ಜೀವನ ಸುಂದರವಾಗಿರಬೇಕೆಂದರೆ ಬದುಕಿನಲ್ಲಿ ಸಂಭ್ರಮಗಳಿರಬೇಕು. ಕಲೆ, ಸಂಗೀತ, ಸಾಹಿತ್ಯ, ಶಿಲ್ಪ, ವಾಸ್ತು, ನಾಟಕ, ನೃತ್ಯ ಇವೆಲ್ಲವನ್ನೂ ಆಸ್ವಾದಿಸುವ ಮನೋಭಾವನೆ ಬೆಳೆಸಿಕೊಂಡಲ್ಲಿ ಬದುಕು ಇನ್ನೂ ಶ್ರೀಮಂತವಾಗುತ್ತದೆ. ಅದಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಊರು, ತನ್ನ ಮನೆತನ, ತನ್ನ ಪರಂಪರೆ, ತಾನು ಕಲಿತ ಶಾಲೆಯ ಬಗ್ಗೆ ಅಪಾರವಾದ ಪ್ರೀತಿ, ಗೌರವ ಸಹಜವಾಗಿಯೇ ಇರುತ್ತದೆ. ಇಂತಹ ಅಭಿಮಾನದಿಂದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ತಾವು ಕಲಿತ ಕಲಾ ಶಾಲೆಯ ವಜ್ರಮಹೋತ್ಸವ ಸಂಭ್ರಮ ಆಚರಿಸಿದ್ದು ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ.




ಕಳೆದ ತಿಂಗಳ ದಿನಾಂಕ ಸೆಪ್ಟೆಂಬರ್20, 21ಮತ್ತು22ನೇ 2024ರಂದು ದಾಕಹವಿಸ ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ ತಾವು ಕಲಿತ ಕಲಾ ಕಾಲೇಜಿನ 60ವರ್ಷದ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು.
ಈ ಸಮ್ಮಿಲನ ಕಾರ್ಯಕ್ರಮ ಕಾಲೇಜಿನೊಂದಿಗೆ, ಪರಸ್ಪರ ಕಲಾ ಸ್ನೇಹಿತರೊಂದಿಗೆ, ಸಹಪಾಠಿಗಳೊಂದಿಗೆ ಆಂತರಿಕ ಸಂಬಂಧವನ್ನು ಹೆಚ್ಚಿಸಿದ ಸಂಭ್ರಮ. ಸಾವಿರ ಸಾವಿರ ಕಲಾ ವಿದ್ಯಾರ್ಥಿಗಳ ಹೃದಯಕ್ಕೆ ಅಮೃತಸ್ಪರ್ಶದ ಅನುಭವವಾದ ಸಂಭ್ರಮ. ಅವರೆಲ್ಲರ ಸ್ವಯಂ ಪ್ರೇರಣೆಯ ಕಾರ್ಯೋತ್ಸಾಹ, ಹೊಸ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.




ನಾನೂರಕ್ಕೂ ಹೆಚ್ಚು ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿ ಕಾಲೇಜಿನ 60 ವರ್ಷದ ವಜ್ರಮಹೋತ್ಸವನ್ನು ಆಚರಿಸಿ ಸಂಭ್ರಮಿಸಿ ಕಾಲೇಜಿಗೆ ಕೃತಜ್ಞತೆಯನ್ನು ಸಮರ್ಪಿಸಿದರು. ಗುರುಗಳಿಗೆ ವಂದನೆ ಸಲ್ಲಿಸಿದರು. ಈ ಕಾಲೇಜಿನ ಪ್ರಭಾವಕ್ಕೊಳಗಾದ ದಾವಣಗೆರೆಯ ಕಲಾಭಿಮಾನಿಗಳು ಬಂದು ಧನ್ಯತೆಯನ್ನು ಸಮರ್ಪಿಸಿದರು. 1964ರಲ್ಲಿ ಪ್ರಾರಂಭವಾದ ಈ ಕಲಾಸಂಸ್ಥೆ ಸಾಗಿಬಂದ ದಾರಿಯನ್ನು, ಘಟಿಸಿದ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿ ನಮನವನ್ನು ಸಲ್ಲಿಸಿದರು. ಇದೊಂದು ಭಾವನಾತ್ಮಕವಾಗಿಯೂ, ಚಿಂತನಾರ್ಹವಾಗಿಯೂ, ಸಂಭ್ರಮಯುತವಾಗಿ ಸಮ್ಮೋಹನಗೊಳಿಸಿತ್ತು. ಇದನ್ನೆಲ್ಲ ಸಂಘಟಿಸಿದ್ದು ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ. ಅದೇ ದಾಕಹವಿಸ. ಕಲೆಗೆ ಸಂಬಂಧಿಸಿದ ಎಲ್ಲ ವಿಷಯಗಳು ಅಲ್ಲಿತ್ತು. ಕಲಾ ಶಿಬಿರ, ಕಲಾಪ್ರದರ್ಶನ, ಚಿತ್ರ, ಶಿಲ್ಪ, ವ್ಯಂಗ್ಯಚಿತ್ರ, ಕ್ಯಾಲಿಗ್ರಫಿ, ಕಲಾ ಪ್ರಾತ್ಯಕ್ಷಿಕೆಗಳು, ದೃಶ್ಯ ಪ್ರಸ್ತುತಿ, ಕಲಾ ಶೋಭಾಯಾತ್ರೆ, ಸಭಾ ಕಾರ್ಯಕ್ರಮಗಳು, ಗಿಡನೆಡುವ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಲ್ಫೀ ಫೊಟೋ ಪಾಯಿಂಟ್ ಗಳು, ಮೂರೂ ದಿನವೂ ಊಟ ತಿಂಡಿ ವ್ಯವಸ್ಥೆ, ಹೀಗೆ ಹತ್ತಾರು ಕಾರ್ಯಕ್ರಮಗಳಿಗೆ ದಾವಣಗೆರೆ ಕಲಾ ಕಾಲೇಜು ವೇದಿಕೆಯಾಗಿತ್ತು. ಪೂರ್ತಿ ಕಾಲೇಜ್, ಕಾಲೇಜಿನ ಆವರಣ ದೀಪಾಲಂಕೃತಗೊಂಡಿತ್ತು. ಸಾವಿರಾರು ಕಲಾವಿದರು, ಕಲಾಭಿಮಾನಿಗಳು, ವಿದ್ಯಾರ್ಥಿಗಳು, ಮಾದ್ಯಮ ಸ್ನೇಹಿತರು ಸಾಕ್ಷಿಯಾದರು.




ದಾವಣಗೆರೆಯ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಂಡಿತು. ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ. ಡಿ. ಕುಂಬಾರ ಅವರು ಅವರಿಂದ ಅರವತ್ತರ ಹೊತ್ತಿಗೆ ಸ್ಮರಣ ಸಂಚಿಕೆ ಅನಾವರಣಗೊಂಡಿದ್ದಲ್ಲದೆ, ಕಲಾಪ್ರದರ್ಶನ ಉದ್ಘಾಟಿಸಿದರು. ದಾಕಹವಿಸದ ಅಧ್ಯಕ್ಷರಾದ ಶ್ರೀ ಚಿ. ಸು. ಕೃಷ್ಣ ಸೆಟ್ಟಿ, ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ್ ಚಿಕ್ಕಪಾಟೀಲ್, ದಾಕಹವಿಸದ ಉಪಾಧ್ಯಕ್ಷರಾದ ಶ್ರೀ ಗಣಪತಿ ಎಸ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಶ್ ಎಸ್ ವಾಘ್ಮೋರೆ, ಖಜಾಂಚಿ ಶ್ರೀ ಗೋಪಾಲಕೃಷ್ಣ ಮನುವಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಮೂರು ದಿನಗಳ ಈ ಕಾರ್ಯಕ್ರಮ ದಲ್ಲಿ ಮೊದಲನೇ ದಿನ ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಲಾ ಶಿಬಿರ ಉದ್ಘಾಟನೆಗೊಂಡು ಇದು ಮೂರು ದಿನಗಳ ಕಾಲ ನಡೆಯಿತು. ಎರಡನೆಯ ದಿನ ಶೋಭಾಯಾತ್ರೆ, ಕಾರ್ಯಕ್ರಮದ ಉದ್ಘಾಟನೆ, ಸಾವಿರಾರು ಜನರು ಕುಳಿತು ಕೊಳ್ಳುವ ಸುಸಜ್ಜಿತ ಆಂಫಿಥಿಯೇಟರನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೂರನೇಯ ದಿನ 60 ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳಿಂದ ಗಿಡ ನೆಡುವ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳಿಂದ ಕಲಾ ಪ್ರಾತ್ಯಕ್ಷಿಕೆಗಳು ಭಾವಚಿತ್ರ, ಶಿಲ್ಪ, ವ್ಯಂಗ್ಯಚಿತ್ರ, ಕ್ಯಾಲಿಗ್ರಫಿ, ನಡೆದು ಎಲ್ಲರ ಮನಸೂರೆಗೊಂಡಿತು. ನಂತರ ಹೊಸ ತಂತ್ರಜ್ಞಾನದ ದೃಶ್ಯ ಪ್ರಸ್ತುತಿ ನಡೆಯಿತು. ಸಮಾರೋಪ ಸಮಾರಂಭ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಪ. ಸ. ಕುಮಾರ್ ಅವರು ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ಸವಿ ನೆನಪಿನ ಕಿಟ್ ನೀಡಲಾಯಿತು.
ಮೂರು ದಿನಗಳ ಕಾಲವೂ ದಾವಣಗೆರೆಯ ಬೆಣ್ಣೆದೋಸೆ, ವಿಶೇಷ ಊಟ ತಿಂಡಿಯ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ನೆನಪುಗಳ ರಾಶಿಯೇ ಅಲ್ಲಿತ್ತು. ಸುಂದರ ಸಾರ್ಥಕ ಕಾರ್ಯಕ್ರಮ ಮಾಡಿದ ಧನ್ಯತೆ ನಮ್ಮದಾಗಿತ್ತು.

ಗಣಪತಿ ಎಸ್ ಹೆಗಡೆ
ಕಲಾವಿದರು/ಕಲಾ ವಿಮರ್ಶಕರು