ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಘಟಕ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ದಿನಾಂಕ 22-06-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ಶೃಂಗೇರಿ ಸಂಸ್ಕೃತ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾಗಿರುವ ಡಾ. ವಿಶ್ವನಾಥ ಸುಂಕಸಾಳ ಇವರು ‘ಪ್ರಶ್ನೋಪನಿಷತ್’ ಕುರಿತಾಗಿ ಉಪನ್ಯಾಸ ನೀಡುತ್ತಾ “ಭಾರತೀಯ ಸಂಸ್ಕೃತಿಯಲ್ಲಿ ಪ್ರಶ್ನೆಗೆ ಅವಕಾಶವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ನಿಜವಾಗಿ ಪ್ರಶ್ನೆ ಮತ್ತು ಉತ್ತರಗಳೇ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ. ಆತ್ಮಜ್ಞಾನಿಯಾದ ಗುರುವು ತನ್ನ ಜ್ಞಾನಸಂಪತ್ತನ್ನು ನೀಡುವುದಕ್ಕಾಗಿ ಅರ್ಹ ಶಿಷ್ಯನನ್ನು ಹುಡುಕುತ್ತಿರುತ್ತಾನೆ. ಯೋಗ್ಯ ಶಿಷ್ಯನಿಗೆ ತನ್ನ ಜ್ಞಾನವನ್ನು ಧಾರೆಯೆರೆದು ಗುರು ಶಿಷ್ಯ ಪರಂಪರೆಯು ಮುಂದುವರಿಯುವಂತೆ ಮಾಡುವುದೇ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ. ಪ್ರಶ್ನೋಪನಿಷತ್ತಿನಲ್ಲಿ ಆರು ಜನ ಶಿಷ್ಯರು ಬ್ರಹ್ಮಾಂಡದ ರಹಸ್ಯ, ಜೀವಗಳ ಬಾಹ್ಯ ಮತ್ತು ಸೂಕ್ಷ್ಮ ಶರೀರ, ಕರ್ಮ ಮತ್ತು ಉಪಾಸನೆ, ಆತ್ಮಜ್ಞಾನ, ಪ್ರಾಣ, ಆನಂದದ ಸ್ವರೂಪ ಮುಂತಾದ ಪ್ರಮುಖ ಪ್ರಶ್ನೆಗಳನ್ನು ಗುರುಗಳಿಗೆ ಕೇಳಿ ಅದಕ್ಕೆ ಸಂವಾದಗಳ ಮೂಲಕ ಉತ್ತರ ಕಂಡುಕೊಳ್ಳುವುದೇ ಇಲ್ಲಿನ ವಿಶೇಷತೆಯಾಗಿದೆ. ಪ್ರಶ್ನಿಸುವ ಸ್ವಾತಂತ್ರ್ಯ ನಮ್ಮಲ್ಲಿ ಅನಾದಿ ಕಾಲದಿಂದಲೂ ಇತ್ತು ಎನ್ನುವುದಕ್ಕೂ ಉಪನಿಷತ್ತುಗಳೇ ಸಾಕ್ಷಿಯಾಗಿವೆ” ಎಂದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀ ಸುಧಾಕರ ಶ್ಯಾನುಭೋಗ್ ಪ್ರಾರ್ಥಿಸಿ ಮಾಲತಿ ವಸಂತರಾಜ್ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ರಾವ್ ಕಾರ್ಯಕ್ರಮ ನಿರ್ವಹಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಗಣೇಶ ಜಾಲ್ಸೂರು ವಂದಿಸಿದರು.