ಕುಂಭಾಶಿ : ಶ್ರೀ ಕ್ಷೇತ್ರ ಆನೆಗುಡ್ಡೆ ಕುಂಭಾಶಿ ಸಹಕಾರದೊಂದಿಗೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಸಹಯೋಗದೊಂದಿಗೆ ಸಂಕಷ್ಟಹರ ಚತುರ್ಥಿ ಶುಭ ದಿನದಂದು ‘ಅರ್ಥಾಂಕುರ’ ತಾಳಮದ್ದಳೆ’ ಕಾರ್ಯಕ್ರಮ ದಿನಾಂಕ 05 ಫೆಬ್ರವರಿ 2026ರಂದು ಆನೆಗುಡ್ಡೆ ದೇಗುಲದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಸಿದ್ಧ ಅರ್ಥದಾರಿ ವಾಸುದೇವ ರಂಗ ಭಟ್ ಇವರು ಮಾತನಾಡಿ “ಅರ್ಥಾಂಕುರದ ದೀಪ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸೇವಾರೂಪದಲ್ಲಿ ಬೆಳಗಿದೆ. ಬಹಳ ಅರ್ಥಪೂರ್ಣ ಭಾವ ನಮ್ಮದು. ನಮ್ಮೂರಿನ ಕ್ಷೇತ್ರಗಳು ಆ ಕ್ಷೇತ್ರದ ಆಶ್ರಯಗಳಲ್ಲಿ ಬೆಳೆಯಬೇಕಾದ ಕಲೆಗಳ ಕುರಿತಾಗಿ, ಒಂದು ಸ್ಪಷ್ಟತೆ, ಒಂದು ನಿರ್ದಿಷ್ಟತೆ ಇದ್ದು ಆರಂಭಿಸಿದ ಉಪಕ್ರಮ ಇದು. ಕಲೆಯ ಹೆಸರಲ್ಲಿ ಭಾರತೀಯವಾದಂತಹ ಯಾವುದೂ ಪೋಷಿತವಾಗಬಹುದು. ಯಾಕೆಂದರೆ ಭಾರತೀಯ ಕಲೆಗಳ ಸತ್ವವಾಗಿರುವುದು ಧಾರ್ಮಿಕತೆ, ಭಕ್ತಿ, ಶೃದ್ಧೆಗಳು. ಹಾಗೆಯೇ ಯಕ್ಷಗಾನ ತಾಳಮದ್ದಳೆಗೆ ಧಾರ್ಮಿಕ ಕೇಂದ್ರಗಳಲ್ಲಲ್ಲದೇ ಬೇರೆ ಕಡೆಗಳಲ್ಲಿ ಪೋಷಣೆ ಸಿಗುವಂತಿಲ್ಲ. ಕಲೆಗಳು ನಮ್ಮ ಅನನ್ಯತೆಯೂ ಹೌದು, ವೈಶಿಷ್ಟ್ಯವೂ ಹೌದು. ಈ ಕಲೆಗಳಿಗೆ ದೇಗುಲಗಳಲ್ಲಿ ದೊರೆಯುವ ಪೋಷಣೆ, ಪಾಲನೆ ಎನ್ನುವುದು ಕಲೆಗಳ ಮೇಲಾಗುವ ಭಗವಂತನ ಅನುಗ್ರಹ” ಎಂದು ಹೇಳಿದರು.
“ನಿರಂತರವಾಗಿ ಪ್ರತೀ ಸಂಕಷ್ಟಿಯ ದಿವಸ ಸಂಕಷ್ಟಹರ ಗಣಪತಿಯ ಸನ್ನಿಧಾನದಲ್ಲಿ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧದಡಿಯಲ್ಲಿ ಹೊಸ ಅರ್ಥದಾರಿಗಳನ್ನು ರೂಪಿಸುವ ಸದಾಶಯ ಬಹಳ ಯೋಗ್ಯವಾದದ್ದು. ಒಂದು ಕಾರ್ಯಕ್ರಮ ನಿರಂತರವಾಗಿ ನಡೆದರೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಕಾರ್ಯಕ್ರಮ ಎನ್ನುವುದು ಮುಂದಿನ ತಲೆಮಾರಿಗೆ ಈ ಕಲೆಯನ್ನು ಕೈದಾಟಿಸುವ ಕಾರ್ಯಕ್ರಮ. ತಾಳಮದ್ದಳೆ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಮಾತನಾಡುವುದಕ್ಕೆ ಬರುವ ಕಲಾವಿದರ ಸಂಖ್ಯೆ ಅಧಿಕವಾಗಬೇಕಾದರೆ ಸೂಕ್ತವಾದ ವೇದಿಕೆ ಲಭ್ಯವಾಗಬೇಕು. ಆ ಮೂಲಕ ದೇಗುಲವು ಕಲೆಯನ್ನು ಶ್ರೀಮಂತಿಕೆಗೊಳಿಸಿದ ಹಾಗಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಸಿದ್ಧ ಅರ್ಥದಾರಿ ಪವನ್ ಕಿರಣ್‌ಕೆರೆ ಹೇಳಿದರು.
ಆನೆಗುಡ್ಡೆ ವಿನಾಯಕ ದೇವಸ್ಥಾನದ ಮ್ಯಾನೇಜರ್ ನಟೇಶ್ ಕಾರಂತ್ ಉಪಸ್ಥಿತರಿದ್ದರು. ದೇಗುಲದ ರಾಜಾರಾಮ ಉಪಾಧ್ಯಾಯ ಸ್ವಾಗತಿಸಿ, ಯಶಸ್ವಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಧನ್ಯವಾದ ಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಯುಗಳ ಸಂವಾದ’ ಶ್ರೀರಾಮ ಪಟ್ಟಾಭಿಷೇಕದ ‘ಭರತ-ರಾಮ’ ಸನ್ನಿವೇಷದ ತಾಳಮದ್ದಳೆ ಹಾಗೂ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ‘ವರಾಹರೂಪಂ’ ರಂಗ ಪ್ರಸ್ತುತಿಗೊಂಡಿತು.
