1929ರ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯವನ್ನು ವಾಚಿಸಿ ನಾಡಿಗೆ ‘ಬೇಂದ್ರೆ’ ಕಾವ್ಯದ ಗುಂಗು ಹಿಡಿಸಿಬಿಟ್ಟರು.
ಇವರ ಕಾವ್ಯ ವಾಚನ ಕೇಳಿದ ಮಾಸ್ತಿಯವರು ಬೆಳಗಾವಿಯಿಂದ, ಧಾರವಾಡದ ಬೇಂದ್ರೆಯವರ ಮನೆಗೆ ಬಂದು ಅವರು ಬರೆದ ಕವಿತೆಗಳನ್ನೆಲ್ಲಾ ತೆಗೆದುಕೊಂಡು ಹೋಗಿ ಆಯ್ದು ‘ಗರಿ’ ಕವನ ಸಂಕಲನವನ್ನು 1932ರಲ್ಲಿ ಬೆಂಗಳೂರಿನಿಂದ ಪ್ರಕಟಮಾಡಿದರು.
ಇದು ಬೇಂದ್ರೆಯವರ ಮೊದಲ ಕವನ ಸಂಕಲನ. ಈ ಕವನ ಸಂಕಲನ ನಾಡಿನಲ್ಲೆಲ್ಲಾ ಒಂದು ರೀತಿಯ ಕಾವ್ಯದ ವಿದ್ಯುತ್ ಸಂಚಲನವನ್ನುಂಟು ಮಾಡಿತು.
ಇದರಲ್ಲಿ ಒಟ್ಟು 55 ಕವಿತೆಗಳಿವೆ. ಮೊದಲನೆಯದು ‘ಬೆಳಗು’. ಕೊನೆಯದು ‘ಗರಿ’. ಈ ಸಂಕಲನದ ಕೊನೆಯ ಕವಿತೆಯೆ, ಈ ಸಂಕಲನದ ಶಿರೋನಾಮೆ.
ಗರಿ ಹಕ್ಕಿಗಳಲ್ಲಿ ಮಾತ್ರ ಕಂಡು ಬರುವ ಒಂದು ವಿಶೇಷ ನಿರ್ಜೀವ ರಚನೆ. ಆದರೆ ಈ ನಿರ್ಜಿವತ್ವವು ಪಕ್ಷಿಗೆ ಹಾರಲು ಜೀವವನ್ನು ತಂದು ಕೊಡುತ್ತದೆ. ಇದು ಇದರ ವಿಶೇಷ. ಇವು ಪಕ್ಷಿ ದೇಹವನ್ನು ಮುಚ್ಚುವದಲ್ಲದೆ, ಪಕ್ಷಿ ದೇಹಕ್ಕೆ ಹೊಸ ಹೊರ ರೂಪ ರಚನೆಯನ್ನು ಕೊಡುತ್ತವೆ.
ಜಗತ್ತಿನ ಅನೇಕ ಸಂಸ್ಕೃತಿಗಳಲ್ಲಿ ಗರಿಗಳು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದೊಂದಿಗಿನ ಸಂಬಂಧವನ್ನು ಪ್ರತಿನಿಧಿಸುತ್ತವೆ. ಪಕ್ಷಿಗಳ ದೇಹದಿಂದ ತಾವಾಗಿಯೇ ಉದುರಿದ ಗರಿಗಳನ್ನು ದೇವತಾ ಕಾರ್ಯಗಳಿಗೆ ಬಳಸುವ ಒಂದು ರೂಢಿ ಜಗತ್ತಿನಾದ್ಯಂತವಿದೆ. ಜಗತ್ತಿನ ಕೆಲವು ಕಡೆ ಗರಿಗಳಲ್ಲಿ ಶಕ್ತಿ ಮತ್ತು ಸಂಕೇತವನ್ನು ನೋಡುತ್ತಾರೆ. ವಿವಿಧ ಬಣ್ಣದ ಗರಿಗಳಿಗೆ ಬೇರೆ, ಬೇರೆ ಅರ್ಥವನ್ನು ಸಂಕೇತಿಸುವ ಒಂದು ನಂಬಿಕೆಯ ವಿಜ್ಞಾನ ನಮ್ಮ ಜೊತೆಯಲ್ಲಿದೆ. ಹಕ್ಕಿಗೆ ಹಾರಲು ಗರಿ ಬಹಳ ಮುಖ್ಯವಾದದ್ದು. ಹಕ್ಕಿ ಹಾರುವುದು ಸ್ವಾತಂತ್ರ್ಯದ ಸಂಕೇತ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗರಿ ಶಬ್ದ ವಿವಿದಾರ್ಥಗಳಿಂದ ಕೂಡಿದೆ. ಬೇರೆ ಶಬ್ದಗಳ ಜೊತೆ ಕೂಡಿಕೊಂಡು ಭಿನ್ನ-ಭಿನ್ನ ಅರ್ಥ ಕೊಡುತ್ತವೆ. ‘ಗರುತ್’ ಎಂಬ ಸಂಸ್ಕೃತ ಪದ ರೆಕ್ಕೆ ಎಂಬ ಅರ್ಥವನ್ನು ಕೊಟ್ಟು, ನಮ್ಮಲ್ಲಿ ‘ಗರಿ’ಯಾಗಿ ರೂಪಗೊಂಡಿದೆ. ಗರಿಯೊಡೆ ಎಂದರೆ ಚೈತನ್ಯವನ್ನು ಪಡೆ ಎಂದರ್ಥ. ಸಾಮಾನ್ಯವಾಗಿ ಗರಿ ಎಂದರೆ ಗರಿಕೆ ಎಂದರ್ಥ. ಪಕ್ಷಿಗೆ ಗೂಡು ಕಟ್ಟಲು ಈ ಗರಿ ಬೇಕು. ಕೈಯಲ್ಲಿ ಈಟಿಯನ್ನು ಧರಿಸಿದ ತುಂಬಾ ಸುಂದರಿಯಾದ ಹುಡುಗಿಯನ್ನು ‘ಗರಿ’ ಎಂದು ಕರೆಯುತ್ತಾರೆ. ರಾಜ ಮಹರಾಜರ ಕಿರೀಟಕ್ಕೆ ಶೋಭೆಯನ್ನು ನೀಡಲು ವಿವಿಧ ಪಕ್ಷಿಗಳ ಗರಿಯನ್ನು ಬಳಸುವ ಪದ್ದತಿ ಜಗತ್ತಿನಾದ್ಯಂತ ಇದೆ. ಗರಿಯ ಜೊತೆ ತಾಳೆ ಶಬ್ದ ಕೂಡಿಕೊಂಡು ‘ತಾಳೆ ಗರಿ’ಯಾಗಿ ಅದರ ಮೇಲೆ ಗರಿಯನ್ನು ಲೇಖನಿಯನ್ನಾಗಿ ಬಳಸಿ ಬರದಿಡುವ ಒಂದು ಪರಂಪರೆ ಈ ದೇಶದಲ್ಲಿತ್ತು.
ವ್ಯಾಧ ತನ್ನ ಬಾಣಗಳಿಗೆ ಕಂಕ ಪಕ್ಷಿಯ ಗರಿಗಳನ್ನು ಕಟ್ಟುತ್ತಿದ್ದ. ಅವು ಅವನ ಗುರಿಗೆ ಅನುವಾಗುತ್ತಿದ್ದವು. ಗುರಿಗೆ ಗರಿ ಬಹಳ ಮುಖ್ಯವಾದವು. ಮುಂಡಕ ಉಪನಿಷತ್ತಿನಲ್ಲಿ ಗರಿ ಒಂದು ರೂಪಕವಾಗಿ ಬಳಕೆಯಾಗಿದೆ. ‘ಪ್ರಣವೋ ಧನುಃ ಶರೋ ಹ್ಯಾತ್ಮಃ, ಬ್ರಹ್ಮ ತಲ್ಲಕ್ಷ ಮುಚ್ಯತೆ’. ಬೇಂದ್ರೆಯವರು ಬಳಸಿದ ಶಬ್ದಗಳನ್ನು ನಾವು ಎಲ್ಲೋ ಒಂದೆರಡು ಅರ್ಥದ ದೃಷ್ಟಿಯಲ್ಲಿ ನೋಡಿದರೆ ಅವು ಅನೇಕ ವಿಶಿಷ್ಠವಾದ ಅರ್ಥಗಳನ್ನು ಒಳಗೊಂಡಿರುತ್ತವೆ.
‘ಎಲ್ಲೆ ಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವಿ
ಹಕ್ಕಿ ಗಾಳಿ ಸಾಗಿದೆ’
ಹಾರುವ ಹಕ್ಕಿಗೆ ಯಾವುದೇ ರೀತಿಯ ಗಡಿ ಅಥವಾ ಸೀಮೆಯ ಬಂಧನ ಇಲ್ಲದೆ ಇರುವ ಆಕಾಶದಲ್ಲಿ ಸದಾ ಹಾರುವಿ. ನಿನ್ನ ಹಾರುವಿಕೆ ನಿನಗೂ ಹಾಗೂ ನಮಗೂ ಒಂದು ರೀತಿಯ ಸಂತೋಷವನ್ನು ಕೊಡುತ್ತದೆ. ಗಾಳಿಯ ಜೊತೆ ಹಾರುವ ಹಕ್ಕಿಯನ್ನು ನೆಲದ ಮೇಲೆ ಇರುವ ಜನ ತಲೆ ಎತ್ತಿ ನೋಡುತ್ತಾರೆ. ಹಾರುವ ಹಕ್ಕಿಗಳನ್ನು ನೋಡುವ ಮಕ್ಕಳು ಅವುಗಳ ಜೊತೆಗೆ ಒಂದು ಸಂಬಂಧವನ್ನು ಕಲ್ಪಿಸುತ್ತಾರೆ. ಈ ಹಕ್ಕಿ ಮೊನ್ನೆ ನಮ್ಮ ಮನೆ ಹತ್ತಿರ ಬಂದಿತ್ತು. ಅದನ್ನು ನಾನು ನೋಡಿದೆ ಎಂದು, ತನ್ನ ಗೆಳೆಯ ಹಾಗೂ ಗೆಳೆತಿಯರಿಗೆ ಹೇಳುತ್ತಾರೆ. ಹಾರುವದು ಹಕ್ಕಿಯ ಧರ್ಮ.
ಅದರ ಹಾಗೆ ಸಾಗಿದಾ
ಹಾರುವಂಥ ಹಕ್ಕಿಯ
ಜಾಡು ಹಿಡಿದು ನಡೆದಿದೆ
ಉದುರಿದಂಥ ಗರಿಗಳು’
ಹಕ್ಕಿ ಗಾಳಿಯ ಶಕ್ತಿಯನ್ನು ಬಳಸಿಕೊಂಡು ಗಾಳಿಯು ಸಾಗಿದ, ಸಾಗಿಸುತ್ತಿರುವ ಮಾರ್ಗದಲ್ಲಿ ಹಾರುತ್ತದೆ. ಈ ಹಾರುವ ಹಕ್ಕಿ ‘ಜಾಡು’ ಹಿಡಿದು ನಡೆದಿದೆ. ತಲೆಮಾರುಗಳಿಂದ ನಡೆದು ಬಂದ, ಒಬ್ಬರಿಂದೊಬ್ಬರಿಗೆ ಹಸ್ತಾಂತರಿಸಲ್ಪಟ್ಟ ಒಂದು ಸ್ಥಾಪಿತ ಪದ್ಧತಿ ಜಾಡು. ಅಭ್ಯಾಸ ಅಥವಾ ಪರಂಪರೆಯ ಜಾಡನ್ನು ಹಿಡಿದು ಹಕ್ಕಿ ಹಾರುವಿಕೆಯಲ್ಲಿ ನಡೆದಿದೆ. ಕವಿ ತನ್ನ ಕಾವ್ಯ ಕಾಯಕಕ್ಕೆ ಪರಂಪರೆಯ ಜ್ಞಾನದ ಜಾಡನ್ನು ಹಿಡಿದು ನಡೆಯುತ್ತಿದ್ದಾನೆ. ಈ ಜಾಡು ಪ್ರತಿಫಲ ರಹಿತವಾದದ್ದು. ಜಾಡಿನ ಗುರ್ತು ‘ಉದುರಿದಂಥ ಗರಿಗಳು’. ಈ ಸಾಲು ನಮಗೆಲ್ಲ ಬಾಲ್ಯವನ್ನು ನೆನಪಿಸುತ್ತದೆ. ಗಾಳಿಯ ಜೊತೆ ಹಾರುವ ಹಕ್ಕಿಗಳು ಗರಿಗಳು ನಿಸರ್ಗ ಕ್ರಮದಿಂದ ಉದುರಿ ಗಾಳಿಯಲ್ಲಿ ಸುಳಿಯುತ್ತ-ಸುಳಿಯುತ್ತ ಕೆಳಗೆ ಬರುತ್ತಿದ್ದವು. ಅದನ್ನು ಹಿಡಿದು ಸಂತಸ ಪಡುವ ಆಟ ನಿರಂತರತೆಯಲ್ಲಿ ನಡೆಯುತ್ತಿತ್ತು. ಅಂದಿತ್ತು-ಇಂದಿಲ್ಲ.
‘ಸುಳಿದು ತೀಡಿ ಹರಿಯುವಾ
ಸೂಸಿ ಸೂಸಿ ಬೀಸುವಾ
ಗಾಳಿ ಪಕ್ಕದಲ್ಲಿವು
ಮೂಡುತಿರಲಿ ಕ್ರಿಡೆಯಾ’.
ಬೇಂದ್ರೆ ಬೆಳಕಿಗೆ ಹರಿಯುವ ಶಕ್ತಿ ಇದೆ ಎಂದು, ಈ ಕವಿತಾ ಸಂಕಲನದ ಮೊದಲು ಪದ್ಯ ‘ಬೆಳಗು’ನಲ್ಲಿ ಹೇಳಿದರೆ, ‘ಗಾಳಿ’ ಸುಳಿದು ತೀಡಿ ಹರಿಯುತ್ತದೆ ಎಂಬುದನ್ನು ಹೇಳಿದ್ದಾರೆ. ‘ಬೆಳಕು’ ಹರಿಯುವದನ್ನು ಅನುಭವಿಸಿ ಬರೆದ ಕವಿ ಬೇಂದ್ರೆ. ‘ಗಾಳಿ’ ಸುಳಿದು ತೀಡಿ ಹರಿಯುತ್ತದೆ. ಸೂಸಿ, ಸೂಸಿ ಬೀಸುತ್ತದೆ. ಈ ಬೀಸುವಿನಲ್ಲಿ ಹಕ್ಕಿ ಪಕ್ಕದಲ್ಲಿ ಗಾಳಿ ಇದ್ದು ಅದು ಕ್ರೀಡಾಸಕ್ತತೆಗೆ ಹಕ್ಕಿಯನ್ನು ಕರೆದುಕೊಂಡು ಹೋಗುತ್ತದೆ. ‘ಪಕ್ಕದಲ್ಲಿವು’ ಎಂದರೆ, ಇನ್ನೊಂದರ್ಥ, ಸುಳಿ-ಸುಳಿ ಗಾಳಿ ನನ್ನ ಪಕ್ಕದಲ್ಲಿಯೇ ಸುಳಿತಾ ಇದೆ. ಆ ಸುಳಿಯಲ್ಲಿ ಹಾರುವ ಹಕ್ಕಿಯಿಂದ ಉದರಿದ ಗರಿಗಳು ಇವೆ. ಈ ಗಾಳಿ ‘ಬೇಂದ್ರೆ’ ಎಂಬ ಕವಿಯ ಕಾವ್ಯದ ಗಾಳಿ ಇದು. ಇನ್ನೊಬ್ಬರ ಮೇಲೆ ಪರಿಣಾಮ ಬೀರುವ ವ್ಯಕ್ತಿಯ ಶಕ್ತಿ. ನಂತರದ ವ್ಯಕ್ತಿಯ ಕ್ರಿಯೆ, ಶೈಲಿ ಇತ್ಯಾದಿಗಳು. ಗಾಳಿಗೆ ವಾದ್ಯವನ್ನು ಧ್ವನಿಸುವ ಶಕ್ತಿಯು ಇದೆ.
‘ಅಪ್ಪಿ ತಪ್ಪಿ ನೆಲದಲಿ
ಬಂದು ಇಳಿದರಿವುಗಳು
ಊದಿ ತೂರಿ ಹಾರಿಸು
ಮತ್ತೆ ಮತ್ತೆ ಮುಗಿಲಲಿ’
ಹಕ್ಕಿ ಹಾರುವಾಗ ಉದುರಿದ ಗರಿಗಳು ಸುಳಿ ಗಾಳಿಯ ಜೊತೆ ಲಾಸ್ಯವಾಡುತ್ತ, ನಭದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿರುತ್ತವೆ. ಈ ಗರಿಗಳು ಅಪ್ಪಿ-ತಪ್ಪಿ ನೆಲದ ಮೇಲೆ ಬಂದು ಇಳಿದರೆ, ಅವುಗಳನ್ನು ಊದಿ ಮತ್ತೆ ಮುಗಿಲಿಗೆ ಹಾರಿ ಬಿಡು ಎಂದು ಕವಿ ಮನುಜ ಮತಕ್ಕೆ, ಪಥಕ್ಕೆ ಅರಿವು ಮೂಡಿಸುತ್ತಾನೆ. ಈ ನುಡಿ ಕುರಿತು ಡಾ. ಕಿರಂ ನಾಗರಾಜ ಹೀಗೆ ಹೇಳುತ್ತಾರೆ. ‘ಗರಿಗಳಿರುವದು ಹಾರಲಿಕ್ಕೆ. ಆದರೆ ಒಮ್ಮೊಮ್ಮೆ ಮಾತ್ರ ಅವು ಉದುರಿ ನೆಲಕ್ಕೆ ಬೀಳುತ್ತವಲ್ಲ. ಅದನ್ನು ಕವಿ ಒಂದೊಂದು ಗರಿ ಕವಿತೆಯ ರೂಪದಲ್ಲಿ ಸಿಗುತ್ತವೆ. ಒಂದೊಂದು ಗರಿಗೆ ಒಂದೊಂದು ತರಹದ ಶಕ್ತಿ-ಒಂದೊಂದು ತರಹದ ಜೀವ ಇರುತ್ತದೆ. ಓದುಗನಾದ ನೀನು ಅದನ್ನು appreciate ಮಾಡಿ ಊದಿ ತೂರಿ ಬಿಟ್ಟು ಬಿಡು. ಅದು ಇನ್ನೊಬ್ಬನಿಗೆ ಸಿಗುತ್ತದೆ. ಅವನು ಅದನ್ನು ಮತ್ತೊಬ್ಬನಿಗೆ ಊದಿ ತೂರಿ ಕಳಿಸುತ್ತಾನೆ. ‘ಈ ಕ್ರಿಯೆಯಿಂದಲೇ ನಮಗೆ ನಮ್ಮ ಪೂರ್ವ ಸೂರಿಗಳೆಲ್ಲಾ ದೊರಕಿದ್ದಾರೆ. ಇದೊಂದು ಕವಿ ಕಾವ್ಯ ಪಯಣ. ಇದು ನಿತ್ಯ ನಿರಂತರವಾಗಿರಬೇಕೆಂಬ ಆಶಯ ಬೇಂದ್ರೆಯವರದು. ಈ ಪದ್ಯದಲ್ಲಿಯ ನಾಲ್ಕನೇ ನುಡಿ ಬಹಳ ಅರ್ಥಗಳನ್ನು ಹೊಂದಿದೆ. ಅನೇಕ ಬೇಂದ್ರೆ ಅಭ್ಯಾಸಿಗಳು ಇದನ್ನು ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಬೆರಗು ಬಟ್ಟು ಬಣ್ಣಕೆ
ಮುಚ್ಚಿ ಇಡದಿರಿವುಗಳ,
ಕೆಡಕು ಆಗಿ ಕಂಡರೂ
ಕೀಳಬೇಡ ರೋಮವ’.
ಪೂರ್ವಾಗ್ರಹ ಪೀಡಿತನಾಗಿ ಯಾವ ಹಕ್ಕಿಯ ಬಗ್ಗೆಯೂ ಕೆಡುಕನ್ನು ಕಾಣಬೇಡ. ಹಕ್ಕಿಯ ಬಣ್ಣದ ಗರಿಗೆ ಬೆರಗಾಗಿ ಅದರ ಪುಕ್ಕ ಕೀಳಬೇಡ. ಹಿಂಸೆ ಕೊಡುವದು ನಮ್ಮ ಸಂಸ್ಕೃತಿ ಅಲ್ಲ. ಶುಭ ನುಡಿದು, ಶುಭ ಕೊಡುವದು ಹಕ್ಕಿಯ ಗುಣ ಧರ್ಮ. ತನ್ನ ಗುಣ ಧರ್ಮ ಕಾಯ್ದುಕೊಂಡು, ನಮ್ಮ ಜೊತೆ ಗೆಳೆತನ ಮಾಡಲು ಬರುತ್ತದೆ. ನಿನ್ನ ಮನದ ಮಾತು ಮತ್ತು ಮತ್ತೊಬ್ಬರ ಮಾತು ಕೇಳಿ ಹಕ್ಕಿಯ ರೋಮದಂತಿರುವ, ನಯವಾದ ಪುಕ್ಕಗಳನ್ನು ಅಂದರೆ ಗರಿಗಳನ್ನು ಕೀಳಬೇಡ ಎಂದು ಕವಿ, ಕಾವ್ಯದ ಮೂಲಕ ನಾಗರಿಕ ಸಮಾಜಕ್ಕೆ ವಿನಂತಿ ಮಾಡಿಕೊಳ್ಳುತ್ತಾನೆ. ಪ್ರಕೃತಿಯ ಅರಿವನ್ನು ಈ ಮೂಲಕ ಮೂಡಿಸುತ್ತಾರೆ.
‘ಊದಿ ತೂರಿ ಹಾರಿಸು
ಹಾರಿದಷ್ಟು ಹಾರಲಿ
ಹಾರಲೆಂದು ಹುಟ್ಟಿದಾ
ಹಕ್ಕಿ ಮೈಯ ಗರಿಗಳು’
ನಾಲ್ಕನೇ ನುಡಿಯಲ್ಲಿ ಹೇಳಿದ ಮಾತನ್ನೇ ಮತ್ತೆ ಹೇಳಿದ್ದಾರೆ. ‘ಊದಿ ತೂರಿ ಹಾರಿಸು’ ಎಂದು. ಹಕ್ಕಿ, ಮೈಯ ಗರಿಗಳ ಸಹಾಯದಿಂದ ಸ್ವಾಭಾವಿಕವಾಗಿ ಹಾರಿದರೆ, ಉದರಿದ ಗರಿಗಳನ್ನು ಊದಿ ಹಾರಿಸು ಎನ್ನುತ್ತದೆ ಕವಿತೆ. ಕವಿ-ಕಾವ್ಯ-ಕಾವ್ಯದ ಓದು ಈ ಮೂರನ್ನು ಇದು ಸಂಯುಕ್ತವಾಗಿ ಸಮೀಕರಿಸುತ್ತದೆ. ಜಡವಾದ, ಉದುರಿದ ಗರಿಗೆ ಜೀವ ಜೊತೆಗೆ ಚೇತನ ತುಂಬುವ ಶಕ್ತಿ ಕಾವ್ಯಕ್ಕಿದೆ. ಪ್ರಕೃತಿಯ ಜೀವಂತಿಕೆಯ ಲಕ್ಷಣ, ಹಕ್ಕಿಯ ಹಾಗೂ ಗರಿಯ ಹಾರಾಟ.
‘ಕಂಡು ಅದರ ಆಟವಾ
ನೀನು ನಲಿವೆಯಾದರೆ
ಹಿಗ್ಗಿ ಬೆಂಬತ್ತುತಾ
ನವಿಲು ಆಗಿ ಕುಣಿಯುವೆ’.
ನಿನ್ನ ಕೈಗೆ ಸಿಕ್ಕ ಗರಿಗಳನ್ನು ಊದಿ ತೂರಿಸಿ ಹಾರಿ ಬಿಡು. ಅವು ಗಾಳಿಯ ಸುಳಿಗೆ ಸಿಕ್ಕು ಹಾರಾಟ ಮಾಡುತ್ತವೆ. ಅದನ್ನು ನೋಡಿ ನೀನು ನಲಿದರೆ, ನಿನ್ನ ಆ ನಲಿವು ನೋಡಿ, ಹಿಗ್ಗಿ ನವಿಲಿನಂತೆ ಕುಣಿಯುತ್ತಾ ನಿನ್ನನ್ನು ಬೆಂಬತ್ತುತ್ತೇನೆ. ಕೈಗೆ ಸಿಕ್ಕ ಗರಿಗಳೆಂದರೆ ಕವನ. ಊದುವದು ಎಂದರೆ ವಾಚಿಸುವದು. ವಾಚನಾನಂದದ ನಿನ್ನ ಭಾವವನ್ನು ನೋಡಿ ಕವಿಯಾದ ನಾನು ನವಿಲು ಹೇಗೆ ಜಡಿ ಮಳೆಗೆ ಕುಣಿದು ಸಂಭ್ರಮಮಿಸುತ್ತದೆಯೋ ಹಾಗೆ ನಾನು ಸಂಭ್ರಮಿಸುತ್ತೇನೆ.
‘ಅದುವು ಸೊಗಸದಿದ್ದರೂ
ಊದು ಗರಿಯ ಹಾರಿಸು
ಕಣ್ಣ ಮರೆಗೆ ಒಯ್ಯಲು
ಇದೆ ಸಮರ್ಥ ಗಾಳಿಯು’.
ಕೈಗೆ ಸಿಕ್ಕ ಗರಿಯು ನಿನಗೆ ಸೊಗಸದಿದ್ದರೆ ಅದನ್ನು ಊದಿ ಹಾರಿ ಬಿಡು. ಅದು ನಿನಗೆ ಕಾಣದಂತೆ ಮರೆಯಾಗುತ್ತದೆ. ಅದನ್ನು ಹಾರಿಸಿಕೊಂಡು ಹೋಗಲು ಗಾಳಿಯು ಸಮರ್ಥವಾಗಿದೆ. ಗಾಳಿಯ ಗುಣ ಲಕ್ಷಣ ಜಡಕ್ಕೆ ಜೀವ ತುಂಬುವದು.
‘ಆದ ಗಾಳಿ ಒಲಿಯದೆ
ಅದಕೆ ಬಲವು ಸಾಲದೆ
ಹೋದರೇನು ಹಾರಿಸು
ಹಕ್ಕಿ ಮೈಯ ಬದುಕದು’.
ಹಕ್ಕಿಗೆ ಹಾರಲು ರೆಕ್ಕೆ ಎಷ್ಟು ಮುಖ್ಯವೋ, ಗಾಳಿಯು ಅಷ್ಟೇ ಮುಖ್ಯ. ಗಾಳಿಗುಂಟ ಸಾಗುವ ಹಕ್ಕಿಗೆ ಗರಿ-ಗಾಳಿ ಎರಡೂ ಬೇಕು. ಹಕ್ಕಿಗೆ ಗಾಳಿ ಒಲಿಯದೆ ಹೋದರೆ ಹಾರಲು ಬಲವು ಸಾಲದು. ಗಾಳಿ ಒಲಿಯದೆ, ಬಲವು ಸಾಲದೇ ಇದ್ದಾಗ ನೀನು ಆ ಹಕ್ಕಿಯನ್ನು ಹಾರಿಸು. ಹಕ್ಕಿಯ ಮೈ ಬದುಕದಿದ್ದರೂ ಚೇತನಾ ರೂಪಿಯಾದ ಗರಿಗಳು ನಿರಂತರವಾಗಿ ಹಾರಾಡುತ್ತಲೇ ಇರುತ್ತವೆ.
‘ಎಲ್ಲೆ ಕಟ್ಟು ಇಲ್ಲದಾ
ಬಾನ ಬಟ್ಟೆಯಲ್ಲಿದೊ
ಎಂsದೆಂದು ಹಾರುವಿ
ಹಕ್ಕಿ-ಗಾಳಿ ಸಾಗಿದೆ’.
‘ಹಕ್ಕಿಗೆ ಗರಿ ಇದ್ದಂತೆ, ಕವಿಗೆ ಕವನ. ಬಲ್ಲವರು ಅದರೊಡನೆ ಆಡಬಹುದು.’
ಎನ್ನುತ್ತದೆ ಕವನದ ಭಾವ.
ಕೃಷ್ಣ ಕಟ್ಟಿ ಯಲಗೂರ