ಪೂರ್ಣ ಸಂಸ್ಕೃತಿ ಆಚಾರ ವಿಚಾರಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ತಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಂತಹ ಸಂಪ್ರದಾಯವನ್ನು ಜತನದಿಂದ ಕಾಪಿಟ್ಟು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ಕೊಡಗಿನ ಮೂಲನಿವಾಸಿ ಜನಾಂಗಗಳಲ್ಲಿ ಒಂದಾದ ನರಿಯಂದಡ ಗ್ರಾಮದಲ್ಲಿರುವ ಅರಮನೆಪಾಲೆ ಜನಾಂಗದವರು ಆಚರಿಸಿಕೊಂಡು ಬರುತ್ತಿರುವ ‘ಆಟಿ ಕಳಂಜ’ (ಕಕ್ಕತಜ್ಜಿ) ಆಚರಣೆಯೇ ಸಾಕ್ಷಿಯಾಗಿದೆ.
ಮುಂಗಾರಿನ ಮಳೆಯ ಆಷಾಢ ತಿಂಗಳಿನಲ್ಲಿ ಕೊಡಗಿನಲ್ಲಿ ಆಟಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಟಿ (ಕಕ್ಕಡ) 18. ಮುಗಿದ ಬಳಿಕ ಆಚರಿಸುವ ಒಂದು ವೈಶಿಷ್ಟ್ಯಪೂರ್ಣ ಆಚರಣೆಯೇ ‘ಆಟಿ ಕಳಂಜ’ ಇದು ಕೊಡಗಿನ ಮೂಲ ನಿವಾಸಿ ಜನಾಂಗಗಳಲ್ಲಿ ಒಂದಾಗಿರುವ ಅರಮನೆ ಪಾಲೆ ಜನಾಂಗದವರು ಮಾತ್ರ ಆಚರಿಸಿಕೊಂಡು ಬರುತ್ತಿರುವುದು ಹಾಗೂ ಜಿಲ್ಲೆಯಲ್ಲಿ ಏಕೈಕ ಆಚರಣೆಯಾಗಿರುವುದು ವಿಶೇಷ! ಆಟಿ 18. ಆಚರಣೆ ಕಳೆದ ಬಳಿಕ ಆಟಿ ಕಳಂಜ ಎನ್ನುವ ವಿಶಿಷ್ಟ ಆಚರಣೆ ಪಾಲಿಸುತ್ತಾರೆ. ಲಯಬದ್ದ ವಾದ್ಯದ ಶಬ್ದಕ್ಕೆ ಪ್ರಾಸಬದ್ಧವಾಗಿ ಹಾಡು ಹೇಳುತ್ತಾ ಸಾಗುವ ತಂಡದಲ್ಲಿ ಅಜ್ಜಿ ವಿಶಿಷ್ಟ ವೇಷಭೂಷಣಗಳೊಂದಿಗೆ ನೆಕ್ಕಿ (ಗಾಳಿ) ಸೊಪ್ಪು ಎಂದು ಕರೆಯಲಾಗುವ ಒಂದು ಬಗೆಯ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ಯುವುದು ಸಂಪ್ರದಾಯ. ಅಜ್ಜಿ ವೇಷಧಾರಿಯೊಂದಿಗೆ ಅವರ ಮುಂದೆ ಮೈಗೆಲ್ಲಾ ಕಪ್ಪು ಮಸಿಯನ್ನು ಬಳಿದುಕೊಂಡು ಮುಖವಾಡ ತೊಟ್ಟಂತಹ 2 ಕಳಂಜ ವಾದ್ಯದ ಶಬ್ದಕ್ಕೆ ತಕ್ಕಂತೆ ಕುಣಿಯುತ್ತಾ ತಮ್ಮ ತಂಡದೊಂದಿಗೆ ಗ್ರಾಮಗಳಲ್ಲಿ ಸಂಚರಿಸುತ್ತಾರೆ. ಹೀಗೆ ಗ್ರಾಮದ ಎಲ್ಲಾ ಮನೆಗಳಿಗೆ ತೆರಳುವ ಇವರು ಮನೆಮಂದಿಗೆಲ್ಲಾ ಗಾಳಿಸೊಪ್ಪನ್ನು ನಿವಾಳಿಸಿ ದೃಷ್ಟಿ ತೆಗೆದು ತಮ್ಮ ಮೈಯಿಗೆ ಬಳಿದುಕೊಂಡ ಕಪ್ಪು ಬಣ್ಣದ ತಿಲಕವನ್ನು ಇಟ್ಟು ಆಶೀರ್ವದಿಸುವುದು ಸಂಪ್ರದಾಯ.
ಆಟಿ ಕಳಂಜ ಪ್ರತಿಮನೆಗಳಿಗೆ ತೆರಳಿದಾಗ ಆ ಮನೆಯವರು ಸಂತೋಷದಿಂದ ಸ್ವಾಗತಿಸುತ್ತಾರೆ. ಮನೆ ಮನೆಯಲ್ಲಿ ರೋಗರುಜಿನ ಬಾರದಿರಲಿ ಎಂಬ ಆಚರಣೆ ಹಿನ್ನೆಲೆಯಾಗಿದೆ ಕೆಂಪು ಬಟ್ಟೆ ತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನೃತ್ಯ ಮಾಡಿಕೊಂಡು ಬರುವ ದೇವೇಂದ್ರನ ಹೆಂಡತಿ ದೇವತೆ ಎಂದು ಸ್ಥಳೀಯರು ಪೂಜಿಸುತ್ತಾರೆ. ಇವರನ್ನು ಅಜ್ಜಿ (ಕಕ್ಕತಜ್ಜಿ) ಎಂದು ಕರೆಯಲಾಗುತ್ತದೆ. ಮನೆಗೆ ಬರುವಾಗ ಕೈಯಲ್ಲಿ ನೆಕ್ಕಿ ಸೊಪ್ಪು ಹಿಡಿದುಕೊಂಡು ಬರುತ್ತಾರೆ.
ದುಗ್ಗಳ ಸದಾನಂದ
ಮಾಧ್ಯಮ ವರದಿಗಾರರು, ನಾಪೋಕ್ಲು