ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಸೋಣೆ ಆರತಿ ಸಂದರ್ಭ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮ ಅರ್ಥಾಂಕುರ-2 ದಿನಾಂಕ 03-09-2023ರಂದು ಉದ್ಘಾಟಣೆಗೊಂಡಿತು.
ಹೊಸ ಅರ್ಥದಾರಿಗಳಿಗೆ ವೇದಿಕೆ ಕಲ್ಪಿಸಲು ಆಯೋಜಿಸುವ ಈ ಸರಣಿ ಕಾರ್ಯಕ್ರಮದ ಎರಡನೇ ಹಂತವನ್ನು ದೀಪ ಪ್ರಜ್ವಲಿಸಿ ಡಾ.ಜಗದೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು “ಹಿಂದಿನ ಕಾಲದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಅಭ್ಯಾಸ ಕೂಟಗಳು ತಾಳಮದ್ದಳೆ ಅಭ್ಯಾಸಕ್ಕಾಗಿ ಆಗುತ್ತಿದ್ದವು. ಇದರಿಂದಾಗಿ ಅನೇಕ ಕಲಾವಿದರು ಪ್ರಬುದ್ಧತೆಯನ್ನು ಸಾಧಿಸಿ ಮೆರೆದಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಇಂತಹ ಕೂಟಗಳು ನೆರವೇರುತ್ತಿರುವ ಈ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ‘ಅರ್ಥಾಂಕುರ’ ಎನ್ನುವ ಶಿರೋನಾಮೆಯಡಿಯಲ್ಲಿ ಹೊಸ ಆಯಾಮವನ್ನು ರೂಪಿಸುವಲ್ಲಿ ಕಾಲಿರಿಸಿದೆ. ಇದರಿಂದಾಗಿ ಯಕ್ಷವೃಕ್ಷದ ಗೆಲ್ಲುಗಳು ಕವಲೊಡೆಯುತ್ತ ಸಾಂಸ್ಕೃತಿಕ ಕ್ಷೇತ್ರ ಈ ಅಂಕುರದಿಂದಾಗಿ ಹೆಮ್ಮರವಾಗಿ ಬೆಳೆಯಲಿ” ಎಂದು ಹೇಳಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಅರ್ಥದಾರಿ ಸುನೀಲ್ ಹೊಲಾಡು ಮಾತನಾಡುತ್ತಾ “ಕಲಾವಿದರನ್ನು ರಂಗಕ್ಕೆ ತಂದು ತಾಲೀಮು ನಡೆಸುವ ಕಾರ್ಯ ಅತ್ಯಂತ ಸ್ತುತ್ಯರ್ಹ. ಹಿರಿಯ ಕಲಾವಿದರನೇಕರು ಈ ರಂಗದಲ್ಲಿ ಸಹಕಾರಿಯಾಗಿ ದೊರೆತು ಇನ್ನಷ್ಟು ಹೊಸ ಕಲಾವಿದರನ್ನು ರಂಗಕ್ಕೆ ತರುವ ಕಾಯಕ ಶ್ಲಾಘನೀಯ” ಎಂದು ಹೇಳಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ರಂಗದಲ್ಲಿ ಉದಯೋನ್ಮುಖ ಕಲಾವಿದರಿಂದ ಕೃಷ್ಣಾರ್ಜುನ ಕಾಳಗದ ಪೂರ್ವರಂಗ ಕಥಾಭಾಗ ಪ್ರಸ್ತುತಿಗೊಂಡಿತು.