ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಎಂಬಂತೆ ಸಾಹಿತ್ಯದಲ್ಲಿ, ಕಾವ್ಯದಲ್ಲಿ, ಶಿಲ್ಪದಲ್ಲಿ, ಕಲಾಕೃತಿಯಲ್ಲಿ, ಸಂಗೀತದಲ್ಲಿ, ನಾಟ್ಯದಲ್ಲಿ, ಕನ್ನಡವನ್ನು ಕಟ್ಟುವ ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದೃಶೃಕಲೆಯು ಸಂವಹನದ ಮಾಧ್ಯಮವಾಗಿ ವಿವಿಧ ಉದ್ದೇಶಗಳಿಂದ ಜನರನ್ನು ತಲುಪುತ್ತದೆ. ಇಲ್ಲಿ ಕನ್ನಡ ಲಿಪಿಗಳನ್ನೇ, ವರ್ಣಮಾಲೆಯನ್ನೇ ಅಂದದ ಕೈಬರಹದ ಮೂಲಕ ಕಲಾಕೃತಿಗಳನ್ನಾಗಿಸಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ ಈ ಐದು ಜನ ಯುವ ಕಲಾವಿದರು. ಶ್ರೀ ಅನಿಮಿಶ ನಾಗನೂರು, ಶ್ರೀ ಜಿ. ಹರಿಕುಮಾರ್, ಶ್ರೀ ಮೋಹನ ಕುಮಾರ ಈರಪ್ಪ, ಶ್ರೀ ಸುರೇಶ್ ವಾಘ್ಮೋರೆ, ಶ್ರೀ ಟಿ.ಬಿ. ಕೋಡಿಹಳ್ಳಿ ಇವರು “ಅಕ್ಷರ ಸಿಂಗಾರೋತ್ಸವ೨೩” ಎನ್ನುವ ಹೆಸರಿನಲ್ಲಿ ಈ ಕಲಾಪ್ರದರ್ಶನವನ್ನು ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ‘ಬೆಂಗಳೂರು ಆರ್ಟ ಗ್ಯಾಲರಿ’ಯಲ್ಲಿ ಹಮ್ಮಿಕೊಂಡಿದ್ದಾರೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ ಬಿಂಬಿಸುವ ದಾಖಲಿಸುವ ಮತ್ತು ಕನ್ನಡ ಮನಸ್ಸನ್ನು ಸೆಳೆಯುವ ಪ್ರಯತ್ನ ಇವರದು. ಮಾನವ ವಿಕಾಸವಾದಾಗಿನಿಂದ ವಿವಿಧ ಮಾಧ್ಯಮಗಳಲ್ಲಿ ಕಲ್ಲಿನಿಂದ ಕಂಪ್ಯೂಟರ್ ತನಕ ಅಕ್ಷರದ ಬೆಳವಣಿಗೆ ರೋಚಕವೆನಿಸುತ್ತದೆ. ಕನ್ನಡ ಅಕ್ಷರಗಳು ಅಂದರೆ ಮುತ್ತನ್ನು ಪೋಣಿಸಿದಂತೆ. ಹಾಗಾಗಿ ಕಲಾಕೃತಿಗಳ ಸಂವೇದನೆಗಳು ಅರಿವಿನ ಬೆಳಕಿನಲ್ಲಿ ಉದಯಿಸುವ ಒಂದು ಲಯವಾಗಿ ನಾಟ್ಯಗೈಯ್ಯುವಂತೆ ಭಾಸವಾಗುತ್ತದೆ. ಎನೋ ಸೂತ್ರದಂತೆ ಸಂಕೇತದ ರಹಸ್ಯಗಳು ಅಡಗಿದೆಯೆನೋ ಎನ್ನುವಂತೆ ಗೋಚರಿಸುವ ಕಲಾಕೃತಿಗಳು. ಅಕ್ಷರಗಳು ಕಲ್ಪನಾ ಚಮತ್ಕಾರದಿಂದ ಬೆರಗುಗೊಳಿಸುವ ಕಲಾಕೃತಿಗಳಾಗಿವೆ. ಆಧುನಿಕ ಕಲೆಯ ಎಲ್ಲಾ ಆಯಾಮಗಳೊಂದಿಗೆ ಪಾರಂಪರಿಕ ಅಕ್ಷರ ಜ್ಞಾನದಿಂದ ಮನಸ್ಸನ್ನು ಅರಳಿಸುವ, ಅಕ್ಷರಲೋಕಕ್ಕೆ ಕರೆದೊಯ್ಯುವ ಕೆಲಸ ಸಾರ್ಥಕವಾಗಿದೆ. ಕಲಾಕೃತಿಗಳು ಮೌನವಾಗಿದ್ದು ಕಾವ್ಯದ ಹಣತೆಯನ್ನು ಹಚ್ಚಿವೆ. ಅಕ್ಷರ ಸಂಯೋಜನೆಯಿಂದ ಕಾವ್ಯದ ಮತ್ತು ಸಾಹಿತ್ಯದ ವೈಭವವೇ ಇಲ್ಲಿ ತೆರೆದಿಟ್ಟಂತಿದೆ. ಅಂತರದೃಷ್ಟಿಯ ಗೃಹಣ ಶಕ್ತಿಯಿಂದ ಅಕ್ಷರಗಳು ಇಲ್ಲಿ ಇಂದ್ರಿಯ ಮತ್ತು ಬುದ್ಧಿ ಶಕ್ತಿಯಿಂದಾಗಿ ಕ್ರಿಯಾತ್ಮಕ ದಿವ್ಯ ಕಲಾಕೃತಿಗಳಾಗಿ ಹೊರಹೊಮ್ಮಿದೆ. ಚಿತ್ರಕಲೆಯ ಮೂಲಕ ಕನ್ನಡ ಲೋಕಕ್ಕೆ ಅಮೂಲ್ಯ ಕೊಡುಗೆಯ ಕಲಾಕೃತಿಗಳು “ಕನ್ನಡ ಅಕ್ಷರ ಸಿಂಗಾರೋತ್ಸವ 2023. ನವೆಂಬರ್1 ಕರ್ನಾಟಕ ರಾಜ್ಯೋತ್ಸವ ದಿನದಂದು ಹಿರಿಯ ಕಲಾವಿದರಾದ ಶ್ರೀ ಚಿ. ಸು. ಕೃಷ್ಣಸೆಟ್ಟಿ, ಶ್ರೀ ಕೆ. ಸಿ. ಜನಾರ್ದನ್, ಶ್ರೀ ಗಣಪತಿ. ಎಸ್. ಹೆಗಡೆ, ಶ್ರೀ ಬಾಬು ಜತ್ಕರ್, ಶ್ರೀ ರವೀಂದ್ರ ಎಸ್.ದೇಶಮುಖ್, ಮತ್ತು ಶ್ರೀ ಧರ್ಮೇಂದ್ರ ರಂಗೈನ್ ಅವರಿಂದ ಉದ್ಘಾಟನೆಗೊಂಡಿತು. ಬೆಂಗಳೂರು ಆರ್ಟ್ ಗ್ಯಾಲರಿ, ಯುವಪಥದಲ್ಲಿ ಈ ಪ್ರದರ್ಶನವು ನವೆಂಬರ್ 30ರ ವರೆಗೆ ತೆರೆದಿರುತ್ತದೆ. ನೀವು ಹೋಗಿ ಬನ್ನಿ.
- ಗಣಪತಿ. ಎಸ್ ಹೆಗಡೆ