ಮನುಷ್ಯ ಎಷ್ಟೇ ಗಂಭೀರವಾಗಿ, ಗಾಂಭೀರ್ಯ ತೋರ್ಪಡಿಸುತ್ತಿದ್ದರೂ ಒಮ್ಮೊಮ್ಮೆ ಆತ್ಮೀಯರೊಂದಿಗೆ, ಮನೆಯವರೊಂದಿಗೆ, ಏಕಾಂತದಲ್ಲಿ ತನ್ನ ವ್ಯಂಗ್ಯ ಮುಖಭಾವವನ್ನು ಪ್ರದರ್ಶನ ಪಡಿಸುತ್ತಿರುತ್ತಾನೆ, ಒಮ್ಮೊಮ್ಮೆ ಕ್ಯಾಂಡಿಡ್ ಛಾಯಾಗ್ರಹಣದಲ್ಲಿ ನಮ್ಮ ವಿಶೇಷ ಹಾವ ಭಾವ ನೋಡಿ ನಾವೇ ಖುಷಿ ಪಡ್ತಾ ಇರ್ತೇವೆ. ವಿಕಟ ಕಲಾವಿದ ಶ್ರೀ ನಂಜುಂಡಸ್ವಾಮಿಯವರು ಭಾವಚಿತ್ರವನ್ನು ವ್ಯಂಗ್ಯಚಿತ್ರವನ್ನಾಗಿ ರಚಿಸುವುದರಲ್ಲಿ ಸಿದ್ಧಹಸ್ತರು. ನಂಜುಂಡಸ್ವಾಮಿಯವರು ನೃತ್ಯ ಗುರು ಅಲ್ಲದೆ ಇರಬಹುದು ಆದರೆ ಮುಖದ ಎಲ್ಲ ಹಾವಭಾವಗಳು ಇವರಿಗೆ ಕರಗತವಾಗಿದೆ.
ದಾಳಿಂಬೆಯ ದಂತಪಂಕ್ತಿಯಲ್ಲೂ ಎಲ್ಲೋ ಗೊಗ್ಗಲ್ಲುಗಳು ಇವರಿಗೆ ಕಾಣುತ್ತವೆ. ಕಮಲದ ಕಣ್ಣು ಕೂಡ ಎಲ್ಲೋ ಮೆಳ್ಳೆಗಣ್ಣಿದ್ದ ಹಾಗೆ, ಸಂಪಿಗೆ ನಾಸಿಕ ಕೂಡ ಸ್ವಲ್ಪ ಓರೆಯಾಗಿ, ಲ್ಯಾಕ್ಮಿ ಲೇಪಿತ ಗಾಂಭೀರ್ಯದ ತುಟಿ ಕೂಡ ಬಾಯ್ತೆರೆದು ಎನೋ ಹೇಳುವಂತೆ ಚಿತ್ರಿಸುತ್ತಾರೆ. ಮುಖ, ಜಡೆ, ಕೇಶರಾಶಿ, ಹಸ್ತಾದಿ ವಿನ್ಯಾಸಗಳಿಂದಾಗಿ ನಂಜುಂಡಸ್ವಾಮಿ ಶೈಲಿ ಅನ್ನುವಂತೆ ಗುರುತಿಸಲ್ಪಡುತ್ತದೆ.
ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗಷ್ಟೇ ಸೀಮಿತವಾಗಿದ್ದ ವ್ಯಂಗ್ಯಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹಾಸ್ಯದ ದೃಷ್ಟಿಕೋನದಿಂದಾಗಿ ವ್ಯಕ್ತಿಯ ವಿಕಟಚಿತ್ರಗಳಿಗೂ ಬೇಡಿಕೆ ಜಾಸ್ತಿಯಾಗಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನಲ್ಲಿ ಸಾಹಿತಿಗಳ ವ್ಯಂಗ್ಯಚಿತ್ರ ಕಲಾಪ್ರದರ್ಶನ ನವೆಂಬರ ಒಂದು ರಾಜ್ಯೋತ್ಸವ ದಿನದಿಂದ ನಡೆಯುತ್ತಿದೆ. ಮಾಸ್ತಿಯಿಂದ ದುಂಡಿರಾಜರ ತನಕ ತೊಂಬತ್ತಕ್ಕೂ ಹೆಚ್ಚು ಸಾಹಿತಿಗಳ ವ್ಯಂಗ್ಯಚಿತ್ರ ಕಲಾಪ್ರದರ್ಶನ ಇದಾಗಿದೆ. ಹತ್ತೆಂಟು ವಿಷಯಗಳೊಂದಿಗೆ, ಉದ್ವೇಗ, ಶಾಂತ, ತಿಳಿನಗು, ಗಂಭೀರ, ಹಾಸ್ಯ ಇವೆಲ್ಲ ಭಾವಗಳೊಂದಿಗೆ, ವ್ಯಕ್ತಿಯ ರೂಪ ಆಕೃತಿ ಯಥಾವತ್ತಾಗಿರದೆ ಅದೇ ಲಕ್ಷಣಗಳು ಹೋಲುವಂತೆ ಗೋಚರಿಸಿ ಆಕಾರದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ಒಂದೊಂದು ಚಿತ್ರದಲ್ಲೂ ಚೈತನ್ಯ ತುಂಬಿ ಜೀವಂತವಾಗಿ ಲಯಬದ್ಧವಾಗಿ ಸಂವಾದಿಸುವಂತೆ ಭಾಸವಾಗುತ್ತದೆ. ಹುಲಿವೇಷದಂತೆ ಒಂದೇ ಬಣ್ಣ ಬಳಿಯದೆ ಹತ್ತಾರು ವರ್ಣಗಳಿಂದ ಕಲಾವಿದನ ಕೌಶಲ್ಯದ ಸಂಪೂರ್ಣ ಅಭಿವ್ಯಕ್ತಿ ಇದಾಗಿದೆ. ಸಮಸ್ತ ಭಾವಗಳನ್ನು ಸಂದರ್ಭೋಚಿತವಾಗಿ ಉಪಯೋಗಿಸುವ ಸಿದ್ಧಿ ನಂಜುಂಡಸ್ವಾಮಿಯವರಿಗೆ ಸಿದ್ಧಿಸಿದೆ. ವಾಸ್ತವಕ್ಕಿಂತ ಭಿನ್ನವಾಗಿ ಭಾವ ವೈಭವ ಇಲ್ಲಿ ಕಂಗೊಳಿಸಿದೆ. ‘ಕುಂಚ ಕಂಡ ಕನ್ನಡ ಸಾಹಿತಿಗಳು’ ಹೆಸರಿನಲ್ಲಿ ಈ ಪ್ರದರ್ಶನ ನಡೆಯುತ್ತಿದೆ.
ಅಂತರಂಗದಲ್ಲಿ ಅವರ ಸ್ವಭಾವವನ್ನೆಲ್ಲ ತುಂಬಿಕೊಂಡು ಮನಸ್ಸು ಮತ್ತು ಕೈಗಳ ಮೂಲಕ ತಂತ್ರಜ್ಞಾನದ ಎಲ್ಲಾ ಕಲಾ ಆಯಾಮಗಳನ್ನು ಉಪಯೋಗಿಸಿದ ವಿಸ್ತ್ರತ ಸ್ವಚ್ಛಂದ ಅಭಿವ್ಯಕ್ತಿ ಇಲ್ಲಿ ಕಾಣಬಹುದು. ಅವರೇ ಹೇಳುವಂತೆ ಒಂದು ಚಿತ್ರ ಪರಿಪೂರ್ಣ ರಚನೆಗೆ ಆರು ಗಂಟೆಗಳ ಕಾಲ ಹಿಡಿಯುತ್ತದೆ. ಅಲ್ಲಲ್ಲಿ ರೇಖೆಗಳನ್ನು ಉಪಯೋಗಿಸುತ್ತಾ ವಸ್ತು ಮತ್ತು ತಂತ್ರಗಾರಿಕೆಯಿಂದಾಗಿ, ಸೂತ್ರಬದ್ದ ಸಾಂಗತ್ಯದಿಂದಾಗಿ, ಜಾಣ್ಮೆ, ನೈಪುಣ್ಯತೆ ಎದ್ದು ತೋರುತ್ತದೆ. ಮುಖಭಾವವನ್ನು ಯಾವೆಲ್ಲ ರೀತಿಯಿಂದ ನೋಡಲು ಸಾಧ್ಯವೋ ಅವೆಲ್ಲವುಗಳಿಂದ ಖುಷಿ ಪಡುವ ಯೋಗ ನಮ್ಮದು. ಇಂತಹ ಕಲಾಕೃತಿಗಳನ್ನು ಸರ್ಕಾರ, ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್, ಸಾಹಿತಿಗಳು, ಅವರ ಸಂಭಂದಿಕರು ಖರೀದಿಸಿದಲ್ಲಿ ಕಲಾವಿದನ ಬದುಕು ಸುಂದರವಾದೀತು. ಈ ಪ್ರದರ್ಶನ 20 ನವೆಂಬರ್ 2023 ತನಕ ನಡೆಯಲಿದೆ. ಒಮ್ಮೆ ಭೇಟಿ ನೀಡಿ.
- ಗಣಪತಿ ಎಸ್. ಹೆಗಡೆ
ಕಲಾವಿದರು/ಕಲಾವಿಮರ್ಶಕರು