ಗಾವಳಿ : ಗಾವಳಿಯ ಯಕ್ಷ ಕುಟೀರದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ಸಂಸ್ಮರಣೆ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರಿಗೆ ಅರಾಟೆ ಮಂಜುನಾಥ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-01-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಮಾತನಾಡಿ “ಕರಾವಳಿ ಮತ್ತು ಮಲೆನಾಡಿನ ಜನರ ಬೌದ್ಧಿಕ ಶ್ರೀಮಂತಿಕೆಗೆ ಕಾರಣವಾದದ್ದು ಯಕ್ಷಗಾನ ಕಲೆ. ಆನಂದದ ಅನುಭೂತಿಯೊಂದಿಗೆ ಬುದ್ಧಿಯ ವಿಕಸನಕ್ಕೆ ಯಕ್ಷಗಾನ ದಾರಿಯಾಗಿದೆ. ರಂಗಸ್ಥಳದಲ್ಲಿ ಕಲೆಯ ಸಾಕ್ಷಾತ್ಕಾರಕ್ಕೆ ಕಾರಣರಾದ ಕಲಾವಿದರನೇಕರು ಪ್ರಾತಃಸ್ಮರಣೀಯರು. ಅಂತಹ ಮೇರು ಕಲಾವಿದರ ಸಾಲಿನಲ್ಲಿ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರು ಅಭಿವಂದನೀಯರು. ಕಲಾವಿದನಾಗಿ, ಸಂಘಟಕನಾಗಿ, ಕಲಾವಿದರ ನೋವಿನ ಧ್ವನಿಯಾಗಿ, ಸಿಡಿಲಾಗಿ ಗುರುತಿಸಿಕೊಂಡವರು ಅರಾಟೆಯವರು. ಹಲವು ಕಲಾವಿದರ ಪ್ರತಿಭಾ ಅನಾವರಣಕ್ಕೆ ಕಾರಣರಾದ ಅರಾಟೆಯವರ ಹೆಸರಿನ ಪ್ರಶಸ್ತಿ ಅರ್ಹರಿಗೆ ದೊರೆತಿದೆ” ಎಂದು ಹೇಳಿದರು.
ಗಣೇಶ್ ಪ್ರಸಾದ್ ಅರಾಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಯಾದವ ಯರ್ಮಾಳ್, ಸರಳೆಬೆಟ್ಟು ಮಕ್ಕಳ ಮೇಳದ ಕಮಲಾಕ್ಷ ಪ್ರಭು. ಅರಾಟೆಯವರ ಧರ್ಮಪತ್ನಿ ಜಲಜಾಕ್ಷಿ ಅರಾಟೆ, ಅರಾಟೆ ಕುಟುಂಬದ ಜಯಶ್ರೀ ಆರ್. ಕೆ., ವಾಣಿಶ್ರೀ ಡಿ. ಅಮೀನ್, ವನಿತಾ ಜಿ.ಪಿ. ಉಪಸ್ಥಿತರಿದ್ದರು.
ಮೋಹನೀಸ್ ಜಿ.ಪಿ. ಅರಾಟೆ ಸ್ವಾಗತಿಸಿ, ವಿದ್ವಾನ್ ಅಶೋಕ್ ಆಚಾರ್ಯ ಸಾಯಿಬ್ರಕಟ್ಟೆ ನಿರ್ವಹಿಸಿ, ಪ್ರಶಂತ್ ರಟ್ಟಾಡಿ ವಂದಿಸಿದರು. ಬಳಿಕ ಮೆಕ್ಕೆ ಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.