ಅಲ್ಲಿ ಒಂದು ಹಬ್ಬದ ಸಂಭ್ರಮವಿತ್ತು. ಸುಂದರ ಕಲಾಕೃತಿಗಳನ್ನು ನೋಡುವ ಕುತೂಹಲವಿತ್ತು. ಕಲಾಕೃತಿಗಳಿಂದ ಮನೆಯನ್ನು ಅಲಂಕರಿಸುವ ತವಕವಿತ್ತು. ಹಲವು ಮನಸ್ಸಿನ ಬಣ್ಣದ ಬೆಡಗಿತ್ತು. ಇದೆಲ್ಲಾ ಇದ್ದದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. 2003ರಲ್ಲಿ ಪ್ರಾರಂಭವಾದ ಚಿತ್ರಸಂತೆ ವರ್ಷದಿಂದ ವರ್ಷಕ್ಕೆ ಕಲಾಸಕ್ತರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.
ಆರಂಭದಲ್ಲಿ ಕೇವಲ ಸಾವಿರದಷ್ಟು ಜನ ಬರುತ್ತಿದ್ದ ಚಿತ್ರಸಂತೆ ಇವತ್ತು ಲಕ್ಷ ಲಕ್ಷ ಜನರನ್ನು ಸೆಳೆಯುತ್ತಿದೆ. ಮನೆಗೊಂದು ಕಲಾಕೃತಿ ಬೇಕೆಂದರೆ ಮುಂದಿನ ಚಿತ್ರಸಂತೆಯವರೆಗೆ ಕಾಯುವಂತೆ ಮಾಡಿದೆ. ಯುವ ಕಲಾವಿದರಿಗಂತೂ ಇದೊಂದು ಪ್ರಧಾನ ಕಲಾವೇದಿಕೆ. ಚಿತ್ರಸಂತೆಗಂದೇ ಚಿತ್ರ ರಚಿಸುವ ಕಲಾವಿದರಿದ್ದಾರೆ. ಅಲ್ಲಿ ಕಲಾಕೃತಿಗಳನ್ನು ಖರೀದಿಸುವವರ ಮನದ ಮಿಡಿತವನ್ನು ಯುವ ಕಲಾವಿದರು ಅರಿತಿದ್ದಾರೆ. ಒಂದು ವಾರ್ಷಿಕ ಸಂಭ್ರಮವನ್ನು ಮುಂದಿಟ್ಟುಕೊಂಡು ವರ್ಷಪೂರ್ತಿ ಕಲಾಕೃತಿಗಳನ್ನು ನಿರ್ಮಿಸುವುದು ಅದೊಂದು ಪೂಜೆಯೇ ಸರಿ.
2024ರ ಚಿತ್ರಸಂತೆ, ಬೆಂಗಳೂರಿನ ಜನರು ಕಲಾಪ್ರಿಯರು ಎನ್ನುವುದನ್ನು ಸಾಬೀತು ಪಡಿಸಿದೆ. ಮಾನ್ಯಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡು , ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಲಕ್ಷ ಲಕ್ಷ ಜನರ ಮನಸೂರೆಗೊಂಡ ಚಿತ್ರಸಂತೆ. ಕರೋನಾಕ್ಕೂ ಕ್ಯಾರೇ ಅನ್ನದ ಜನ ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು.
1500ಕ್ಕೂ ಹೆಚ್ಚು ಕಲಾಮಳಿಗೆಯಿಂದ ತುಂಬಿತ್ತು. ಬೆಳಿಗ್ಗೆ 7ಗಂಟೆಯಿಂದ ಸಂಜೆ 8 ಗಂಟೆಯ ತನಕ ಜನಜಾತ್ರೆಯೇ ನೆರೆದಿತ್ತು. ಹಕ್ಕಿಯ ಗರಿಯ ಮೇಲಿನ ಚಿತ್ರದಿಂದ ಹಿಡಿದು ಪೋಸ್ಟ್ ಕಾರ್ಡಿನ ಚಿತ್ರ ಸಹಿತವಾಗಿ ಕಲಾ ಮಾಧ್ಯಮದ ಎಲ್ಲಾ ಪ್ರಕಾರದ ಚಿತ್ರಗಳನ್ನು ಕಾಣಬಹುದಾಗಿತ್ತು. ಕೊಲ್ಕತ್ತಾ, ಕೇರಳ, ಪೂನಾ, ಮುಂಬಯಿ ಚೆನ್ನೈಯಿಂದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಲಾಕೃತಿಗಳ ಮಾರಾಟವೂ ಭರ್ಜರಿಯಾಗಿಯೇ ನಡೆದಿತ್ತು.
ಭಾವಚಿತ್ರವನ್ನು ಬಿಡಿಸುವ ಕಲಾವಿದರಿಗೆ ಬೇಡಿಕೆ ಜೋರಾಗಿತ್ತು. 21ನೇಯ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿತ್ತು. ಚಿಣ್ಣರಿಂದ ವೃದ್ಧರ ತನಕ ಎಲ್ಲರ ಮುಖದಲ್ಲೂ ಮಂದಹಾಸವಿತ್ತು. ಕಲಾಸಂಭ್ರಮ, ಕಲಾಹಬ್ಬ ಕಣ್ತುಂಬಿಕೊಂಡಿದ್ದು ಮತ್ತು ಸ್ನೇಹಿತರನ್ನೆಲ್ಲಾ ಭೇಟಿಯಾಗಿದ್ದು ಎಲ್ಲರನ್ನೂ ಧನ್ಯರನ್ನಾಗಿಸಿತ್ತು. 2024ರ ಚಿತ್ರಸಂತೆ ಚಂದದ ಚಿತ್ರಸಂತೆಯಾಗಿ ಸಂಪನ್ನಗೊಂಡಿತು.
ಗಣಪತಿ ಎಸ್. ಹೆಗಡೆ
ಕಲಾವಿದರು /ಕಲಾವಿಮರ್ಶಕರು
1 Comment
ಬರಹ ತುಂಬಾ ಚೆನ್ನಾಗಿ ಮನವರಿಕೆಯಾಗುವಂತೆ ಬಂದಿದೆ.
ಧನ್ಯವಾದಗಳು ಸರ್.