ಕೆಂಡ, ಸೀತಾರಾಮ್ ಬಿನೋಯ್, ಕೊರಮ್ಮ ಮುಂತಾದ ಚಲನಚಿತ್ರಗಳಲ್ಲಿ ನಟಿಯಾಗಿ ಉತ್ತಮ ಅಭಿನಯದೊಂದಿಗೆ ಬೆಳ್ಳಿ ಪದರೆ ಮೇಲೆ ಮಿಂಚಿದ್ದಾರೆ.
ಭುವನ್ ಮಣಿಪಾಲ್: “ನೀನಾಸಂ” ಪದವೀಧರರಾದ ಭುವನ್ ಮಣಿಪಾಲ್ ಇವರು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ರಂಗ ಅಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳಿಗೆ ರಂಗ ನಟನೆಯ ಅಭ್ಯಾಸ ನೀಡಿದ್ದಾರೆ. ಸನಗಮ ಕಲಾವಿದರು (ರಿ) ಮಣಿಪಾಲ, ರಥಬೀದಿ ಗೆಳೆಯರು (ರಿ) ಉಡುಪಿ, ಚಿನ್ನಾರಿ ನಾಟಕ ತಂಡ ಮಣಿಪಾಲ, ಕುಸುಮ ಸಾರಂಗ ಸುಬ್ರಹ್ಮಣ್ಯ, ಸುರಭಿ ಬೈಂದೂರು, ನೃತ್ಯ ನಿಕೇತನ ಕೊಡವೂರು, ಉಡುಪಿ ಮುಂತಾದ ಸಂಸ್ಥೆಗಳಲ್ಲಿ ನಟರಾಗಿ, ರಂಗ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಇವರು ಗಣೇಶ್ ಮಂದಾರ್ತಿ ನಿರ್ದೇಶನದ “ವಾಲಿವಧೆ” ಹಾಗೂ “ಚೋಮನ ದುಡಿ”, ಶ್ರೀಪಾದ್ ಭಟ್ ನಿರ್ದೇಶನದ “ಮಹಿಳಾ ಭಾರತ” ಹಾಗೂ “ಚಿತ್ರ”, ಪ್ರಥ್ವಿನ್ ಕೆ. ವಾಸು ನಿರ್ದೇಶನದ “[email protected]”, ಪ್ರಶಾಂತ್ ಉದ್ಯಾವರ ನಿರ್ದೇಶನದ “We teach life Sir” ಹಾಗೂ ಶಂಕರ್ ವೆಂಕಟೇಶ್ವರನ್ ನಿರ್ದೇಶನದ “ಒಳಾಂಗಣ” ಹೀಗೆ ಹಲವಾರು ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ಗೋವಿನ ಹಾಡು, ಬೆಳಕಿನೆಡೆಗೆ, ಮಕ್ಕಳ ರಾಮಾಯಣ, ಕೊನೆಗೆ ಸಿಕ್ಕಿದ್ದೇನು, ಸಾಹೇಬರು ಬರುತ್ತಾರೆ ಹಾಗೂ ಮೂಕ ನರ್ತನ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಉಜ್ವಲ್ ಯು.ವಿ.: “ನೀನಾಸಂ” ಪದವೀಧರರಾದ ಉಜ್ವಲ್ ಯು.ವಿ.ಯವರು ಕಲೆ ಹಾಗೂ ಕಲಾವಿದರಿಗಾಗಿ ಕಲಾಭಿ (ರಿ) ಸಂಸ್ಥೆಯನ್ನು ಸ್ಥಾಪಿಸಿ ಹಲವು ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಮಂಗಳೂರಿನ “ಸಂಕೇತ” ಹಾಗೂ “ಬಿಂಬ” ಸಂಸ್ಥೆಗಳಲ್ಲಿ ನಟರಾಗಿ ಹಾಗೂ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಇವರುಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡಿ, ತಮಿಳುನಾಡಿನ ವಿವಿಧ ಪ್ರಕಾರದ ಜಾನಪದ ಕಲಾವಿದರಿಂದ ತರಬೇತಿ ಪಡೆದು, ವಿವಿಧ ಶಾಲಾ ಹಾಗೂ ಕಾಲೇಜುಗಳಲ್ಲಿ ಜಾನಪದ ನೃತ್ಯ ಹಾಗೂ ರಂಗ ನಿರ್ದೇಶಕರಾಗಿ “ಪರಂವಾ ಪ್ರೊಡಕ್ಷನ್ಸ್”ರವರ “ಏಕಂ” ವೆಬ್ ಸರಣಿಯಲ್ಲಿ ನಟನಾಗಿ ಹಾಗೂ “ಪರಂವಾ ಪಿಚ್ಚರ್ಸ್”ರವರ “ಸ್ಟ್ರಾಬೆರಿ” ಕನ್ನಡ ಚಲನ ಚಿತ್ರದಲ್ಲಿ ಕಲಾ ನಿರ್ದೇಶಕರಾಗಿ ಅನುಭವ ಪಡೆದಿದ್ದಾರೆ. ಶಾಲಾ ಕಾಲೇಜುಗಳ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಾಡಿನ ಹಲವೆಡೆ ಕಲೆಗೆ ಸಂಬಂಧಿಸಿದ ಕಾರ್ಯಾಗಾರ ಹಾಗೂ ಶಿಬಿರಗಳನ್ನು ನಡೆಸಿ ಕೊಟ್ಟಿರುತ್ತಾರೆ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ರಂಗ ಪ್ರಾಧ್ಯಾಪಕರಾಗಿ ಹಾಗೂ ಕಾರ್ಕಳದ ಯಕ್ಷ ರಂಗಾಯಣದಲ್ಲಿ ಕಲಾವಿದರಾಗಿ ರಂಗ ಭೂಮಿಯ ವಿವಿಧ ಮಜಲುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಕಲಾಭಿ’ ಒಂದು ಕಲಾ ಪಯಣ
ಕಲೆ, ಕಲಾವಿದ ಮತ್ತು ಕಲಾಪೋಷಣೆ ಈ ಮೂರನ್ನು ಕೇಂದ್ರವಾಗಿಸಿಕೊಂಡು, ‘ಕಲೆಗಾಗಿ ಕಲಾವಿದ; ಕಲಾವಿದನಿಗಾಗಿ ಕಲೆ’ ಎನ್ನುವ ಧ್ಯೇಯವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ಕಲಾಭಿ’. ಕಲಾಸಕ್ತಿಯುಳ್ಳ, ಸದಾ ಕಲೆಗಾಗಿಯೇ ತುಡಿಯುವ ಕೆಲ ಯುವಮನಸ್ಸುಗಳ ಸಂಗಮವಿದು! ಕಲೆಯ ಸೌಂದರ್ಯವನ್ನು ಸರ್ವರೂ ಸವಿಯುವಂತಾಗಬೇಕು; ಕಲೆಯನ್ನು ಎಲ್ಲರೂ ಪ್ರೀತಿಸುವಂತಾಗಬೇಕು; ಕಲೆಯ ಮೂಲಕ ರಸಾನುಭವದ ತುತ್ತತುದಿಗೇರಿ, ಪ್ರತಿಯೊಬ್ಬರಲ್ಲೂ ಸಾಮಾಜಿಕ ಜಾಗೃತಿಯನ್ನು ಮೂಡಬೇಕು; ಆದರ್ಶ ಸಮಾಜ ನಿರ್ಮಾಣವಾಗಬೇಕು ಎನ್ನುವುದೇ ಕಲಾಭಿಯ ಗುರಿ. ಸಾವಿರಾರು ಕಲಾಸ್ವಪ್ನಗಳು, ಹಲವಾರು ಗುರಿಗಳು, ಸಾವಿರಾರು ನೋಟಕರ ಮನಸೂರೆಗೊಳ್ಳುವ ಹಪಹಪಿಕೆ ಕಲೆಗಾಗಿ ಮುಡಿಪಾಗುವ ಜೀವಗಳ ನೈಜ ತುಡಿತ. ಕಲೆಯ ಕಲಿಕೆಗಾಗಿ ನೂತನ ದಾರಿಗಳ ಹುಡುಕಾಟ; ಕಲೆಯ ಮೂಲಕ ಪೂರ್ಣತೆಯ ಅಭೀಪ್ಸೆಯನ್ನು ತೀರಿಸುವುದು ಕಲಾಭಿಯ ಮೂಲೋದ್ದೇಶ.