ಸಮುದ್ರದ ತೆರೆಗಳು ಸ್ನಾನಕ್ಕೋಸ್ಕರವೇ ಬೇರೆಯಾಗಿ ಬರುವುದಿಲ್ಲ. ಬಂದ ತೆರೆಗೆ ನಾವು ತಲೆಯೊಡ್ಡಿ ಸ್ನಾನ ಮಾಡಬೇಕು. ಬದುಕಿನಲ್ಲೂ ಅವಕಾಶಗಳು ನಮಗೋಸ್ಕರವೇ ಬೇರೆಯಾಗಿ ಸೃಷ್ಟಿಯಾಗುವುದಿಲ್ಲ. ಇದ್ದ ಅವಕಾಶವನ್ನೇ ನಮ್ಮದಾಗಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಡಾ. ಸುಬೋಧ ಕೆರ್ಕರ್ ಅವರು ದಿನನಿತ್ಯ ಸಮುದ್ರವನ್ನು ನೋಡುತ್ತಾ, ನಡೆಯುತ್ತಾ ಕಲಾವಿದರಾಗಿ ರೂಪುಗೊಂಡು ಕಲೆಯನ್ನು ಸಿದ್ಧಿಸಿಕೊಂಡವರು. ಸಮುದ್ರದ ತೆರೆಗಳು ಬಂದ ಹಾಗೆ ಇವರಲ್ಲಿ ಕಲಾ ಅಲೆಗಳು ರೂಪುಗೊಂಡವು. ಡಾಕ್ಟರ್ ಆಗಿ ರೋಗಿಗಳ ಮೈದಡವಿ ಸಾಂತ್ವನ ಹೇಳುತ್ತಿದ್ದವರು ಕಲೆಗೆ ಮಾರುಹೋಗಿ ಕಲಾವಿದರಾದವರು. ಗೋವಾ ಸಮುದ್ರ ದಂಡೆಯ ನಿಸರ್ಗ ಸವಿಯನ್ನು ಸವಿಯುತ್ತಾ ಕಲಾಸೃಷ್ಟಿಯಲ್ಲಿ ತೊಡಗಿಸಿಕೊಂಡವರು. ಗೋವಾ ಬೀಚಿನ ಮರಳಿನ ವಾಸನೆಯನ್ನೇ ಕಲೆಯಾಗಿಸಿದವರು. ಬೆಂಗಳೂರಿನ ಕಿಂಕಿಣಿ ಆರ್ಟ್ ಗ್ಯಾಲರಿಯಲ್ಲಿ Fish Tales & Catamarans ಹೆಸರಿನಲ್ಲಿ ಇವರ ಕಲಾಪ್ರದರ್ಶನ ನಡೆಯುತ್ತಿದೆ.
ಮೀನುಗಾರರ ಮುಖದ ಭಾವನೆಗಳು, ಮರಳಿನಲ್ಲಿ ಮೂಡಿದಂತೆ ಕಾಣುವ ಭಿತ್ತಿ ಶಿಲ್ಪಗಳು, ಗೂಡು ಬಿಟ್ಟು ಹಾರಿಹೋದ ಕಣಜದ ಗೂಡು, ಜೇನುಗೂಡಿನ ಮರದಲ್ಲಿ ಕಾಣುವ ಅವಶೇಷದ ಬಿಳಿಪೊರೆಗಳು, ಮಂಗೇಶ್ಕರ್ ದೇವಸ್ಥಾನದ ಕಾವಿಕಲೆಯ ಚಿತ್ರದಂತೆ ಕಾಣುವ ಬಣ್ಣದ ಚಿತ್ರಗಳು. ಮೀನಿನ ಬುಟ್ಟಿಯನ್ನು, ಬಲೆಯನ್ನು ಹೊತ್ತ ಬಿನ್ನಾಣಗಿತ್ತಿಯಂತೆ ಸಾಗುವ ಮೀನುಗಾರ್ತಿಯರ, ಮೀನುಗಾರರ ಚಿತ್ರಗಳನ್ನು ಅಲ್ಲಿಯ ಜನಜೀವನವನ್ನು ಮತ್ತು ದೈನಂದಿನ ವೈವಿಧ್ಯಮಯ ಬದುಕನ್ನು ತಮ್ಮದೇ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಇಲ್ಲಿಯ ಮಸಾಲೆ ಮುಖ್ಯವಾದ ಕಾಳು ಮೆಣಸು, ಕೆಂಪು ಮೆಣಸಿನಕಾಯಿ ಕೂಡಾ ಇವರ ಚಿತ್ರದ ವಿಶೇಷಗಳು. ಗೋವಾದ ಇತಿಹಾಸ ಮತ್ತು ಸಂಸ್ಕೃತಿಯನ್ನು ಜಾನಪದ ರೀತಿಯಲ್ಲಿ ಬಿಂಬಿಸುತ್ತಾ ಸಮ್ಮೋಹನಗೊಳಿಸುವ ಕಲಾಕೃತಿಗಳು. ತುಂಡುಡುಗೆಯ ದೃಶ್ಯಗಳಿಲ್ಲದೆ ಭಾಗಾಬೀಚ್, ಕಲ್ಲೊಂಗಟ್ ಬೀಚ್, ಅಂಜನಾ ಬೀಚ್, ಬೈನಾ ಬೀಚಿನಲ್ಲಿ ಅಡ್ಡಾಡಿದ ಕಡಲತೀರದ ಪ್ರಯಾಣದ ಅನುಭವ ತರುವಂತಹುದು. ಚಿತ್ರತಂತ್ರಗಳಲ್ಲಿ ಭಾವೋದ್ವೇಗ ಸಂವೇದನೆಗಳಿಂದ, ಆಂತರಿಕ ಭಾವನೆಗಳಿಂದಾಗಿ ಸಮ್ಮೋಹನಗೊಳಿಸುವ ಕಲಾಕೃತಿಗಳು.
ಪ್ರಸಿದ್ದ ಕಲಾವಿದರಾದ ಎಫ್.ಎನ್. ಸೋಜಾ ಅವರ ಕಲಾಕೃತಿಗಳನ್ನು ನೆನಪಿಸುವಂತೆ ತೋರಿದರೂ, ಇವರದೇ ಆದ ವೈಯಕ್ತಿಕ ನೆಲೆಯಲ್ಲಿ ರೂಪುಗೊಂಡ ಕಲಾಕೃತಿಗಳು. ಅವರೇ ಹೇಳುವಂತೆ ಪ್ರಾರಂಭದಲ್ಲಿ ಇವರ ಮೇಲೆ ಸೋಜಾ ಅವರ ಕಲಾಕೃತಿಗಳು ಅತ್ಯಂತ ಪ್ರಭಾವ ಬೀರಿದ್ದವು. ಕೋಟಿ ಕೋಟಿ ಜನರಿದ್ದರೂ ಒಬ್ಬೊಬ್ಬರೂ ಬೇರೆ ಬೇರೆಯಾಗಿ ಕಾಣುವಂತೆ ಇವರ ಶೈಲಿಯು ಭಿನ್ನವಾಗಿ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಮರ, ಮರಳು, ಸೆರಾಮಿಕ್, ಬಣ್ಣ ಎಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡು ಕಲಾತ್ಮಕವಾಗಿಸಿದ್ದಾರೆ. ಹುಟ್ಟಿದ ಊರು ಸ್ವರ್ಗಕ್ಕಿಂತ ಮಿಗಿಲು ಅನ್ನುವಂತೆ ಗೋವಾವನ್ನೇ ತನ್ನ ಚಿತ್ರದ ವಸ್ತುವನ್ನಾಗಿಸುವ ಮೂಲಕ ಕೊಂಕಣ ಕ್ಷೇತ್ರವನ್ನು ಪ್ರಪಂಚದಾದ್ಯಂತ ಪರಿಚಯಿಸುವ ಪ್ರಯತ್ನ ಇವರದು. ಸಮುದ್ರ ಗರ್ಭದ ನಿಗೂಢತೆಯಂತೆ ಇವರ ಪ್ರತಿಯೊಂದು ಚಿತ್ರವೂ ಒಂದೊಂದು ಕಥೆಯನ್ನು ಹೇಳುತ್ತ ಕಾವ್ಯವನ್ನು ಓದಿದಂತೆ ಭಾಸವಾಗುವ ಕಲಾಕೃತಿಗಳು. ಗೋವಾದಲ್ಲಿ ಇವರದೇ ಆದ ಸ್ವಂತ ಮ್ಯೂಸಿಯಂ ಕೂಡಾ ಹೊಂದಿದ್ದಾರೆ. ದಿನಾಂಕ 13-10-2023ರಂದು ಕಿಂಕಿಣಿ ಗ್ಯಾಲರಿ ಸಂಸ್ಥಾಪಕ ವಿವೇಕ್ ರಾಧಾಕೃಷ್ಣನ್ ಅವರಿಂದ ಒಡಗೂಡಿ ಉದ್ಘಾಟನೆಗೊಂಡ ಈ ಕಲಾಪ್ರದರ್ಶನ ದಿನಾಂಕ 11-11-2023ರ ತನಕ ನಡೆಯಲಿದೆ.
- ಗಣಪತಿ ಎಸ್. ಹೆಗಡೆ , ಕಲಾ ವಿಮರ್ಶಕರು, ಬೆಂಗಳೂರು