ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು.
ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕಲಾವಿದ/ಕಲಾವಿದೆಯರು ನಮ್ಮ ನಡುವೆ ಹಲವರಿದ್ದಾರೆ.
ಮುಖ್ಯವಾಗಿ ನನ್ನ ತವರೂರು ಕರಾವಳಿ ಕರ್ನಾಟಕ ನೃತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಲವಾರು ವಿಭಿನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ಮಹಾಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರೀ ಉಳ್ಳಾಲ ಮೋಹನ ಕುಮಾರ್ ಇವರು ಭರತನಾಟ್ಯ ಕಲೆಯನ್ನು ಕರಾವಳಿಯಲ್ಲಿ ಹಲವರಿಗೆ ಧಾರೆ ಎರೆದ ಮಹಾನುಭಾವರು. ಅವರ ಗರಡಿಯಲ್ಲಿ ಪಳಗಿ, ನೃತ್ಯ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಅನೇಕ ಕಲಾ ಪ್ರತಿಭೆಗಳು ನೃತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ, ಪೀಳಿಗೆಯಿಂದ ಪೀಳಿಗೆಗೆ ಈ ದೈವಿಕ ಕಲೆಯನ್ನು ನಿರಂತರವಾಗಿ ಕೊಂಡೊಯ್ಯುವ ಕಾರ್ಯವನ್ನು ಮಾಡುವಲ್ಲಿ ಸಫಲವಾಗಿವೆ. ಮಹಾಗುರುಗಳ ಶಿಷ್ಯವರ್ಗದಲ್ಲಿ ಅಗ್ರಪಂಕ್ತಿಯ ಸ್ಥಾನದಲ್ಲಿರುವ ಓರ್ವ ಸಾಧಕ ಗುರುಗಳು ಕರ್ನಾಟಕ ಕಲಾಶ್ರೀ ಗುರು ಗೀತಾ ಸರಳಾಯ. ಇವರು 1985ರಲ್ಲಿ ಮಂಗಳೂರಿನ ಕದ್ರಿಯಲ್ಲಿ ಸ್ಥಾಪನೆಯಾದ ‘ನೃತ್ಯ ಭಾರತಿ’ ಎಂಬ ನೃತ್ಯ ಸಂಸ್ಥೆಯ ಸ್ಥಾಪಕರು. ಪುಟ್ಟ ಸಸಿಯಾಗಿದ್ದ ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು, ಅನೇಕ ಕಲಾಸಕ್ತರಿಗೆ ಮಾರ್ಗದರ್ಶಕವಾಗಿದೆ. ದಿನಾಂಕ 12-02-2024ರಂದು 39 ವರ್ಷಗಳನ್ನು ಪೂರೈಸಿ 40ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಈ ಸಂಸ್ಥೆ ‘ನೃತ್ಯ ಯಜ್ಞ’ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿತ್ತು. 39 ವರುಷಗಳ ಈ ಸುದೀರ್ಘ ಅವಧಿಯಲ್ಲಿ ಅನೇಕ ನೃತ್ಯ ಕಲಾವಿದ/ಕಲಾವಿದೆಯರನ್ನು ರೂಪಿಸಿದ ಕೀರ್ತಿ ‘ನೃತ್ಯ ಭಾರತಿ’ಯದು. 39ನೆಯ ವರ್ಷ ಪೂರೈಸಿದ ಈ ಸಂಭ್ರಮಾಚರಣೆಯಲ್ಲಿ ಹೆಚ್ಚಿನ ಹಳೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಕಳೆಕಟ್ಟಲು ಸಾಧ್ಯವಾಯಿತು.
‘ನೃತ್ಯ ಯಜ್ಞ’ವು ಸಾಂಪ್ರದಾಯಿಕ ಮಾರ್ಗ ನೃತ್ಯಬಂಧವಾದ ಪುಷ್ಪಾಂಜಲಿಯಿಂದ ಪ್ರಾರಂಭವಾಗಿ ರಾಜರಾಜೇಶ್ವರಿ ಅಷ್ಟಕವನ್ನು ನರ್ತಿಸಲಾಯಿತು. ಈ ನೃತ್ಯಬಂಧವು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಪ್ರದರ್ಶಿತವಾಗಿದ್ದು, ಅಚ್ಚುಕಟ್ಟಾದ ನೃತ್ಯ ಸಂಯೋಜನೆ, ವಿಭಿನ್ನ ಅಡವುಗಳ ಜೋಡಣೆ ಮತ್ತು ನೃತ್ಯ ಪ್ರದರ್ಶಕರ ನಡುವಿನ ಹೊಂದಾಣಿಕೆಯಿಂದ ಕಲಾರಸಿಕರನ್ನು ತಲುಪಿತು. ಎರಡನೇ ನೃತ್ಯ ಬಂಧವೇ ಅಲರಿಪು. ಚತುರಶ್ರ ಜಾತಿಯಲ್ಲಿ ಜೂನಿಯರ್ ಮಟ್ಟದ ವಿದ್ಯಾರ್ಥಿಗಳಿಗೆ ಸಂಯೋಜಿಸಲಾಗಿತ್ತು. ಇದರ ವಿಶೇಷವೆಂದರೆ ಗುರು ಗೀತಾ ಸರಳಾಯ ಅವರ ನಟುವಾಂಗ ಮತ್ತು ಅಲರಿಪುವಿನ ಸೊಲ್ಲುಕಟ್ಟುಗಳ ಉಚ್ಛಾರ. ಚಿಕ್ಕ ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಸಾಗಿದ ಸೊಲ್ಲುಗಳ ಉಚ್ಛಾರ ಮಕ್ಕಳಿಗೆ ವೇದಿಕೆಯ ಬಗೆಗಿನ ಭಯ ದೂರವಾಗಿ ಲಾಲಿತ್ಯದಿಂದ ವಿದ್ಯಾರ್ಥಿಗಳು ನರ್ತಿಸಿದ್ದು, ಗುರು ಗೀತಾ ಸರಳಾಯರ ವೃತ್ತಿ ಜೀವನದ ಅನುಭವವನ್ನು ಸಾರುವಂತಿತ್ತು ಎಂದರೆ ಅತಿಶಯೋಕ್ತಿಯಲ್ಲ.
ವಾರ್ಷಿಕ ಉತ್ಸವ ಎಂದ ಮೇಲೆ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅದೊಂದು ಉತ್ತಮ ವೇದಿಕೆ. ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಎಲ್ಲರಿಂದಲೂ ಶಹಭಾಸ್ ಗಿರಿ ಗಿಟ್ಟಿಸಿಕೊಳ್ಳಲು ಒಂದೊಳ್ಳೆ ಅವಕಾಶ. ಇದನ್ನು ಪುಟ್ಟ ವಿದ್ಯಾರ್ಥಿ ಕಲಾವಿದೆಯರು ಜಾಣ್ಮೆಯಿಂದ ಬಳಸಿಕೊಂಡರು. ಗಣಪತಿಯ ಸ್ತುತಿ ಪ್ರಣವಾಕಾರ, ವಸಂತ ರಾಗ ಮತ್ತು ಆದಿ ತಾಳದಲ್ಲಿ ರಚಿತವಾದ ಜತಿಸ್ವರ, ಶ್ರೀಮನ್ನಾರಾಯಣ ಮತ್ತು ಭಾಗ್ಯದ ಲಕ್ಷ್ಮಿ ಬಾರಮ್ಮ ನೃತ್ಯಗಳು ಪುಟಾಣಿ ಮಕ್ಕಳಿಂದ ಉತ್ತಮವಾಗಿ ಮೂಡಿಬಂತು.ಮುಂದೆ ದರುವರ್ಣವನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಈ ನೃತ್ಯ ಗೆದ್ದಿದ್ದು ಉತ್ತಮ ನೃತ್ಯ ಸಂಯೋಜನೆ, ವಿದ್ಯಾರ್ಥಿಗಳ ಸಾಮರ್ಥ್ಯದ ಪರಿಪೂರ್ಣ ಅನಾವರಣ ಮತ್ತು ಹಿಮ್ಮೇಳದ ಪರಿಪಕ್ವ ಜೋಡಣೆಯ ಕಾರಣದಿಂದ. ಈ ನೃತ್ಯದಲ್ಲಿ ಗುಂಪಿನ ಅಗಾಧವಾದ ಪರಿಶ್ರಮವು ಎದ್ದು ಕಾಣುತ್ತಿತ್ತು.
ಇದರ ನಂತರ ಪ್ರತಿಭಾನ್ವಿತ ಕಲಾವಿದೆ ತನ್ವಿ ರಾವ್ ಇವರ ನೃತ್ಯ ಶಿವ ಪದ – ಆಡಿದನೋ ಮದನಾರಿ. ಶಿವನನ್ನು ವರ್ಣಿಸಿದ ರೀತಿ ಮತ್ತು ಗುರು ರಶ್ಮಿ ಚಿದಾನಂದ್ ಇವರ ನೃತ್ಯ ಸಂಯೋಜನೆ ನಿಜಕ್ಕೂ ರಂಜಿಸಿತು. ತನ್ವಿಯವರು ಕಿರುತೆರೆ – ಹಿರಿತೆರೆಯ ಕೆಲಸದ ಒತ್ತಡದಲ್ಲಿದ್ದರೂ ಸಹ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಗುರು – ಶಿಷ್ಯೆಯ ನಡುವಿನ ಅತಿ ಮಧುರ ಬಾಂಧವ್ಯವನ್ನು ಮತ್ತು ಶಿಷ್ಯೆಗಿರುವ ಗುರುಭಕ್ತಿಯನ್ನು ಎತ್ತಿ ಹಿಡಿಯುವುದರೊಂದಿಗೆ ನೃತ್ಯದ ಬಗೆಗೆ ತನ್ವಿ ಅವರಿಗೆ ಇರುವ ಆಸಕ್ತಿ ಮತ್ತು ಅಗಾಧ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಸಾಕ್ಷಿಯಾಯಿತು.
ಪುಟ್ಟದಾದ ಸಭಾ ಕಾರ್ಯಕ್ರಮವನ್ನು ಆಯೋಜಿಸಿ ಕರಾವಳಿಯ ಸಾಧಕದ್ವಯರಾದ ಶ್ರೀಯುತ ನಿತ್ಯಾನಂದ ರಾವ್ ಪೇಜಾವರ ಮತ್ತು ಶ್ರೀಯುತ ಸತ್ಯಾನಂದ ರಾವ್ ಪೇಜಾವರ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಗೋವರ್ಧನ ಗಿರಿಧಾರಿ, ಬಂದನೋಡೆ, ಶಿವ ಸ್ತುತಿ – ಭೋ ಶಂಭೋ ತುಂಬಾ ಅಚ್ಚುಕಟ್ಟಾಗಿತ್ತು. ಕೊನೆಯಲ್ಲಿ ಮಾತೆ ಪೂಜಕನಾದ ಗೀತೆಗೆ ವಿಭಿನ್ನ ಸಂಯೋಜನೆಯಿಂದ ನೃತ್ಯ ಪ್ರದರ್ಶನ ನಡೆಯಿತು. ನೃತ್ಯದ ಆಶಯ ದೇಶದ ಸಂಸ್ಕೃತಿಯನ್ನು ಉಳಿಸುವುದು ಮಾತ್ರವಲ್ಲದೆ ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಿದ ಯೋಧರಿಗೆ ನಮನ ಮತ್ತು ಮಹನೀಯರನ್ನು ಕೊಂಡಾಡಿ ಸ್ಮರಿಸುವುದಾಗಿತ್ತು. ಈ ನೃತ್ಯವು ಸೇರಿದ್ದ ಕಲಾ ರಸಿಕರ ಹೃದಯದಲ್ಲಿ ದೇಶಭಕ್ತಿ ಸ್ಪುರಿಸುವಂತೆ ಮಾಡಿದ್ದು ನೃತ್ಯ ಭಾರತಿಯ ಹೆಗ್ಗಳಿಕೆ.
‘ನೃತ್ಯ ಯಜ್ಞ’ ಕಾರ್ಯಕ್ರಮದ ನಿರೂಪಣೆಯನ್ನು ಗುರು ವಿದುಷಿ ರಶ್ಮಿ ಚಿದಾನಂದ್ ಮತ್ತು ವಿದುಷಿ ರಮ್ಯಚಂದ್ರ ಅವರು ಸಮರ್ಥವಾಗಿ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಕಳೆ ನೀಡಿದ್ದ ಇನ್ನೊಂದು ಮುಖ್ಯ ಅಂಶವನ್ನು ಉಲ್ಲೇಖಿಸಲೇಬೇಕು. ಅದುವೇ ಸಮರ್ಥ ಹಿಮ್ಮೇಳ ಕಲಾವಿದರ ಕೈಚಳಕದ ಪ್ರತಿಭೆ ನೃತ್ಯ ಯಜ್ಞದ ಯಶಸ್ಸಿಗೆ ಸಾಕ್ಷಿಯಾಗಿದೆ. ಹಾಡುಗಾರಿಕೆಯಲ್ಲಿ ವಿದ್ವಾನ್ ಅನಂತ್ ವಿಕ್ರಂ ಬೆಂಗಳೂರು, ನಟುವಾಂಗದಲ್ಲಿ ಗುರು ಗೀತಾ ಸರಳಾಯ, ಗುರು ರಶ್ಮಿ ಚಿದಾನಂದ್, ಮೃದಂಗದಲ್ಲಿ ಬೆಂಗಳೂರಿನ ಶ್ರೀ ಸಾಯಿವಂಶಿ ಮತ್ತು ಕೊಳಲಿನಲ್ಲಿ ಶ್ರಿ ಗಣೇಶ್ ಬೆಂಗಳೂರು ಸಹಕರಿಸಿದರು.
ಒಟ್ಟಿನಲ್ಲಿ ‘ನೃತ್ಯ ಯಜ್ಞ’ ಕಾರ್ಯಕ್ರಮವು ನೃತ್ಯ ಭಾರತಿ ಸಂಸ್ಥೆಯ 39 ವರುಷಗಳ ನೃತ್ಯ ಪಯಣದ ಶಿಲ್ಪಿಯಾಗಿ, ಸುಂದರ ನೃತ್ಯ ಕಲಾಕೃತಿಗಳನ್ನು ಪರಿಚಯಿಸಿ, ಅನೇಕರನ್ನು ನೃತ್ಯದತ್ತ ಆಕರ್ಷಿಸಿತು ಮತ್ತು ಕಲಾ ರಸಿಕರ ಕಂಗಳಿಗೆ ದೈವಿಕ ಆನಂದವನ್ನು ನೀಡಿತು ಎಂಬುದರಲ್ಲಿ ಸಂದೇಶವಿಲ್ಲ.
– ವಿದ್ವಾನ್ ಮಂಜುನಾಥ ಎನ್. ಪುತ್ತೂರು.