ಉಡುಪಿ : ಭಾವನಾ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಯವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳು ‘ಮಾರುತ ಪ್ರಿಯ’ ಎನ್ನುವ ಶೀರ್ಷಿಕೆಯಡಿಯಲ್ಲಿ ದಿನಾಂಕ 15ರಿಂದ 24ನೇ ಸೆಪ್ಟಂಬರ್‌ವರೆಗೆ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ನಡೆಯಿತು.
ಕಲಾಪ್ರದರ್ಶನದಲ್ಲಿ ಕೊಂಕಣ ಕರಾವಳಿಯ ಅಳಿವಿನಂಚಿನಲ್ಲಿರುವ ಕಾವಿ ಕಲೆಯ ಬಗೆಗಿನ ವಿಸ್ತೃತ ಅಧ್ಯಯನವನ್ನು ನಡೆಸಿ ಅದರ ಉಳಿವಿಗಾಗಿ ಶ್ರಮಿಸುತ್ತಲಿರುವ ಜನಾರ್ದನ ಹಾವಂಜೆಯವರ 18ಕಾವಿ ಕಲೆಯ ಕಲಾಕೃತಿಗಳೂ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ಕಲಾತ್ಮಕ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಂಡಿರುವ ಸಂತೋಷ್ ಪೈಗಳ 12 ಛಾಯಾಚಿತ್ರಗಳು ಮತ್ತು ಹಲವು ರೇಖಾಚಿತ್ರಗಳು ಇಲ್ಲಿ ಪ್ರದರ್ಶನಕ್ಕಿದ್ದವು.
ಹಾವಂಜೆಯವರು ಹೇಳುವಂತೆ “ಕಾವಿ ಕಲೆ ಎಂದರೆ ಸುಣ್ಣ ಹಾಗೂ ಕೆಮ್ಮಣ್ಣಿನ ಬಳಕೆಯೊಂದಿಗೆ ಕೆಂಪು ಹಾಗೂ ಬಿಳಿ ಎರಡೇ ವರ್ಣಗಳನ್ನು ಬಳಸಿ ಗೀರುತ್ತ, ಕೆರೆಸಿ ತೆಗೆದು ಕಲಾಕೃತಿ ನಿರ್ಮಿಸಿಕೊಳ್ಳುವ ಪದ್ಧತಿ. ಈ ಕಲೆಯು ಕೇವಲ ಚಿತ್ರಕಲೆಯೆಂಬುದಾಗಿ ಹಲವರ ಅಭಿಪ್ರಾಯಗಳಿವೆ. ಆದರೆ ಕಾವಿಕಲೆಯು ಗಾರೆಯೊಂದಿಗೆ ಭಿತ್ತಿಚಿತ್ರ ಪದ್ಧತಿಯನ್ನೊಳಗೊಳ್ಳುವ ಮತ್ತು ಚಿತ್ರಶೈಲಿಯ ಹೊರತಾಗಿ ತಾಂತ್ರಿಕ ಅಂಶಗಳೇ ಪ್ರಧಾನವಾಗುವ ಒಂದು ಕಲಾಪ್ರಕಾರವಾಗಿದೆ.”
ಸಾಮಾನ್ಯವಾಗಿ ಈ ಕಲೆಯಲ್ಲಿ ಹಲವಾರು ಬಗೆಯ ಪೌರಾಣಿಕ ಸನ್ನಿವೇಶಗಳ ನಿರ್ಮಾಣವನ್ನು ಕಾಣುತ್ತೇವಾದರೂ ಹಾವಂಜೆಯವರ ಕಾವಿಕಲಾಕೃತಿಗಳು ವಿಭಿನ್ನವಾಗುವುದು ಇದರಲ್ಲಿನ ಶೈಲಿಗಾಗಿ. ಓರ್ವ ಸಾಂಪ್ರದಾಯಿಕ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಹಾವಂಜೆಯವರು ಯಕ್ಷಗಾನೀಯ ಶಿಸ್ತಿನಲ್ಲಿ ಅದರ ಅಂಗಭಂಗಿಗಳು, ವೇಷಭೂಷಣಗಳನ್ನು ಗಣೇಶ ಮತ್ತು ಕೃಷ್ಣನಿಗೆ ತೊಡಿಸಿ ತಮ್ಮ ಕಲಾಕೃತಿಗಳಲ್ಲಿ ಪ್ರದರ್ಶಿಸಿರುವುದು ಕಲಾವಿದನೋರ್ವನ ತನ್ನತನಕ್ಕೆ ಸಾಕ್ಷಿಯಾಗುವ ಸೃಜನಶೀಲ ಅಭಿವ್ಯಕ್ತಿಯಾಗಿ ಇಲ್ಲಿ ಎದ್ದು ನಿಲ್ಲುತ್ತದೆ.
ಪುರಾಣದ ಅರಿವಿದ್ದುಕೊಂಡು ಮುದ್ಗಲ ಪುರಾಣದಲ್ಲಿ ಹೇಳಿರುವ ಪ್ರತಿಮಾ ಲಕ್ಷಣಗಳಂತೆ ಸಿಂಹ ಗಣಪತಿ, ಹೇರಂಬ ಗಣಪತಿ, ಸಿದ್ಧಿವಿನಾಯಕ, ಏಕದಂತ, ಮಹಾಗಣಪತಿ ಮೊದಲಾದ ಸುಮಾರು ಹದಿಮೂರು ಗಣೇಶನ ಕಲಾಕೃತಿಗಳೂ, ಕೃಷ್ಣನಿಗೆ ಸಂಬಂಧಿಸಿ ಗಿರಿಧಾರಿ ಕೃಷ್ಣ, ಉಡುಪಿಯ ಕೃಷ್ಣ, ಶರಸೇತು ಬಂಧನ, ನವನಾರೀಕುಂಜರ ಮೊದಲಾದ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಿತ್ತು.
ಭಾರತಾದ್ಯಂತ ಸಂಚರಿಸುತ್ತ ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಹಲವಾರು ಅನುಭಗಳ ನಡುವೆ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಪ್ರಾಕೃತಿಕ, ಮಾನವಿಕ ಹಾಗೂ ಕೆಲ ಸೈದ್ಧಾಂತಿಕ ವಸ್ತುಗಳನ್ನು ಸಮೀಕರಿಸುತ್ತ ಅದನ್ನು ತನ್ನ ಚೌಕಟ್ಟಿನಲ್ಲಿಡುವ ಪ್ರಯತ್ನವನ್ನು ಸಂತೋಷ್ ಪೈಗಳ ಛಾಯಾಚಿತ್ರಗಳಲ್ಲಿ ಕಾಣುತ್ತೇವೆ. ಸಮಕಾಲೀನ ಅಭಿವ್ಯಕ್ತಿಗಳ ಡಿಪ್ಟಿಚ್ ಛಾಯಾಚಿತ್ರಗಳು ಎರಡು ವಿಭಿನ್ನ ಸನ್ನಿವೇಶಗಳನ್ನು ಒಂದರ್ಥದಲ್ಲಿ ನೋಡುವ ಹಾಗೂ ಈ ದೈವಿಕ ಹಿನ್ನೆಲೆಯುಳ್ಳ ವ್ಯಕ್ತಿ ಹಾಗೂ ಶಕ್ತಿಗಳನ್ನು ಅರ್ಥೈಸಿಕೊಳ್ಳುವ ಹಿನ್ನೆಲೆಯೊಂದಿಗೆ ಚೌಕಟ್ಟನ್ನು ಪಡೆದಿದೆ. ಪೈಗಳು ಛಾಯಾಚಿತ್ರಗಳಷ್ಟೇ ಅಲ್ಲದೇ ಹಲವು ರೇಖಾಚಿತ್ರಗಳನ್ನೂ , ಜಲವರ್ಣದ ಚಿತ್ರಗಳನ್ನೂ ಕೂಡ ಪ್ರದರ್ಶನದಲ್ಲಿರಿಸಿದ್ದರು.
ಈ ಕಲಾ ಪ್ರದರ್ಶನದಲ್ಲಿ ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಉದ್ದೇಶವೊಂದೆಡೆಯಾದರೆ, ಇಲ್ಲಿ ಬಹು ಶಿಸ್ತೀಯ ಕಲಾ ಚಟುವಟಿಕೆಗಳನ್ನೂ ಹಮ್ಮಿಕೊಂಡ ಪ್ರಯತ್ನ ಉಡುಪಿಗೆ ಹೊಸದು. ಪ್ರಾಚೀನ ಗ್ರಂಥಗಳಲ್ಲಿ ಪ್ರತಿಮಾ ಶಾಸ್ತ್ರ ಹಾಗೂ ಸ್ಥಳೀಯವಾಗಿ ಮೂರ್ತಿಶಿಲ್ಪಗಳಲ್ಲಿನ ಅನನ್ಯತೆ ಕುರಿತಾಗಿ ವಾಸ್ತು ಶಾಸ್ತ್ರಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರು ಹಾಗೂ ನಮ್ಮ ನಾಡಿನ ಹೆಮ್ಮೆಯ ಬಹುಶ್ರುತ ವಿದ್ವಾಂಸ ನಾಡೋಜ ಕೆ.ಪಿ.ರಾವ್‌ರವರೊಂದಿಗೆ ನವೀನ ಯುಗದಲ್ಲಿ ಕಂಪ್ಯೂಟರ್‌ನಲ್ಲಿ ದೇವರುಗಳ ಚಿಂತನೆಯೇ ಮೊದಲಾಗಿ ಚಿಂತನ – ಮಂಥನ ಕಾರ್ಯಕ್ರಮಗಳು ಸಹೃದಯಿಗಳಲ್ಲಿ ಕಲೆಯ ಬಗೆಗಿನ ಭಾವ ವಿಸ್ತರಿಸಿದ್ದಂತೂ ಸತ್ಯ.
ನಮ್ಮ ಕನ್ನಡ ಕರಾವಳಿಯ ತುಳುನಾಡಿನ ಹಲವಾರು ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಬಹು ವಿರಳವಾಗಿ ಉಲ್ಲೇಖಿಸಲ್ಪಡುವ ವಾಚನ – ಪ್ರವಚನವೂ ಕೂಡ ಒಂದು. ಇದೇ ಸಂದರ್ಭದಲ್ಲಿ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ರವರಿಂದ “ಭೂ-ಕೈಲಾಸ” ವಾಚನ- ಪ್ರವಚನವನ್ನು ಕೂಡ ಹಮ್ಮಿಕೊಂಡದ್ದು ದೃಶ್ಯಾತ್ಮಕ ಭಾವಕ್ಕೆ ಧ್ವನ್ಯ ಭಾವ ಮತ್ತು ಕಥಾಸ್ವರೂಪವನ್ನು ಸೇರಿಸಿಕೊಟ್ಟು ಒಂದು ವಿಭಿನ್ನ ಲೋಕಕ್ಕೆ ಕಲಾಪ್ರೇಮಿಗಳನ್ನು ತಲಪುವಂತೆ ಮಾಡಿತೆನ್ನಬಹುದು.
ಅಷ್ಟಲ್ಲದೇ ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಶಮಂತಕೋಪಾಖ್ಯಾನ” ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನೂ ಕೂಡ ಹಮ್ಮಿಕೊಂಡು ಒಂದರ್ಥದಲ್ಲಿ ಈ “ಮಾರುತ ಪ್ರಿಯ” ಕಲಾಪ್ರದರ್ಶನ ಉಡುಪಿಯ ಜನಮಾನಸದಲ್ಲಿ ಉಳಿಯುವಂತೆ ಮಾಡಿತೆನ್ನಬಹುದು.
ಇದಕ್ಕಾಗಿ ಸಹಕಾರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಂಸ್ಕೃತಿಕ ವಿಶ್ವ ಪ್ರತಿಷ್ಠಾನ, ಆರ್ಟಿಸ್ಟ್ ಫೋರಂ ಉಡುಪಿ ಹಾಗೂ ಸಂಯೋಜಿಸಿದ ಭಾವನಾ ಪೌಂಡೇಶನ್ ಮತ್ತು ಭಾಸ ಗ್ಯಾಲರಿಯವರು ನಿಜಕ್ಕೂ ಅಭಿನಂದನಾರ್ಹರು. ಇನ್ನಷ್ಟು ಈ ತೆರನಾದ ಸತ್ವಯುಕ್ತವಾದಂತಹ ಕಾರ್ಯಕ್ರಮಗಳ ಸಂಯೋಜನೆ ಕರಾವಳಿಯ ಭಾಗದಲ್ಲಿ ನಡೆಯಲಿ ಎಂಬುದು ನಮ್ಮ ಆಶಯ.
ಲೇಖನ : ಲಾವಣ್ಯ
ಸಂಪರ್ಕ : 9845650544