ಸಾಧಿಸಿದರೆ ಏನನ್ನು ಗಳಿಸಬಹುದು ಎಂಬುದಕ್ಕೆ ಸಾಕ್ಷಿ 75ರ ಹರೆಯದ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಇವರು. ಯುವ ನೃತ್ಯ ಕಲಾವಿದೆಯರು ನಾಚಿಕೊಳ್ಳುವಂತೆ ತನ್ನ ಅಂಗಸೌಷ್ಟವ, ಅಭಿನಯ, ಅಡವುಗಳ ಪಕ್ವತೆ, ಅಂಗ ಶುದ್ಧತೆ ಇವುಗಳಿಗೆ ಪೂರಕವಾಗಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ ‘ವಸುಂಧರಾ ಶೈಲಿ’ ಎಂಬುದನ್ನು ಕಲಾ ಪ್ರಪಂಚಕ್ಕೆ ನೀಡಿದ ಗುರು ಡಾ. ವಸುಂಧರಾ ದೊರೆಸ್ವಾಮಿ ನಿಜಕ್ಕೂ ಶ್ಲಾಘನೀಯರು.
ಅವರು ಇತ್ತೀಚೆಗೆ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಮಂಗಳೂರು ಇದರ ನಿರ್ದೇಶಕಿ ಹಾಗೂ ಗುರುಗಳ ಶಿಷ್ಯೆ ವಿದುಷಿ ಭ್ರಮರಿ ಶಿವಪ್ರಕಾಶ ಇವರು ಏರ್ಪಡಿಸಿದ ಆರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಫಲಾನುಭವಿಗಳಾದ ತನ್ನ ಪ್ರಶಿಷ್ಯರುಗಳಲ್ಲಿ ಹೊಸತನವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಡಾ. ವಸುಂಧರಾ ಅವರು ಮಂಗಳೂರಿನ ಪ್ರಶಿಷ್ಯರೊಂದಿಗೆ ಉಡುಪಿ, ಬೆಂಗಳೂರು ಹಾಗೂ ಕೋಲ್ಕತ್ತಾದ ಶಿಷ್ಯ-ಪ್ರಶಿಷ್ಯರೂ ಈ ಕಾರ್ಯಾಗಾರದಲ್ಲಿ ಭಾಗಿಯಾದರು.
ಪ್ರತೀದಿನವೂ ಆರಂಭದಲ್ಲಿ ನೃತ್ಯಕ್ಕೆ ಬೇಕಾದ ಉಪಯುಕ್ತ ಯೋಗಾಭ್ಯಾಸದಿಂದ ಆರಂಭಿಸಿ ನೃತ್ಯಬಂಧಗಳನ್ನು ಹೇಳಿಕೊಡುವಲ್ಲಿ ಡಾ. ವಸುಂಧರಾ ದೊರೆಸ್ವಾಮಿ ಯಶಸ್ವಿಯಾದರು. ಮೊದಲನೆಯ ದಿನ ಉತ್ತುಕಾಡು ವೆಂಕಟಸುಬ್ಬ ಅಯ್ಯರ್ ಇವರ ಗಂಭೀರ ನಾಟಿ ರಾಗದ ಖಂಡ ಛಾಪು ತಾಳದ ಶ್ರೀ ವಿಘ್ನರಾಜಮ್ ಭಜೆ ಎಂಬ ಕೃತಿಗೆ ನೃತ್ಯವನ್ನು ಸಂಯೋಜಿಸಲಾಯಿತು. ಈ ನೃತ್ಯದಲ್ಲಿ ಗಣಪತಿಯ ಅನೇಕ ಭಂಗಿಗಳು ಹಾಗೂ ಅಡವುಗಳ ಜೋಡಣೆಯೂ ಪೂರಕವಾಗಿ ಹೊಂದಾಣಿಕೆ ಇದ್ದು ಬರಿಯ ಪುಷ್ಪಾಂಜಲಿಯಂತಿರದೆ ಹೊಸತನದಿಂದ ಮೂಡಿಬಂದಿತು.
ಎರಡನೆಯ ದಿನ ನೃತ್ಯಾಂಜಲಿ ಎಂಬ ಹೊಸ ಕಲ್ಪನೆಯ ನೃತ್ಯ. ಸಾಮಾನ್ಯವಾಗಿ ಚತುರಶ್ರ ಅಲಾರಿಪು ಎಂಬುದು ಅಭಿನಯವಿಲ್ಲದೆಯೇ ಅಡವುಗಳ ಜೋಡಣೆ ಇರುವ ನೃತ್ಯ ಬಂಧ. ಆದರೆ ಇಲ್ಲಿಯ ಅಲರಿಪುವಿನಲ್ಲಿ ಐಗಿರಿ ನಂದಿನಿ ಎಂಬ ಶ್ಲೋಕವನ್ನು ಅಲ್ಲಲ್ಲಿ ಜೋಡಿಸಿ, ಈ ಶ್ಲೋಕಕ್ಕೆ ಅಭಿನಯವು ಸೇರಿ ನೃತ್ಯ ಬಂಧವಾಗಿ ಮಾರ್ಪಟ್ಟಿತು.
ಮೂರನೆಯ ದಿನ ಶ್ರೀರಾಮಚಂದ್ರ ಕೃಪಾಳು ಭಜಮನ ಎಂಬ ತುಳಸೀದಾಸರ ಕೀರ್ತನೆಗೆ ಅಭಿನಯವನ್ನು ಹೇಳಿಕೊಡಲಾಯಿತು. ಇದು ಸಂಪೂರ್ಣ ರಾಮಾಯಣಕ್ಕೆ ಸಾಕ್ಷಿಯಾಯಿತು.
ಗುರು ಡಾ. ವಸುಂಧರಾ ದೊರೆಸ್ವಾಮಿ ಕಾರ್ಯಾಗಾರದ ಉದ್ದಕ್ಕೂ ಎಲ್ಲಿಯೂ ವಿಶ್ರಮಿಸದೆ ವಿದ್ಯಾರ್ಥಿಗಳಿಗೆ ಪಾಠವನ್ನು ಮನವರಿಕೆ ಮಾಡಿಸಲು ಶ್ರಮಿಸಿದರು. ನರ್ತಿಸಿ ಆಯಾಸಗೊಂಡ ವಿದ್ಯಾರ್ಥಿಗಳು ಗುರುಗಳ ಉತ್ಸಾಹವನ್ನು ಕಂಡು ಎಲ್ಲಿಯೂ ವಿರಮಿಸದೆ ಕಾರ್ಯಾಗಾರದ ಯಶಸ್ವಿಗೆ ಪಾತ್ರರಾದರು.
ವಿದುಷಿ ಭ್ರಮರಿಯವರು ಈ ಎಲ್ಲ ನೃತ್ಯಬಂಧಗಳ ಹುಟ್ಟು- ಬೆಳವಣಿಗೆ- ವಿಕಾಸ ಹಾಗೂ ಅರ್ಥ ಕಲ್ಪನೆಗಳ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರೆ, ವಿದುಷಿ ಶ್ರೀಸನ್ನಿಧಿಯವರು ಈ ನೃತ್ಯಬಂಧಗಳ ಹಾಡುಗಾರಿಕೆಯ ಪರಿಚಯವನ್ನು ಮಾಡಿಸಿ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿಸಿದರು.
ವಿದ್ವಾನ್ ಚಂದ್ರಶೇಖರ ನಾವಡ, ಸುರತ್ಕಲ್