ಬದಿಯಡ್ಕ: ಪಂಜಿಕಲ್ಲು ಶಾಲೆಯ ವಿದ್ಯಾರಂಗದ ಆಶ್ರಯದಲ್ಲಿ ‘ಅರಳುವ ಮೊಗ್ಗುಗಳು’ ಮಕ್ಕಳ ಚಟುವಟಿಕೆಯ ಕಾರ್ಯಕ್ರಮವು ದಿನಾಂಕ 25-01-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಪಂಜಿಕಲ್ಲಿನ ಎಸ್. ವಿ. ಎ. ಯು. ಪಿ. ಶಾಲೆಯ ಸಂಸ್ಕ್ರತ ಶಿಕ್ಷಕಿ ಪಿ. ವಿಜಯಲಕ್ಷ್ಮಿ ಮಾತನಾಡಿ “ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಪರಿಸರವೂ ಪಠ್ಯ. ಪರಿಸರದಲ್ಲಿನ ವಿಶೇಷಗಳೇ ಕವಿಯ ಕಲ್ಪನೆಗೆ ಜೀವ ತುಂಬುತ್ತವೆ. ಇದು ಸಾಹಿತ್ಯದ ಶಕ್ತಿ.” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿದ್ಯಾರಂಗದ ಸಂಚಾಲಕಿ ಹಾಗೂ ಶಿಕ್ಷಕಿಯಾದ ಕೆ. ನಳಿನಾಕ್ಷಿ ಮಾತನಾಡಿ “ನಿರಂತರ ಅಧ್ಯಯನದಿಂದ ಮಾತ್ರ ಸಾಹಿತ್ಯ ರಚನಾ ಶಕ್ತಿ ಕರಗತವಾಗುತ್ತದೆ. ಎಳವೆಯಲ್ಲಿ ಓದುವಿಕೆ ಸಹಿತ ಇತರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕನ್ನಡ ಸಾಹಿತಿ ವಿರಾಜ್ ಅಡೂರು ಮಾತನಾಡಿ “ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಮಾನಸಿಕ ದೃಢತೆ ಹೆಚ್ಚು. ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಿಗೆ ಇದೆ. ಶೈಕ್ಷಣಿಕ ಬದುಕಿನಲ್ಲಿ ವಿದ್ಯಾರ್ಥಿಗಳು ವಿಚಾರಗಳ ಕ್ರೋಢೀಕರಣ ಮಾಡಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಅರಳುವ ಮೊಗ್ಗುಗಳು’ ಕೈಬರಹದ ಕೃತಿಯನ್ನು ಬಿಡುಗಡೆ ಗೊಳಿಸಿದ ವಿರಾಜ್ ಅಡೂರು ಮಕ್ಕಳಿಗಾಗಿ ರೇಖಾಚಿತ್ರ ಹಾಗೂ ಕವನ ರಚನೆಯ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಚಟುವಟಿಕೆಯಲ್ಲಿ ಭಾಗವಹಿಸಿದ ಚಿನ್ಮಯ ಗೌಡ, ವಿವೇಕ್ ರಾಜ್, ಶಾರ್ವರಿ, ರಚನಾ, ವಿಖ್ಯಾತ್ ಹಾಗೂ ದೀಪ ಅನುಭವವನ್ನು ಹಂಚಿಕೊಂಡರು. ಶಿಕ್ಷಕರಾದ ರಾಮಕೃಷ್ಣ, ಎಸ್. ಅನುಶ್ರೀ ಮತ್ತು ವಾಣಿಶ್ರೀ ಸಹಕರಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಶಿವಪ್ರಸಾದ ಸ್ವಾಗತಿಸಿ, ನಿರೂಪಿಸಿ ಶಿಕ್ಷಕಿ ಕೆ. ಅನಿತಾ ವಂದಿಸಿದರು.