ದಿನಾಂಕ 22-09-2023ರಂದು ಬೆಂಗಳೂರಿನ ಕಣ್ಣೂರು ಸಮೀಪದ ಭಾರತೀಯ ಮಾಲ್ ನಲ್ಲಿ ನಡೆದ ವ್ಯಾನ್ ಗೋ-360° ಪ್ರದರ್ಶನ ಹಲವು ಕಾರಣಕ್ಕೆ ಮುಖ್ಯವೆನಿಸಿತ್ತು. ಕಲೆ ಮತ್ತು ಕಲಾ ಪ್ರದರ್ಶನ ಅದರದೇ ಆದ ಭಾಷೆಯನ್ನು ಸ್ವಲ್ಪವಾದರೂ ತಿಳಿದಿದ್ದರೆ ಗ್ರಹಿಸುವುದು ಸುಲಭವೆನಿಸುತ್ತದೆ. ಅಲ್ಲಿ ಬಳಸುವ ಗಾಢವಾದ ವರ್ಣ, ತೆಳು ಬಣ್ಣಗಳು ಭಾವಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಶೋಕ, ವ್ಯಥೆ, ನಿರಾಶೆಯಂತಹ ಮೋಡ ಮುಚ್ಚಿದ ಭಾವಗಳನ್ನು ಹೇಳಲು ಕಂದು, ಕಪ್ಪುವಿನಂತಹ ಬಣ್ಣಗಳನ್ನು ಬಳಸಲಾಗುತ್ತದೆ. ಹರ್ಷ, ಉಲ್ಲಾಸಗಳನ್ನು ಬಿಂಬಿಸಲು ಗಾಢವಾದ ಕಣ್ಣಿಗೆ ಆಹ್ಲಾದ ಕೊಡುವ ವರ್ಣಗಳನ್ನು ಬಳಸಲಾಗುತ್ತದೆ. ಬಣ್ಣ ಮತ್ತು ಕುಂಚ ಕಲಾವಿದನ ಕೈಯ ಹತಾರಗಳು. ಅವೆಲ್ಲವನ್ನೂ ಸಂಯೋಜಿಸುವುದು ಅವನ ಬುದ್ಧಿ ಮತ್ತು ಭಾವ. ಈ ಬುದ್ಧಿ ಭಾವಗಳು ಆಯಾ ಸಂದರ್ಭಕ್ಕೆ ಒದಗುವಂತೆ ಮಾಡುವುದು ಅವನು ಕಂಡ, ಉಂಡ, ಕಾಡಿದ ಜಗತ್ತು. ಈ ಜಗತ್ತಿನಲ್ಲಿ ಕಾಡಿದ ಹೋದೋಟಗಳಿವೆ, ದೇವತೆಗಳಿವೆ, ದೆವ್ವಗಳಿವೆ, ಪ್ರೇಯಸಿಯರಿದ್ದಾರೆ, ರೈತನಿದ್ದಾನೆ, ಹಲವು ಪಕ್ಷಿಪ್ರಾಣಿಗಳು, ಹೊಲದಲ್ಲಿ ಅರಳುವ ಸೂರ್ಯಕಾಂತಿ-ಸಾಸಿವೆಯ ಹಳದಿ ಹೂಗಳೂ ಇವೆ. ಬಿಳಿಯ, ನೀಲಿಯ, ಕೆಂಪಿನ ಹಲವು ಹೂಗಳಿವೆ. ಗಾಢವಾದ ಹಸಿರು, ಕೆಂಪು, ಹಳದಿಯ ಜೋವನೋಲ್ಲಾಸವಿದೆ.
ಬಣ್ಣಗಳಿಲ್ಲದೆ, ಬಣ್ಣಗುರುಡಾದ ಯಾವುದಾದರೂ ಕಲಾವಿದನಿದ್ದಿರಬಹುದೇ? ಬರಿಯ ರೇಖೆಗಳಷ್ಟೇ ಅವನನ್ನು ಕಾಡಿರಬಹುದೇ? ನಿಸರ್ಗದ ಸಮಸ್ತವೂ ಕಲಾವಿದನಲ್ಲಿ ಒಂದಲ್ಲ ಒಂದು ರೂಪು ಪಡೆದು ಹೊರಬರಲೇಬೇಕು. ಯಾಕೆಂದರೆ ಎಲ್ಲವೂ ಅವನ ಅನುಭವದ ಭಾಗಗಳೇ ಆಗಿರುತ್ತವೆ. ಅಳಿಸಲಾಗದ ಪದಗಳ ಮೂಲಕ ಕಾವ್ಯವನ್ನು ರಚಿಸಿದ ಪೂರ್ವದ ಹಲವು ಕವಿಗಳ ಬಗ್ಗೆ ಕೇಳಿದ್ದೇವೆ. ಪೆನ್ನಿನ ಮೂಲಕ ಪದಗಳನ್ನು ಹೊಡೆದು, ತಿದ್ದಿ ಬರೆದ ಕವಿಗಳು ನಮ್ಮ ನಡುವೆ ಇದ್ದಾರೆ. ಈಗ ಪದಗಳನ್ನು ಟೈಪ್ ಮಾಡಿ, ಬೇಡವಾದದ್ದನ್ನು ಡಿಲಿಟ್ ಮಾಡಿ ಬೇಕಾದ ಹಾಗೆ ಪದಗಳನ್ನು ಬಳಸಬಲ್ಲ ಹೊಸ ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಕವಿ ಮತ್ತು ಕವಿತ್ವವೂ ಕೂಡ ಇಂದು ಬದಲಾಗುತ್ತಲಿದೆ.
ಆದರೆ ಕಲೆಯ ಜಗತ್ತಿನಲ್ಲಿ ಅಳಿಸಲಾಗದ ಭಾಷೆಯಲ್ಲಿ ಕಲೆಯನ್ನು ರಚಿಸಿದ, ದಂತಕತೆಗಳಾದ ಅದ್ವಿತೀಯ ಕಲಾವಿದರ ಕತೆಗಳು ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗುತ್ತಲೇ ಇವೆ. ಜೊತೆಜೊತೆಗೆ ಒಂದಷ್ಟು ದಂತಕತೆಗಳನ್ನು ಸಹ ಸೇರಿಸುತ್ತಾ ಹೋಗಲಾಗುತ್ತದೆ. ಕಲಾವಿದ ಸಂದ ಹಾಗೆ, ಸಂದವರಿಗೂ ನಮಗೂ ಅಂತರ ಹೆಚ್ಚಾದ ಹಾಗೆ ಈ ಕತೆಗಳನ್ನು ಸೇರಿಸುವ, ತೆಗೆಯುವ, ತಿರುಚುವ ಹಲವು ವಿದ್ಯಮಾನಗಳು ನಡೆಯುತ್ತಲೇ ಹೋಗುತ್ತವೆ. ಆಶು ಕವಿಗಳಿಂದ ಮುಂದುವರೆಯುತ್ತ ಬಂದ ಮಹಾಕಾವ್ಯ ಪರಂಪರೆ ಅಲ್ಲಲ್ಲಿ ಹಲವು ಸೇರ್ಪಡೆಗಳಿಂದ ಪ್ರಕ್ಷಿಪ್ತಗೊಳ್ಳುತ್ತಾ ಬರಹದ ರೂಪವನ್ನು ಪಡೆಯುವವರೆಗೆ ಇದು ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಮುಂದೊಂದು ದಿನ ಶಕ್ತಶಾಲಿಯದ ಬರಹಗಾರನೊಬ್ಬನು ಬರುವವರೆಗೂ ಇಂತಹ ಕ್ರಿಯೆಗಳು ನಡೆಯುವುದು ಸಹಜ.
ಈ ಎಲ್ಲಾ ಚಿಂತನೆಗಳು ಮೊನ್ನೆ ನೋಡಿದ ವ್ಯಾನ್‌ಗೋ ಶೋನ ಸಂದರ್ಭದಲ್ಲಿ ಕಾಡಿದವು. ವ್ಯಾನ್‌ಗೋ ಇಂದು ನಮ್ಮ ಕಣ್ಣೆದುರಿನ ದಂತ ಕಥೆ. ಆದರೆ ಅವನು ರಚಿಸಿದ ನೂರಾರು ಚಿತ್ರಗಳು ಮಾತ್ರ ಇಂದಿಗೂ ಜೀವಂತವಾಗಿದ್ದು ಹಲವು ರೀತಿಯ ಚರ್ಚೆಗೆ ಒಳಗಾಗುತ್ತಿವೆ. ಕೇವಲ ಮೂವತ್ತೇಳು ವರ್ಷದಲ್ಲಿ ತೀರಿಕೊಂಡ ಪೋಸ್ಟ್ ಇಮ್ಪ್ರೆಷನಿಷ್ಟ್ ಕಲಾವಿದನಾದ ವಿನ್ಟೆಂಟ್ ವಿಲಿಯಮ್ ವ್ಯಾನ್‌ಗೋ ತನ್ನ ಯೌವನ ಕಾಲದ ಸುಮಾರು ಹತ್ತು ವರ್ಷಗಳ ಕಾಲಾವಧಿಯಲ್ಲಿ ಬರೆದ ಎಲ್ಲಾ ಚಿತ್ರಗಳು ಪ್ರಖ್ಯಾತವಾಗಿವೆ. ಇಂದಿಗೂ ಕೂಡ ಮರುಪ್ರದರ್ಶಗೊಳ್ಳುತ್ತಿವೆ. ಅವನ ಬದುಕು ಮತ್ತು ಕಲೆ ಒಟ್ಟೊಟ್ಟಾಗಿ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ಅವನ ನಾಡಾದ ನೆದರ್ ಲ್ಯಾಂಡನ್ನೂ ಒಳಗೊಂಡಂತೆ Van gogh-360° ಪ್ರದರ್ಶನ ನಡೆಯುತ್ತದೆ. ವೀಕ್ಷಕರು ಬಹುಪಾಲು ಯುವಜನಾಂಗದವರೇ ಆಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಇಂದಿನ ಜಗತ್ತು ಹಿಂದೆಂದಿಗಿಂತಲೂ ತಾಂತ್ರಿಕವಾಗಿ, ಆಧುನಿಕವಾಗಿ ಶರವೇಗದಿಂದ ಓಡುತ್ತಲಿದೆ. ಸಾಹಿತ್ಯ, ಕಲೆಯನ್ನು ಗ್ರಹಿಸುವ, ಸ್ವೀಕರಿಸುವ ವಿಧಾನಗಳು ಇಂದು ವೇಗವಾಗಿ ಬದಲಾಗುತ್ತಿವೆ. ಈ ಓಟಕ್ಕೆ, ಗ್ರಹಿಕೆಗೆ ಅನುಗುಣವಾಗಿ ಈ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು. ಹತ್ತು, ಹನ್ನೆರಡು ಪ್ರೊಜೆಕ್ಟ್ ಗಳನ್ನು ಚಚ್ಚೌಕಕದ ವಿಶಾಲವಾದ ಕೊಠಡಿಯನ್ನು ಒಂದು ಥಿಯೇಟರ್ ಎನ್ನುವಂತೆ ಸಿದ್ಧಪಡಿಸಲಾಗಿತ್ತು. ಅಲ್ಲಲ್ಲಿ ಹಾಸಿದ ಬೀನ್ ಬ್ಯಾಗ್ ಗಳು ಆಸನಗಳಾಗಿದ್ದವು. 360° ಡಿಗ್ರಿ ಚಲನೆಯಲ್ಲಿ ನೆಲದ ಮೇಲೂ, ಗೋಡೆಯ ಮೇಲೂ ವ್ಯಾನ್ ಗೋನ ಪ್ರಸಿದ್ಧ ಚಿತ್ರಗಳು ನಿಧಾನವಾಗಿ ಮೂಡುತ್ತಿದ್ದವು. ನಡುನಡುವೆ ನಾಲ್ಕೂ ಗೋಡೆಗಳ ಮೇಲೆ ಚಲಿಸುವ ಹೂಗಳು, ನಕ್ಷತ್ರಗಳು, ಪಕ್ಷಿಗಳು, ವ್ಯಕ್ತಿ ಚಿತ್ರಗಳು ಮಾಂತ್ರಿಕ ಲೋಕವನ್ನು ಸೃಷ್ಟಿಸಿದ್ದವು. ಕತ್ತರಿಸಿ ಬೇರ್ಪಡಿಸಿದ ಅವನ ಪ್ರಸಿದ್ಧವಾದ ಸೂರ್ಯಕಾಂತಿ ಹೂಗಳು, ಅವನದೇ ಸ್ವಂತ ಚಿತ್ರಗಳು, ಗೋಧಿ ಹೊಲದ ಕಾಗೆಗಳು, ನಕ್ಷತ್ರಗಳು, ಸೈಪ್ರಸ್ ಗಿಡಮರಗಳಂತಹ ಚಿತ್ರಗಳು ಕಲಾವಿದನ ಕಲೆಯ ವೈಶಿಷ್ಯ್ಂವನ್ನು ಎತ್ತಿ ಹಿಡಿಯುತ್ತಿದ್ದವು. ವ್ಯಾನ್‌ಗೋನ ಚಿತ್ರಗಳಲ್ಲಿ ರೂಪಕವೆನ್ನುವಂತೆ ಬಳಸಲಾದ ಬಿಡಿ ಚಿತ್ರಗಳನ್ನು ಸಂಯೋಜಿಸಿ ಹೊಸದೊಂದು ಲೋಕವನ್ನು ಸೃಷ್ಟಿಮಾಡಲಾಗಿತ್ತು. ಕಲಾವಿದನನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಅರ್ಥಮಾಡಿಸುವ ಹೊಸ ಪ್ರಯತ್ನವಿದಾಗಿತ್ತು.
ವ್ಯಾನ್‌ಗೋ ತನ್ನನ್ನು ಕಾಡುತ್ತಿದ್ದ ನಿರಂತರವಾದ ಮಾನಸಿಕ ಸಮಸ್ಯೆ, ಖಿನ್ನತೆಗಳನ್ನು ಮೀರಿ ಬದುಕಲೆತ್ನಿಸಿದ. ವೇಗವಾಗಿ ಅಸಂಖ್ಯಾತ ಚಿತ್ರಗಳನ್ನು ಬರೆಯುತ್ತಲೇ ಹೋದ. ಬದುಕು ನಡೆಸಲು ಹಲವು ರೀತಿಯ ಹೋರಾಟ ನಡೆಸಿದ. ಸಾಧ್ಯವಾಗದಿದ್ದಾಗ ಒಂದೆಡೆ ನೆಲೆಸಿ ತನ್ನನ್ನು ತಾನು ಕಲೆಗೆ ತೆತ್ತುಕೊಂಡು ದುರಂತ ಕತೆಯ ನಾಯಕನಾದ. ಅವನು, ಅವನ ಪ್ರಣಯ ಸಂಬಂಧಗಳು, ಸಮಕಾಲೀನ ಕಲಾವಿದರೊಂದಿಗಿನ ಸಂಬಂಧಗಳ ಬಗ್ಗೆ ಸ್ಪಷ್ಟವಾದ ಚಿತ್ರಣಗಳು ಲಭ್ಯವಾಗುವುದಿಲ್ಲ.
09-03-1853ರಂದು ಜನಿಸಿದ ವ್ಯಾನ್‌ಗೋ 16 ವಯಸ್ಸಿನಲ್ಲಿ ಕಲಾಕೃತಿಗಳನ್ನು ಮಾರಾಟಮಾಡುವ ಚಿಕ್ಕಪ್ಪನೊಂದಿಗೆ ಕೆಲಸ ಮಾಡಲಾರಂಭಿಸಿದ. ಜಗತ್ತಿನ ವಿಶ್ವವಿಖ್ಯಾತ ಕಲಾವಿದರನ್ನು, ಕಲಾಕೃತಿಗಳನ್ನು ಅರ್ಥಮಾಡಿಕೊಳ್ಳಲಾರಂಭಿಸಿದ. ಭಾಷಾಭೋದಕನಾಗಿ ಕೆಲಸ ಮಾಡಿದ. ಕೆಲವು ಕ್ರೈಸ್ತ ಮಿಷನರಿಗಳಲ್ಲಿ ಧರ್ಮವನ್ನು ಕುರಿತು ವ್ಯಾಖ್ಯಾನಕಾರನಾಗಿಯೂ ಕೆಲಸ ಮಾಡಿದ. ಆ ವ್ಯಾಖ್ಯಾನಗಳು ಜನರನ್ನು ತಪ್ಪು ದಾರಿಗೆಳೆಯುತ್ತವೆ ಎಂಬ ಅಪಾದನೆಗೂ ಒಳಗಾದ. ಮುಂದೆ ಪುಸ್ತಕಗಳ ಮಾರಾಟಗಾರನಾಗಿಯೂ ಕೆಲಸ ನಿರ್ವಹಿಸಿದ. ಮಿಷನರಿಗಳಿಗೆ ಸಂಬಂಧಿಸಿದ ಕಲ್ಲಿದ್ದಲ ಗಣಿಯೊಂದರಲ್ಲಿ ಕೆಲಸ ಮಾಡಲಾರಂಭಿಸಿದ. ಅಲ್ಲಿನ ಶ್ರಮಿಕರು, ಬಡವರೊಂದಿಗೆ ಜೀವಿಸುತ್ತಾ ಅವರಿಗಾಗಿ ಮರುಗಲಾರಂಭಿಸಿದ. ಅವರನ್ನು ತನ್ನ ಮಾತುಗಳಿಂದ ಎಚ್ಚರಿಸಲಾರಂಭಿಸಿದ. ಇವನ ಈ ಕೆಲಸಗಳನ್ನು ಸಹಿಸದ ಸನಾತನವಾದ ಚರ್ಚ್ ಅವನನ್ನು ಕೆಲಸದಿಂದ ಮುಕ್ತಿಗೊಳಿಸಿತು. ವಿಫಲ ಪ್ರಣಯ, ಒಳಗೊಳಗೇ ಕಾಡಲಾರಂಭಿಸಿದ ಅಧ್ಯಾತ್ಮದ ಚಿಂತನೆಗಳು, ಛಿದ್ರಗೊಂಡ ನಂಬಿಕೆಗಳು ನಿಧಾನವಾಗಿ ಅವನನ್ನು ಜನರಿಂದ ದೂರಮಾಡಲಾರಂಭಿಸಿತು.
“ತನ್ನನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ನಾನೊಬ್ಬ ನಿಜವಾದ ಕ್ರಿಶ್ಚಿಯನ್ನಂತೆ ಬದುಕಲಿಚ್ಛಿಸಿದೆ. ಆದರೆ ಅವರು ನಾನು ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೇನೆ ಎಂದು ಭಾವಿಸಿದರು. ಅವರು ನನ್ನನ್ನು ನಾಯಿಯಂತೆ ಕಾಣುತ್ತಿದ್ದಾರೆ” ಎಂಬ ಕೊರಗು ಅವನನ್ನು ಕಾಡಲಾರಂಭಿಸಿತು. ಮಾನಸಿಕವಾಗಿ ವಿಕ್ಷಿಪ್ತನಾದ ಅವನಿಗೆ ಅವನ ಸಹೋದರ ಥಿಯೋ ಚಿಕಿತ್ಸೆಯನ್ನು ಕೊಡಿಸಲಾರಂಭಿಸಿದ. ಇಲ್ಲಿಂದ ಮುಂದೆ ಅವನು ತನ್ನನ್ನು ಒಬ್ಬ ಕಲಾವಿದನನ್ನಾಗಿ ಕಂಡುಕೊಳ್ಳುವ ಪ್ರಯತ್ನ ಆರಂಭಿಸಿದ. ಅಶಾಂತವಾದ ಮನುಕುಲಕ್ಕೆ ನೆಮ್ಮದಿ, ಶಾಂತಿಯನ್ನು ಕಲೆಯ ಮೂಲಕ ಕೊಡುವ ಪ್ರಯತ್ನಕ್ಕೆ ತಾನು ಕೈಹಾಕುತ್ತಿದ್ದೇನೆ ಎಂದು ತನ್ನ ಸಹೋದರ ಥಿಯೋನೊಂದಿಗೆ ಹೇಳಿಕೊಂಡ. 1880ರಿಂದ ಅವನ ಕಲಾವಿದ ಜೀವನ ಆರಂಭವಾಯಿತು. ವಿನ್ಸೆಂಟ್ ಎಂಬ ಸಹಿಯೊಂದಿಗೆ ಕಲಾಕೃತಿಗಳನ್ನು ರಚಿಸಲಾರಂಭಿಸಿದ.
ಕಲೆಯ ತರಬೇತಿಯನ್ನು ಸಾಂಪ್ರದಾಯಿಕವಾಗಿ ಪಡೆದು 1880ರಿಂದ 1890ರವರೆಗಿನ ಅವಧಿಯಲ್ಲಿ ಕಲಾಕೃತಿಗಳನ್ನು ರಚಿಸಲಾರಂಭಿಸಿದ. ಪ್ರಾನ್ಸಿನ ಹಲವು ಪ್ರಸಿದ್ಧ ಕಲಾವಿದರು ಅವನ ಸಂಪರ್ಕಕ್ಕೆ ಬಂದರು. ಬಹಳಷ್ಟನ್ನು ಅವರಿಂದ ಕಲಿತ. ಸ್ಥಿರ ಚಿತ್ರಗಳು, ವ್ಯಕ್ತಿಚಿತ್ರಗಳು, ಲ್ಯಾಂಡ್ಸ್ಕೇಪ್ ಪ್ರಕಾರಗಳಲ್ಲಿ ಸಾಕಷ್ಟು ಕೆಲಸ ಮಾಡಿದ. ಜೀವನದ ಅವಧಿಯಲ್ಲಿ ಉಳಿದವರಂತೆ ಹೆಸರು ಪಡೆಯಲಾಗಲಿಲ್ಲ. ಒಂದೇ ಒಂದು ಕೃತಿ ಮಾತ್ರ ಅವನು ಬದುಕಿದ್ದಾಗ ಮಾರಾಟವಾಯಿತು.
ವ್ಯಾನ್‌ಗೋ ಸುತ್ತ ಕತೆಗಳು ಅವನ ಜೀವಿತದ ಅವಧಿಯಲ್ಲೇ ಹೆಣೆಯಲ್ಪಟ್ಟವು. ಬದುಕಿನ ಕೊನೆಯ ಕ್ಷಣಗಳಲ್ಲಿ ಎರಡು ತಿಂಗಳ ಕಾಲ ತನ್ನ ಕೊಠಡಿಯಲ್ಲಿ ಇರಿಸಿಕೊಂಡಿದ್ದ ಕಲಾವಿದ ಗಾಂಗ್ವಿನ್ ನೊಂದಿಗಿನ ಭಿನ್ನಾಭಿಪ್ರಾಯಗಳು, ವಾಗ್ವಾದಗಳು ಅವನನ್ನು ತಲ್ಲಣಗೊಳಿಸುತ್ತಿದ್ದವು. ಆ ವಾಗ್ವಾದದಲ್ಲಿ ತನ್ನ ಕಿವಿ ಕತ್ತರಿಸಿಕೊಂಡು ಅದನ್ನು ತೆಗೆದುಕೊಂಡು ಹೋಗಿ ಕೆಫೆಯೊಂದರಲ್ಲಿ ಕುಳಿತಿದ್ದ ವೇಶ್ಯೆಯ ಮುಂದಿಟ್ಟು ಅದನ್ನು ಕಾಪಾಡುವಂತೆ ಹೇಳಿದ. ಮುಂದೆ ತನ್ನನ್ನು ನೋಡುತ್ತಿದ್ದ ಕಲಾವಿದನಾದ ಡಾಕ್ಟರ್ ಜೊತೆಗಿನ ವಾಗ್ವಾದದಿಂದ ಕೋಪಗೊಂಡು ಗುಂಡು ಹಾರಿಸಿಕೊಂಡು ಗಾಯಗೊಂಡ. ಒಂದೆರಡು ದಿನಗಳ ಕಾಲ ನರಳಿ ತನ್ನ ಸಾವನ್ನು ತಾನೇ ತಂದುಕೊಂಡ. “ತಾನು ಏನನ್ನು ಮಾಡಿದ್ದೇನೋ ಅದು ತಮಗೆ ಸೇರಿದ್ದು. ನನ್ನ ದೇಹ ನನಗೆ ಸೇರಿದ್ದು. ಅದಕ್ಕೆ ನಾನೇನು ಮಾಡಿದರೂ ಅದು ನನಗೆ ಸಂಬಂಧಿಸಿದ್ದು” ಎಂದು ಪೋಲೀಸರಿಗೆ ಅವನು ಹೇಳಿಕೆ ಕೊಡುತ್ತಾನೆ.
ಇಂತಹ ತೀವ್ರವಾದ ಸಂಘರ್ಷಗಳ, ದುರಂತಗಳ ಕಾಲದಲ್ಲೇ ಅವನ ಹಲವಾರು ಪ್ರಖ್ಯಾತವಾದ ಚಿತ್ರಗಳು ರಚನೆಯಾದವು. ಪೋಟ್ಯಾಟೋ ಈಟರ್ಸ್, ದ ಸ್ಟಾರಿ ನೈಟ್, ವೀಟ್ ಫೀಲ್ಡ್ ವಿತ್ ಕ್ರೋಸ್, ಸೆಲ್ಫ್ ಪೋಟ್ರ್ಯೆಟ್ಸ್, ಪ್ರಿಸನರ್ಸ್ ಎಕ್ಸರ್ಸೈಜಿಂಗ್, ಸನ್ ಪ್ಲವರ್ಸ್, ದ ಬೆಡ್ ರೂಮ್ ಈ ಮುಂತಾದವು ಅವರ ಪ್ರಸಿದ್ಧವಾದ ಚಿತ್ರಗಳಾಗಿವೆ. ವ್ಯಾನ್‌ಗೋ ನ ಬದುಕು ಮತ್ತು ಅಭಿವ್ಯಕ್ತಿ ಇಂದಿನವರಿಗೆ ಒಂದು ರೀತಿಯ ಕೌತುಕವನ್ನುಂಟು ಮಾಡುವುದು, ದುರಂತ ನಾಯಕನಂತೆ ಅವರಿಗೆ ಭಾಸವಾಗುವುದು ಸಹಜವೇ ಆಗಿದೆ. ಬದುಕಿದ್ದ ಅವಧಿಯಲ್ಲಿ ಬೆಳಕಿಗೆ ಬಾರದ ಅವನ ರಚನೆಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿ ದಾಖಲೆಯನ್ನು ಸೃಷ್ಟಿಸಿವೆ. ಬದುಕಿಗಾಗಿ ನಡೆಸಿದ ಹೋರಾಟ, ಕಲೆಯಲ್ಲಿ ನಿರ್ಮಿಸಿದ ತನ್ನದೇ ದಾರಿಯಿಂದಾಗಿ ಇಂದು ವ್ಯಾನ್ಗೋ ಒಂದು ದಂತ ಕತೆಯಾಗಿ ನಮ್ಮೆದುರಿಗಿದ್ದಾನೆ.
ಇಂತಹದೇ ದುರಂತದ ಹೋಲಿಕೆಯುಳ್ಳವರಾದ ಕನ್ನಡದ ಮೇರು ನಾಟಕಕಾರರಾದ ಸಂಸ ಮೈಸೂರು ಅರಸರ ಮನೆತನದ ಚರಿತ್ರೆಯನ್ನು ಆಧರಿಸಿ ಹಲವಾರು ನಾಟಕಗಳನ್ನು ಬರೆದರು. ಅವುಗಳನ್ನು ಸಂಸ ನಾಟಕ ಚಕ್ರ ಎಂದೇ ಕರೆಯಲಾಗುತ್ತದೆ. ವೈಯಕ್ತಿಕ ಬದುಕಿನಲ್ಲಿ ತಾವೊಬ್ಬ ಕ್ರಾಂತಿಕಾರಿ, ಪೋಲೀಸರು ತಮ್ಮನ್ನು ಸದಾ ಹಿಂಬಾಲಿಸುತ್ತಿದ್ದಾರೆ ಎಂದು ಭಯಭೀತರಾಗಿಯೇ ಬದುಕಿ ಕೊನೆಗೊಂದು ದಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಅಸಾಧಾರಣ ಜೀವಗಳು ತಮ್ಮನ್ನು ಕಾಡುತ್ತಿದ್ದ ಮಾನಸಿಕ ವೈಪರೀತ್ಯಗಳಿಗೆ ತಮ್ಮನ್ನೇ ಬಲಿಕೊಟ್ಟುಕೊಂಡು ಇಲ್ಲವಾದವರಾಗಿದ್ದಾರೆ. ಮರೆಯಾಗದ ಚರಿತ್ರೆಯಲ್ಲಿ ದಂತಕಥೆಗಳಾಗಿ ನಿಂತುಹೋದವರಾಗಿದ್ದಾರೆ.
- ಡಾ. ಎಚ್.ಎಲ್. ಪುಷ್ಪ