ಕನ್ನಡದ ನಮ್ಮ ಸಂದರ್ಭದ ಬಹುಮುಖ್ಯ ಚಿಂತಕರಲ್ಲಿ ಲಕ್ಷ್ಮೀಶ ತೋಳ್ಪಾಡಿಯವರೂ ಒಬ್ಬರು. ತಮ್ಮ ವಿದ್ವತ್ಪೂರ್ಣ ಉಪನ್ಯಾಸಗಳಿಂದ, ಪ್ರಖರವಾದ ಯೋಚನೆಗಳ ಗುಚ್ಛದಂತಿರುವ ಬರವಣಿಗೆಗಳಿಂದ ನಾಡಿನಾದ್ಯಂತ ಪರಿಚಿತರಾದವರು. ಶ್ರೋತೃಗಳನ್ನು ಚಿಂತನೆಗೆ ಹಚ್ಚಿ ಮುನ್ನಡೆಸುವ ಅವರ ಮಾತಿನ ಶೈಲಿ ಅನನ್ಯವಾದುದು. ಸಾಹಿತಿ, ವಿಮರ್ಶಕ, ಚಿಂತಕ ಇಂತಹ ಉಪಾಧಿಗಳನ್ನೋ ಪ್ರಚಾರವನ್ನೋ ಯಾವತ್ತೂ ಇಷ್ಟಪಡದ ಅವರು ಸಹಜವಾಗಿ ಯೋಚಿಸುವ ಓರ್ವ ಜಿಜ್ಞಾಸು. ತಾನು ಯಾವುದೇ ವಿಷಯನ್ನು ಕುರಿತು ಮಾತನಾಡಿದರೂ ಅದರ ಬಗೆಗೆ ತೀವ್ರವಾಗಿ ಯೋಚಿಸಿ, ಹೊಸ ನೋಟಗಳನ್ನು ನೀಡಬಲ್ಲ ಸೃಜನಶೀಲ ಪ್ರತಿಭೆ ಅವರದ್ದು. ಹಾಗಾಗಿಯೇ ಸಹಜ ಕುತೂಹಲವನ್ನು ಬೆಳೆಸಿಕೊಂಡಿರುವ ಜ್ಞಾನ ಪಿಪಾಸುಗಳಿಗೆ ತೋಳ್ಪಾಡಿಯವರ ಸಂಪರ್ಕ ಹಿತವನ್ನುಂಟುಮಾಡಿದರೆ, ಪ್ರಚಾರ ಪ್ರಸಿದ್ಧಿ, ಸ್ಥಾನ-ಮಾನ ಬಯಸುವವರು ಅವರ ಹತ್ತಿರ ಸುಳಿಯುವುದಿಲ್ಲ.
ಕನ್ನಡದಲ್ಲಿ ಕುರ್ತಕೋಟಿ, ಕಿ.ರಂ. ನಾಗರಾಜ ಮುಂತಾದವರನ್ನೊಳಗೊಂಡ ಮೌಖಿಕ ವಿದ್ವಾಂಸ ಪರಂಪರೆಯೊಂದನ್ನು ಗುರುತಿಸುವುದಿದೆ. ಇವರು ಬರೆದದ್ದು ಕಡಮೆ. ಆದರೆ ಉಪನ್ಯಾಸಕ್ಕೆ ನಿಂತರೆ, ಅವರ ಮೂಲಕ ಹರಿದು ಬರುವ ಜ್ಞಾನಪ್ರವಾಹವು ಎಂಥವರನ್ನೂ ವಿಸ್ಮಯಗೊಳಿಸುತ್ತದೆ. ತೋಳ್ಪಾಡಿಯವರನ್ನು ಇವರ ಸಾಲಿಗೆ ಸೇರಿಸಬಹುದು. ಅವರ ಉಪನ್ಯಾಸಗಳೆಂದರೆ ಮೊದಲೇ ಸಿದ್ಧಪಡಿಸಿಕೊಂಡ ಟಿಪ್ಪಣಿಗಳ ಮಂಡನೆಗಳಲ್ಲ. ಸಭೆಯನ್ನು ಮೆಚ್ಚಿಸುವ ಚಾಮತ್ಕಾರಿಕ ಮಾತುಗಳೂ ಅಲ್ಲ. ಅವು ಆ ಸಂದರ್ಭಗಳಲ್ಲೇ ಹೊಳೆದು ಹೊರಬರುವಂತಹದ್ದು. ಅದಕ್ಕೆ ಯಾವುದೋ ಒಂದು ಪದವೋ ಸಾಲೋ ನೆಪವಾಗಿ ಒದಗಿ ಬರುತ್ತದೆ ಅಷ್ಟೆ. ಕೆಲವೊಮ್ಮೆ ತಮಗಿಂತ ಹಿಂದೆ ಮಾತನಾಡಿದವರ ಮಾತಿನ ಒಂದು ಪದಪ್ರಯೋಗವೂ ಸಾಕಾಗುತ್ತದೆ! ತೋಳ್ಪಾಡಿಯವರ ಉಪನ್ಯಾಸವನ್ನು ಕೇಳುವ ಯಾರೇ ಆಗಲಿ, ಮೊದಲು ಗಮನಿಸುವುದು ಈ ವಿಸ್ಮಯವನ್ನೇ! ಹಾಗಾಗಿಯೇ `ತೋಳ್ಪಾಡಿ ಒಂದು ಅದ್ಭುತ!’ವೆಂದೋ `ವಿದ್ವಲ್ಲೋಕದ ವಿಸ್ಮಯ’ವೆಂದೋ ಅವರ ಬಗ್ಗೆ ಮೆಚ್ಚುನುಡಿಗಳನ್ನು ಜನ ಆಡುವುದಿದೆ. ಆದರೆ, ತನ್ನ ನೆನಪಿನ ಶಕ್ತಿಯ ಬಗೆಗೋ, ಮಾತಿನ ಆಶು ಸಾಮರ್ಥ್ಯದ ಬಗೆಗೋ ಅವರಲ್ಲಿ ಕುತೂಹಲದಿಂದ ವಿಚಾರಿಸಿದರೆ, `ಅದರಲ್ಲೇನಿದೆ ವಿಶೇಷ?’ ಎಂದು ಹೀಗೆ ಪ್ರತಿಕ್ರಿಯಿಸುತ್ತಾರೆ: “ಏನಿಲ್ಲಾ… ಯಾರೂ ಹಾಗೆ ಮಾತಾಡಬಹುದು……ಅಧ್ಯಯನ ಮಾಡಬೇಕು; ನಂತರ ಅದನ್ನು ಮರೀಬೇಕು…… ಪೂರ್ವಗ್ರಹೀತಗಳನ್ನು ಬಿಟ್ಟು ಹೇಗಿದೆಯೋ ಹಾಗೆ ನೋಡ್ಬೇಕು…… ಮಾತಾಡುವಾಗ ಫ್ರೀ ಆಗಿ ಇರಬೇಕು. ಅಷ್ಟೇ…. ಅರ್ಥ ಆಗುವುದು ಅಂದ್ರೆ ಬೇರೇನಿಲ್ಲ…ಎಲ್ಲಾ ಒಂದು ಸಂಬಂಧ ಗೊತ್ತಾಗುವುದು….ಹೇಳುವವ ಏನು ಹೇಳಲು ಪ್ರಯತ್ನ ಮಾಡ್ತಿದ್ದಾನೆ… ಅವನ ಮನಸ್ಸು ಏನು ಅಂತ ಗೊತ್ತಾಗುವುದು, ಬೇರೇನಿಲ್ಲ.”
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಎಂಬುದು ಲಕ್ಷ್ಮೀಶ ತೋಳ್ಪಾಡಿಯವರ ಹುಟ್ಟೂರು. ಹೆಸರಿಗೆ ಅನ್ವರ್ಥ ಎಂಬಂತೆ ಪೇಟೆಯ ಸದ್ದುಗದ್ದಲಗಳಿಲ್ಲದ ಪ್ರಶಾಂತವಾದ ಪರಿಸರವದು. ಅವರ ಅಧ್ಯಯನಶೀಲತೆಗೆ ಈ ಪರಿಸರದ ಕೊಡುಗೆಯೂ ದೊಡ್ಡದಿದೆ. ಶಾಂತಿಗೋಡಿನ ಕೃಷಿಕ ಕುಟುಂಬವೊಂದರಲ್ಲಿ ಲಕ್ಷ್ಮೀಶರ ಜನನ. ಮಾಧ್ವ ಶಿವಳ್ಳಿ ಸಂಪ್ರದಾಯದ ವೈದಿಕ ಹಿನ್ನೆಲೆಯು ಸಹಜವಾಗಿಯೇ ಉಡುಪಿ ಮಠದೆಡೆಗೆ ಸಂಸ್ಕೃತ ವಿದ್ಯಾಭ್ಯಾಸ, ವೇದಾಧ್ಯಯನಕ್ಕೆ ಒಯ್ದಿತು. ಉಡುಪಿ, ಪುತ್ತೂರುಗಳಲ್ಲಿ ಶಾಲಾ ಶಿಕ್ಷಣವೂ ಮಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸವೂ ನಡೆಯಿತು. ಸ್ವತಂತ್ರವಾಗಿ ಚಿಂತಿಸುವ ಮನಸ್ಸೊಂದು ತೋಳ್ಪಾಡಿಯವರಲ್ಲಿ ಸ್ಥಾಯಿಯಾಗಿ ಇದ್ದುದರಿಂದಲೋ ಏನೋ, ಮಠದ ಪರಿಸರವನ್ನು ಮೀರಿ ಸ್ವತಂತ್ರವಾಗುವುದಕ್ಕೂ, ಮಾಧ್ವ ತತ್ವವನ್ನು ಒಪ್ಪಿಕೊಂಡೇ ಅದರಾಚೆಗೂ ಇರುವ ಜ್ಞಾನವಿಸ್ತಾರಗಳನ್ನು ಅರಿಯುವುದಕ್ಕೂ ಸಾಧ್ಯವಾಯಿತು. ಇಂದೂ ಕೂಡ ಅವರನ್ನು ಯಾವುದೇ ಪ್ರಾಚೀನ ಅಥವಾ ಆಧುನಿಕ ಸಿದ್ಧಾಂತಗಳ ಜತೆಗೆ ತಳುಕುಹಾಕಿಕೊಂಡು ನೋಡುವುದಕ್ಕೆ ಸಾಧ್ಯವಾಗದು. ಎಲ್ಲ ತತ್ವಗಳ ತಲಸ್ಪರ್ಶಿಯಾದ ಅಧ್ಯಯನವು ಅವರಿಗಿದ್ದರೂ ಯಾವುದಾದರೂ ಸಿದ್ಧಾಂತವೊಂದರ ವಕ್ತಾರರಾಗಲು ಅವರ ಮನಸ್ಸೊಪ್ಪದು. ಎಲ್ಲಿ ಸತ್ಯವಿದೆಯೋ, ಎಲ್ಲಿ ಹೊಸ ನೋಟಗಳಿವೆಯೋ ಅಲ್ಲಿ ತೋಳ್ಪಾಡಿಯವರ ಮನಸ್ಸು ಇರುತ್ತದೆ.
ಮಠ-ಮಡಿಗಳ ಸಂಪ್ರದಾಯದ ಪರಿಸರದಿಂದ ಹೊರ ಬಂದ ಯುವಕ ತೋಳ್ಪಾಡಿ ಕೆಲಕಾಲ ಬೆಂಗಳೂರಿನಲ್ಲಿ ವೈ. ಎನ್. ಕೆ, ಲಂಕೇಶ, ಕಿ.ರಂ. ಬಳಗದಲ್ಲಿದ್ದರು. ಆದರೆ ಹೆಚ್ಚು ಕಾಲ ಅಲ್ಲಿರಲಿಲ್ಲ. ಕ್ರಾಂತಿಯ ಹುಚ್ಚುಮನಸ್ಸಿನೊಳಗೇ ಅರಿವಿನ ಉತ್ಕಾಂತಿಯೊಂದು ರೂಪು ಪಡೆಯುತ್ತಾ ಹೋದ ಪರಿಣಾಮವಾಗಿ ಮತ್ತೆ ಮಣ್ಣಿನ ಕಡೆಗೆ ತಿರುಗಿದ ಅವರು ಕೃಷಿ ಬದುಕಿನಲ್ಲೇ ಸತ್ಯಾನ್ವೇಷಣೆಯ ದಾರಿ ಹುಡುಕಿದರು. ಕಿಸಾನ್ ಸಂಘದಂತಹ ಸಂಘಟನೆಗಳ ಮೂಲಕ ರೈತರ ಧ್ವನಿಯಾದರು. ಪರಿಸರ ಹೋರಾಟಗಳಲ್ಲಿ ಭಾಗವಹಿಸಿದರು. ಅನ್ಯಾಯದ ವಿರುದ್ಧ ಕಟುವಾಗಿ ಮಾತನಾಡುವ ತೋಳ್ಪಾಡಿಯವರ ಧ್ವನಿಗೆ ತುರ್ತುಪರಿಸ್ಥಿತಿಯನ್ನು ಬಹಿರಂಗವಾಗಿ ವಿರೋಧಿಸಿ, ಶಿಕ್ಷೆ ಎದುರಿಸುವಷ್ಟು ಶಕ್ತಿಯಿತ್ತು!
ಈ ಮಧ್ಯೆ ಸತ್ಯಕಾಮರ ಸಂಪರ್ಕಕ್ಕೆ ಬಂದು ಅನುಭಾವಿಗಳ ಸತ್ಯದ ಹುಡುಕಾಟವನ್ನೂ ಗಂಭೀರವಾಗಿ ಚಿಂತಿಸುವ ಹಾಗಾಯಿತು. ಸತ್ಯಕಾಮರು ಶಾಂತಿಗೋಡಿಗೆ ಬರುವುದೂ ತೋಳ್ಪಾಡಿ ಕಲ್ಲಳ್ಳಿಗೆ ಹೋಗುವುದೂ ನಡೆಯಿತು. ಸತ್ಯಕಾಮರ `ತಾಂತ್ರಿಕ’ ನಿಷ್ಠೆಯನ್ನೂ ಹುಡುಕಾಟದ ಬಗೆಯನ್ನೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಸೌಂದರ್ಯಲಹರಿಯನ್ನು ತೀವ್ರವಾಗಿ ಅಧ್ಯಯನ ಮಾಡಿರುವ ತೋಳ್ಪಾಡಿಯವರಿಗೆ ಹಿನ್ನೆಲೆಯಲ್ಲಿ ಸತ್ಯಕಾಮರ ಸಂಪರ್ಕ ಪ್ರೇರಣೆಯಾಗಿದ್ದಿರಬಹುದು. ಆದರೆ ಸತ್ಯಕಾಮರದ್ದು ಉಪಾಸನಾ ಮಾರ್ಗವಾದರೆ ತೋಳ್ಪಾಡಿಯವರದ್ದು ಶೋಧನಾಮಾರ್ಗ!
`ಪುತ್ತೂರಿನ ಅಜ್ಜ’ ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ `ಅಜ್ಜ’ನವರ ಸಂಪರ್ಕವು ತೋಳ್ಪಾಡಿಯವರ ಬದುಕಿನ ಬಹುಮುಖ್ಯ ಘಟ್ಟಗಳಲ್ಲೊಂದು. ಈಗಲೂ ಅಜ್ಜನವರನ್ನು `ಗುರುಗಳು’ ಎಂದೇ ಗೌರವಿಸುತ್ತಾರೆ. ಮೂಲತ: ನೆಟ್ಟಾರು ರಾಮಚಂದ್ರ ಭಟ್ಟರಾಗಿದ್ದವರ ದೇಹದೊಳಗೆ ಮತ್ತೊಂದು ಜೀವಚೈತನ್ಯವು ಪ್ರವೇಶವಾಗಿ, ಹೊಸ ಕಾಣ್ಕೆಗಳೊಂದಿಗೆ ಮರುಹುಟ್ಟು ಪಡೆದ ಹಿನ್ನೆಲೆಯಿರುವ ಅಜ್ಜನವರ ಪರಿಚಯ ತೋಳ್ಪಾಡಿಯವರಿಗೆ ಅರುವತ್ತರ ದಶಕದಲ್ಲಿ ಆಯಿತು. ಪರಿಸರದವರೆಲ್ಲರೂ ರಾಮಚಂದ್ರ ಭಟ್ಟರ ವರ್ತನೆಯನ್ನು `ಹುಚ್ಚು’ ಎಂದೇ ಪರಿಗಣಿಸಿದ್ದರು. ಕೇವಲ ಅನುಭವಗೋಚರ ಮಾತ್ರವಾಗಿರುವ ಈ ಜೀವಪಲ್ಲಟದ ಬಗ್ಗೆ ಅರಿವಿದ್ದ ತೋಳ್ಪಾಡಿಯವರು ಅಜ್ಜನವರಿಗೆ ಸಾಥಿಯಾದದ್ದು ಮಾತ್ರವಲ್ಲ; ಅವರ ಯೋಚನೆಗಳಿಗೆ ಮಾತಾದರು. ತೀರಾ ಸಹಜ ಬದುಕನ್ನು ಬದುಕಿ, ಸಹಜವಾದ ಅನುಭವದ ನುಡಿಗಳನ್ನು ಆಡುತ್ತಿದ್ದ ಅಜ್ಜನವರ ಮಾತಿನಲ್ಲಿ ಉಪನಿಷತ್ ವಾಕ್ಯಗಳನ್ನೇ ತೋಳ್ಪಾಡಿ ಕಂಡರು. ತೋಳ್ಪಾಡಿಯವರಂತಹ ಸಹಜ ಜಿಜ್ಞಾಸುಗಳಿದ್ದುದರಿಂದಲೇ ಅಜ್ಜನವರೂ ಪೂರ್ತಿಯಾಗಿ ತೆರೆದುಕೊಳ್ಳುವುದು ಸಾಧ್ಯವಾಯಿತು. ಅಜ್ಜನವರ ಅಪೇಕ್ಷೆಯಂತೆ ಸತ್ಯಶೋಧನ ಟ್ರಸ್ಟ್ ಹುಟ್ಟುಹಾಕುವುದಕ್ಕೂ, ಕುಟೀರವೊಂದು ರೂಪುಗೊಳ್ಳುವುದಕ್ಕೂ ಅಜ್ಜನಿಗೆ ನೆರವಾದರು. ಅಜ್ಜನವರ ಆಲೋಚನೆಗಳೂ, ಸಂಭಾಷಣೆಗಳೂ, ಪ್ರಶ್ನೆ-ಉತ್ತರಗಳೂ ಒಳಗೊಂಡ ಅಪೂರ್ವವೆನ್ನಬಹುದಾದ ಕೃತಿ `ಅದು ಅದುವೇ’ (ಎರಡು ಸಂಪುಟಗಳಲ್ಲಿ) ಪ್ರಕಟಗೊಳ್ಳುವುದರ ಹಿಂದೆಯೂ ಅವರಿದ್ದರು.
ಸಂಸ್ಕೃತ ಅಧ್ಯಯನದ ಹಿನ್ನೆಲೆ ಗಟ್ಟಿಯಾಗಿಯೇ ಇರುವ ತೋಳ್ಪಾಡಿಯವರು ಆರ್ಷೇಯ ಗ್ರಂಥಗಳನ್ನು ಅದರ ಮೂಲದಲ್ಲಿಯೇ ಓದಿ ಅನುಭವಿಸುವಷ್ಟು ತಜ್ಞತೆ ಉಳ್ಳವರು. ಪ್ರಸ್ಥಾನತ್ರಯೀ ಯಿಂದ ಮೊದಲ್ಗೊಂಡು ಪುರಾಣಗಳು, ರಾಮಾಯಣ-ಮಹಾಭಾರತಗಳು, ಶಾಂಕರ-ಮಾಧ್ವ-ಬೌದ್ಧ ಸೈದ್ಧಾಂತಿಕ ಗ್ರಂಥಗಳು, ಸೌಂದರ್ಯಲಹರಿ-ಯೋಗವಾಸಿಷ್ಠಗಳಂತಹ ತಾತ್ವಿಕ ಕಾವ್ಯಗಳು, ಪಂಪ-ವಚನಸಾಹಿತ್ಯ – ಕುಮಾರವ್ಯಾಸ ; ಬೇಂದ್ರೆ-ಕುವೆಂಪು-ಅಡಿಗರ ವರೆಗಿನ ಅವರ ಆಳವಾದ ಓದು ಅಧ್ಯಯನಗಳು ಅವರ ವ್ಯಕ್ತಿತ್ವಕ್ಕೆ ಒಂದು ವಿಶೇಷ ಹಿರಿಮೆಯನ್ನು ನೀಡಿದೆ.
ಕಳೆದ ಶತಮಾನದ ಎಂಬತ್ತರ ದಶಕದ ಆರಂಭದಲ್ಲಿ ಪುತ್ತೂರಿನ ಮಿತ್ರರ ಒತ್ತಾಯಕ್ಕೆ ಕಟ್ಟುಬಿದ್ದು ಭಗವದ್ಗೀತೆಯ ಕುರಿತಾಗಿ ಉಪನ್ಯಾಸ ಸರಣಿಯೊಂದನ್ನು ನಡೆಸಿಕೊಟ್ಟರು. ಅದೊಂದು ಸಾಂಪ್ರದಾಯಿಕ ಪ್ರವಚನ ರೂಪದ್ದಾಗಿರಲಿಲ್ಲ. ಅದನ್ನು ಹುಡುಕಾಟದ ದಾರಿ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಉಪನ್ಯಾಸಗಳೇ ಬಳಿಕ `ಮಹಾಯುದ್ಧಕ್ಕೆ ಮುನ್ನ’ (1980) ಎಂಬ ಹೆಸರಿನಲ್ಲಿ ಪುಟ್ಟ ಪುಸ್ತಕವಾಗಿ ಪ್ರಕಟವಾಯಿತು. (ಇತ್ತೀಚೆಗೆ ಅದು ಮರುಮುದ್ರಣಗೊಂಡಿದೆ).
ಗೀತೆಯನ್ನು ಒಂದು ತಾತ್ವಿಕ ಗ್ರಂಥವಾಗಿಯೋ ಶಾಸ್ತ್ರವಾಗಿಯೋ ನೋಡದೆ, ವ್ಯಕ್ತಿಯ ಅನುಭವವೇ ಶಾಸ್ತ್ರಕ್ಕಿಂತ ಮುಖ್ಯ ಎನ್ನುವ ತಿಳುವಳಿಕೆಯಲ್ಲಿ, ಅರ್ಜುನನ ಅನುಭವವಾಗಿ – ಆ ಮೂಲಕ ಅವು ಹೇಗೆ ನಮ್ಮ ಅನುಭವವೂ ಆಗುತ್ತದೆ ಎನ್ನುವ ನೆಲೆಯಿಂದ – ಗೀತೆಯನ್ನು ವಿಶ್ಲೇಷಿಸಿದ ಅಪೂರ್ವ ಕೃತಿಯಿದು. ಇದಕ್ಕಾಗಿ ಮನ:ಶಾಸ್ತ್ರ ಸಮಾಜಶಾಸ್ತ್ರದಂತಹ ಸಿದ್ಧಾಂತಗಳ ನೆಲೆಗಳನ್ನೂ ವಿಜ್ಞಾನದ ಈಚಿನ ಸಂಶೋಧನೆಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಆದರೆ ಯಾವುದೇ ಸಿದ್ಧಾಂತದ ಸಮರ್ಥನೆಗಾಗಿಯೋ ಅನುಭಾವೀ ಪಂಥದ ವಕ್ತಾರನ ಧಾಟಿಯಲ್ಲೋ ಇದನ್ನು ಬರೆದಿಲ್ಲ. ಗೀತೆಯ ಬಗೆಗೆ ಹೊಸತಾಗಿ ಯೋಚಿಸಬೇಕು ಎಂಬ ತುಡಿತವೇ ಇಲ್ಲಿ ಸ್ಥಾಯಿಯಾಗಿದೆ. ಈ ಕೃತಿಗೆ ಪ್ರತಿಕ್ರಿಯಿಸಿದ ಖ್ಯಾತನಾಮರೂ ಇಲ್ಲಿನ ಹೊಸಬಗೆಯ ಶೋಧನೆಗಾಗಿ ತೋಳ್ಪಾಡಿಯವರನ್ನು ಪ್ರಶಂಸಿಸಿದ್ದರು. ಈ ಕೃತಿ ಪ್ರಕಟವಾಗಿ ಮೂವತೈದು ವರ್ಷಗಳೇ ಕಳೆಯಿತು. ಈ ಅವಧಿಯಲ್ಲಿ ತೋಳ್ಪಾಡಿಯವರ ಚಿಂತನಾಕ್ರಮ, ಓದಿನ ವ್ಯಾಪ್ತಿಗಳು ಇನ್ನಷ್ಟು ವಿಸ್ತಾರಗೊಂಡಿರುವುದು ಸಹಜ. ಇದಾದ ನಂತರ ಹಲವು ಗೀತಾ ಪ್ರವಚನಗಳನ್ನು ಅವರು ನಡೆಸಿದ್ದಿದೆ. ಅಲ್ಲೆಲ್ಲ ಇನ್ನಷ್ಟು ಹೊಸ ಒಳನೋಟಗಳು ಮೂಡಿಬಂದದ್ದಿವೆ. ಆದರೆ ಸೃರ್ಜನಶೀಲ ಪ್ರತಿಭೆ ಮತ್ತು ಪ್ರಖರ ಯೋಚನಾಕ್ರಮವೊಂದು ಅವರಲ್ಲಿ ಹೇಗೆ ಅಂದೇ ಬೆಳೆದಿತ್ತು ಎನ್ನುವುದಕ್ಕೆ ಅವರ ಈ ಮೊದಲ ಕೃತಿಯೇ ಸಾಕ್ಷಿ.
ಹೀಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಗಳಲ್ಲಿ ತೋಳ್ಪಾಡಿಯವರು ಭಗವದ್ಗೀತೆಯ ಬಗೆಗೂ ಉಪನಿಷತ್ತುಗಳ ಬಗೆಗೂ ಆಗಾಗ ನಡೆಸಿಕೊಡುತ್ತಿದ್ದ ಪ್ರವಚನ ಮಾಲಿಕೆಗಳು ನಿಧಾನಕ್ಕೆ ಜನಪ್ರಿಯಗೊಳ್ಳತೊಡಗಿದವು. ಕೆಲವೊಮ್ಮೆ ಅವರ ಸಭೆಯಲ್ಲಿರುತ್ತಿದ್ದುದು ಸೀಮಿತ ಸಂಖ್ಯೆ. ಅದರಲ್ಲೂ ಒಂದು ಭಾಗ ಪ್ರವಚನದ ಪುಣ್ಯಪ್ರಾಪ್ತಿಯ ಆಸೆಯಿಂದ ಬಂದವರಂತಿರುತ್ತಿತ್ತು. ಆದರೆ ಅಲ್ಲೆಲ್ಲೋ ತನ್ನ ಯೋಚನೆಗಳಿಗೆ ಸ್ಪಂದಿಸುವ ನಾಲ್ಕಾರು ಮನಸ್ಸುಗಳಿವೆ ಎನ್ನುವುದನ್ನು ಅರಿತುಕೊಳ್ಳುವ ಅವರು ಅಂತಹ ಪ್ರವಚನಮಾಲಿಕೆಗಳಲ್ಲಿ ಜ್ಞಾನಸಂದೇಶವನ್ನು ಎಳೆ ಎಳೆಯಾಗಿ ತೆರೆದಿಡುತ್ತಲೇ ಹೋದರು. ಸೂಕ್ಷ್ಮ ಒಳನೋಟ, ಮರುನೋಟ, ಹೊಸನೋಟಗಳಿಂದ ಅವು ನಿತ್ಯನೂತನವಾಗಿರುತ್ತಿತ್ತು. ಅಭಿಮಾನಪೂರ್ವಕವಾಗಿ ಉಲ್ಲೇಖಿಸಬೇಕಾದ ಸಂಗತಿಯೆಂದರೆ ಪ್ರವಚನದಿಂದ ಪ್ರವಚನಕ್ಕೆ ತೋಳ್ಪಾಡಿಯವರ ಅನ್ವೇಷಿಕಾ ವ್ಯಕ್ತಿತ್ವ ಬೆಳೆಯುತ್ತಾ ಹೋಯಿತು. ಪುತ್ತೂರಿನ ಈ ಜ್ಞಾನಪುಷ್ಪದ ಕಂಪು ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಬಹುಬೇಗನೆ ಹರಡಿತು.
ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ಟರು ತಮ್ಮ ಮನೆಯ ಅಟ್ಟದಲ್ಲಿ ಪುಟ್ಟ ಸಭಾಭವನವೊಂದನ್ನು ನಿರ್ಮಿಸಿ, ತೋಳ್ಪಾಡಿಯವರಿಂದ ಸೌಂದರ್ಯಲಹರಿಯ ಕುರಿತಾಗಿ ಸಾಪ್ತಾಹಿಕ ಪ್ರವಚನ ಸರಣಿಯೊಂದನ್ನು ಪ್ರಾರಂಭಿಸಿದರು. ಇದು ಸುಮಾರು ಹನ್ನೆರಡು ವರ್ಷಗಳ ಹಿಂದಿನ ಸಂಗತಿ. ಎರಡು ವರ್ಷಗಳ ಕಾಲ ನಡೆದ ಈ ಪ್ರವಚನಮಾಲೆಯು ತೋಳ್ಪಾಡಿಯವರ ಅದುವರೆಗಿನ ಪ್ರವಚನ ಸರಣಿಗಳಲ್ಲೇ ಅತ್ಯುತ್ಕೃಷ್ಟವಾದುದು ಎನ್ನುವ ಹಿರಿಮೆಯನ್ನು ಪಡೆಯಿತು. ಆ ಕ್ಷಣದ intuitionನಿಂದ ಮಾತನಾಡುವ ತೋಳ್ಪಾಡಿಯವರ ಮಾತುಗಳು ಕಳೆದು ಹೋಗಬಾರದು ಎಂದು ಪುರಂದರ ಭಟ್ಟರು ಅಷ್ಟೂ ಪ್ರವಚನಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡರು. ಸ್ನೇಹಿತರಾದ ಮೂರ್ತಿ ದೇರಾಜೆಯವರೂ ಅದಕ್ಕೆ ಸಹಕರಿಸಿದರು. ಪ್ರವಚನ ಸರಣಿ ಮುಗಿದ ಬಳಿಕ ಅದೆಲ್ಲವನ್ನೂ ತೋಳ್ಪಾಡಿಯವರಿಗೆ ಮರು ಒಪ್ಪಿಸಿ ಅವರಿಂದ ಅದನ್ನು ಬರೆಸಿ ದಾಖಲಿಸುವುದು ಅವರ ಉದ್ದೇಶವಾಗಿತ್ತು. ಈ ಪ್ರೀತಿಗೆ ಬಾಗಿದ ಲಕ್ಷೀಶರು ಹಂತ ಹಂತವಾಗಿ ಸೌಂದರ್ಯ ಲಹರಿಯ ಕವಿತೆಗಳಿಗೆ ವ್ಯಾಖ್ಯಾನ ರೂಪದ ಬರಹವನ್ನು ಬರೆಯಲು ಪ್ರಾರಂಭಿಸಿದರು. ಅದು ಕೇವಲ ಟೀಕುವೋ ವ್ಯಾಖ್ಯಾನವೋ ಆಗಿರಲಿಲ್ಲ. ಅದು ಸೌಂದರ್ಯ ಲಹರಿಗೆ ತೋರಿದ ಬಹುಶಿಸ್ತಿನ ಸ್ಪಂದನವಾಗಿತ್ತು. ಮಂಗಳೂರಿನ ಮಾಸಪತ್ರಿಕೆಯೊಂದು ಅದನ್ನು ಕಂತು ಕಂತುಗಳಾಗಿ ಪ್ರಕಟಿಸಿತು. ಕೆಂಡಸಂಪಿಗೆ ಎಂಬ ಅಂತರ್‌ಜಾಲ ಪತ್ರಿಕೆಯಲ್ಲೂ ಅದು ಪ್ರಕಟವಾಗತೊಡಗಿತು. ನಾಡಿನೆಲ್ಲೆಡೆಗಳಿಂದ ಅದಕ್ಕೆ ಬಗೆ ಬಗೆಯ ಪ್ರತಿಸ್ಪಂದನಗಳು ಬರಲಾರಂಭಿಸಿದುವು. ಮುಂದೆ ಅದು `ಆನಂದಲಹರೀ – ಸ್ಪಂದಸಮಯ’ ಎಂಬುದಾಗಿ ಕೃತಿರೂಪದಲ್ಲಿ ಪ್ರಕಟವಾಗಿ (2015) ಸಹೃದಯ ಜಿಜ್ಞಾಸುಗಳನ್ನು ತಲಪಿತು.
ಸೌಂದರ್ಯ ಲಹರಿಯ ಉಪಾಸನಾ ಮಾರ್ಗದ ಟೀಕು-ಪ್ರವಚನಗಳಿಗಿಂತ ಭಿನ್ನವಾಗಿ, ಈ ಕೃತಿಯ ಮೂಲಕ ಸಂವೇದನಾಶೀಲರನ್ನು ತತ್ವಜ್ಞಾನದ ಕಡೆಗೆ ಒಯ್ಯುವುದೇ ಅವರ ಉದ್ದೇಶವಾಗಿತ್ತು. ಸೌಂದರ್ಯಲಹರಿಯ ಕರ್ತೃವಿನ ಕುರಿತಾದ ಚರ್ಚೆಗೆ ಲಕ್ಷ್ಮೀಶರು ಉತ್ತರಿಸುವ, `ಲಹರಿಯ ಅನುಭವಕ್ಕೆ ಹೆಸರಿನ ಹಂಗೇಕೆ?’ ಎಂಬ ಸಾಲೇ ಅವರ ಮನೋಧರ್ಮವನ್ನು ಸೂಚಿಸುತ್ತದೆ. ಈ ಕೃತಿಗೆ ಸೊಗಸಾದ ಮುನ್ನುಡಿ ಬರೆದಿರುವ ಕೆ.ವಿ.ಅಕ್ಷರ ಅವರು ‘ಲಕ್ಷೀಶರು ಕನ್ನಡದ ಮಹತ್ವದ ಅನ್ವೇಷಕೀ ಉಪಾಸಕರು’ ಎಂದಿರುವುದು ತೋಳ್ಪಾಡಿಯವರ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುತ್ತದೆ.
ಕರಾವಳಿಯಲ್ಲಿ ಯಕ್ಷಗಾನ ತಾಳಮದ್ದಳೆ ಎಂಬ ಅಪೂರ್ವ ಕಲಾಪ್ರಕಾರವಿರುವುದು ತಿಳಿದಿದೆಯಷ್ಟೆ? ವಿದ್ವತ್ತು ಮತ್ತು ವಾಕ್ಪಟುತ್ವಗಳು ಅಲ್ಲಿ ಕಲೆಯ ಚೌಕಟ್ಟಿನೊಳಗೆ ಪ್ರದರ್ಶನಗೊಳ್ಳುತ್ತವೆ. ಲಕ್ಷ್ಮೀಶರು ಉತ್ತಮ ಯಕ್ಷಗಾನ ಅರ್ಥಧಾರಿಯಾಗಿ ಖ್ಯಾತಿ ಪಡೆದವರಾಗಿದ್ದರು. ಹಿರಿಯ ಕಲಾವಿದರುಗಳಾಗಿದ್ದ ದೇರಾಜೆ ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್ಟ ಮುಂತಾದವರ ಅಚ್ಚುಮೆಚ್ಚಿನವರಾಗಿದ್ದರು. ತಾಳಮದ್ದಳೆಯಲ್ಲೂ ಹೊಸತನವನ್ನು ತರಲು ಪ್ರಯತ್ನಪಟ್ಟವರಾಗಿದ್ದರು. ಆದರೆ, ಯಾವಾಗ ಅಲ್ಲಿ ಕಲೆಗಿಂತ ಕಲಾವಿದನೇ ಮುಖ್ಯವಾಗುವ, ಪ್ರಚಾರ – ಚಮತ್ಕಾರಗಳು ವಿಜೃಂಭಿಸಲಾರಂಭಿಸಿತೋ, ಅಲ್ಲಿ ಹೊಸದೇನೂ ಕಾಣಿಸದಾಯಿತೋ, ಇದು ತನ್ನ ದಾರಿ ಅಲ್ಲವೆಂದೇ ನಿರ್ಧಾರ ಮಾಡಿ ಹಿಂದಡಿಯಿಟ್ಟರು. ಹಾಗೆಂದು ಯಕ್ಷಗಾನದಿಂದ ವಿಮುಖರೇನೂ ಆಗಲಿಲ್ಲ. ಈ ಅನುಭವದ ಹಿನ್ನೆಲೆಯಲ್ಲೇ ಅವರ ಕಿರುಹೊತ್ತಗೆ ಭವತಲ್ಲಣ (2013) ಪ್ರಕಟವಾಯಿತು.
ಸೌಂದರ್ಯಲಹರಿಯ ಉಪನ್ಯಾಸಮಾಲೆ ಮುಗಿಯುತ್ತಲೇ ಪುರಂದರ ಭಟ್ಟರು ಭಾಗವತ ಪ್ರವಚನಕ್ಕೆ ವೇದಿಕೆ ಸಿದ್ಧಗೊಳಿಸಿದ್ದರು. ತೋಳ್ಪಾಡಿಯವರ ಭಾಗವತ ಪ್ರವಚನವೂ ಅಲ್ಲೇ ಆರಂಭವಾಯಿತು. ಭಾಗವತ ಒಂದು ಪುರಾಣ. ಅದಕ್ಕೆ ವ್ಯಾಖ್ಯಾನಕ್ಕಿಂತ ಅದರೊಂದಿಗೆ ಅನುಸಂಧಾನ ಮಾಡುವುದೇ ಸರಿಯಾದ ಕ್ರಮ. ಅಲ್ಲಿ ಭಕ್ತಿ ಇದೆ. ಶರಣಾಗತಿ ಇದೆ. ಸೃಜನಶೀಲತೆಯ ಅತ್ಯುಚ್ಛ ಕ್ಷಣಗಳಿವೆ. ಇವುಗಳನ್ನು ಆಪ್ತಭಾವದಿಂದ ಹಿಡಿದಿಟ್ಟು ತೋರಿಸುವ ಕೆಲಸವನ್ನು ತೋಳ್ಪಾಡಿ ಆ ಪ್ರವಚನಗಳಲ್ಲಿ ಮಾಡುತ್ತಿದ್ದರು. ಅತ್ಯುತ್ಕೃಷ್ಟ ಕ್ಷಣಗಳನ್ನು ನಾನು ಅನುಭವಿಸುತ್ತಿದ್ದೇನೆ, ನೀವೂ ನನ್ನ ಜತೆ ಬನ್ನಿ ಎಂಬಂತಿತ್ತು ಅವರ ಭಾವ. ಈ ಉಪನ್ಯಾಸಗಳನ್ನೂ ಮುಂದೆ ಅವರು ಬರವಣಿಗೆಗೆ ಇಳಿಸಿದರು. ಅವುಗಳನ್ನು ಪಡೆದುಕೊಂಡ ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರು ಅಂತರ್ ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದರು. ಮುಂದೆ ಅವರ ನೇತೃತ್ವದಲ್ಲೇ ಸಂಪಿಗೆ ಭಾಗವತ(2011) ಎಂಬುದಾಗಿ ಅದು ಪ್ರಕಟವಾಯಿತು. ಭಾಗವತವನ್ನು ತೋಳ್ಪಾಡಿಯವರಿಂದ ಒತ್ತಾಯಿಸಿ ಬರೆಸಿದವರಲ್ಲಿ ಅವರ ಅಧ್ಯಯನ ಸಹಪಾಠಿ ವಿದ್ಯಾಭೂಷಣ ಅವರ ಪಾಲೂ ಇದೆ.
ಯು.ಆರ್. ಅನಂತಮೂರ್ತಿಯವರು ತಮ್ಮ ಬದುಕಿನ ಇಳಿಗಾಲದಲ್ಲಿ ಸಂಪಿಗೆ ಭಾಗವತವನ್ನು ಓದಿ ಬಹುವಾಗಿ ಮೆಚ್ಚಿಕೊಂಡು, ತೋಳ್ಪಾಡಿಯವರನ್ನು ಕರೆಸಿಕೊಂಡು “ಲಕ್ಷ್ಮೀಶ, ನೀನು ನನ್ನ ಅಂತರಂಗದ ಗೆಳೆಯ” ಎಂದು ಉದ್ಗರಿಸಿದ್ದನ್ನು ತೋಳ್ಪಾಡಿಯವರು ವಿನಯದಿಂದ ನೆನಪಿಸಿಕೊಳ್ಳುತ್ತಾರೆ.
ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸಗಳಷ್ಟೇ ಬರವಣಿಗೆಯನ್ನೂ ಇಷ್ಟಪಡುತ್ತಾರೆ, ಸತತವಾಗಿ ಬರೆಯಬಲ್ಲರು ಎಂದು ಗೊತ್ತಾದಾಗ ನಾಡಿನ ವಿವಿಧ ಪತ್ರಿಕೆಗಳು ಅವರಿಂದ ಆಗಾಗ ಲೇಖನಗಳನ್ನೂ ಅಂಕಣ ಬರಹಗಳನ್ನೂ ಅಪೇಕ್ಷಿಸಿ ಒತ್ತಾಯಿಸಲು ಆರಂಭಿಸಿದುವು. ಹಾಗೆ ಬರೆದ ಎರಡು ಅಂಕಣ ಬರಹಗಳು ಇತ್ತೀಚೆಗೆ ಸಂಕಲನ ರೂಪದಲ್ಲಿ ಪ್ರಕಟಗೊಂಡವು. ಅವುಗಳೇ ಭಾರತಯಾತ್ರೆ (2018) ಮತ್ತು ಮಾತಿಗೆ ಮುನ್ನ (2018). ಮಹಾಭಾರತದ ಶಾಂತಿಪರ್ವ ಎಂಥವರನ್ನೂ ಕರಗಿಸುವ ಗುಣವನ್ನು ಹೊಂದಿರುವಂತದ್ದು. ಈ ಭಾಗವನ್ನು ಗಂಭೀರವಾಗಿ ಯೋಚಿಸಿದ, ಅಧ್ಯಯನ ಮಾಡಿದ ಅವರು ಮಹಾಭಾರತವನ್ನು ಧರ್ಮರಾಯನ ಮೂಲಕ ನೋಡುವ ಹೊಸ ಮಾದರಿಯೊಂದನ್ನು ತೋರಿಸಿಕೊಟ್ಟರು. ಪಂಪ, ರನ್ನರಲ್ಲಿ ಅನುಕ್ರಮವಾಗಿ ಅರ್ಜುನ, ಭೀಮರು ನಾಯಕರಾಗಿ ಮುನ್ನೆಲೆಯಲ್ಲಿದ್ದರೆ, ಕುಮಾರವ್ಯಾಸನಿಗೆ ಕೃಷ್ಣನೇ ಪ್ರಧಾನ. ನಮ್ಮ ಕಾಲದ ಕನ್ನಡ ವಿಮರ್ಶೆಯು ದುರ್ಯೋಧನ, ಕರ್ಣ, ದ್ರೌಪದಿಯರ ಕಣ್ಣಿನಲ್ಲಿ ನೋಡುವ ಪ್ರಯತ್ನವನ್ನು ಮಾಡಿದ್ದಿದೆ. ಆದರೆ ಧರ್ಮರಾಯನ ದೃಷ್ಟಿ ಕನ್ನಡಕ್ಕೆ ಹೊಸತು. ‘ಶಾಂತಿಪರ್ವದ ಅಶಾಂತ ಸಂತ’ ಎಂಬ ಅವರ ಲೇಖನವೊಂದು ಅಪೂರ್ವ ಒಳನೋಟಗಳನ್ನು ಒಳಗೊಂಡಿರುವಂತದ್ದು. ಈ ಲೇಖನವೂ ಸೇರಿದ ಹಾಗೆ ಮಹಾಭಾರತದ ವಿವಿಧ ಪಾತ್ರಗಳ ಒಳಹೊಕ್ಕು ಸಾಂಪ್ರದಾಯಿಕ ದೃಷ್ಟಿಗಿಂತ ಭಿನ್ನವಾಗಿ ನೋಡುವ ದಾರಿಯನ್ನು ತೋರಿಸುವ ಲೇಖನಗಳ ಸಂಕಲನವೇ `ಮಹಾಭಾರತ ಅನುಸಂಧಾನದ ಭಾರತಯಾತ್ರೆ . ಇವು ಪ್ರಜಾವಾಣಿಯಲ್ಲಿ ಅಂಕಣ ಬರಹಗಳಾಗಿ ಬಂದವುಗಳು. ಶಾಂತಿಪರ್ವವನ್ನು ಕುರಿತ ತೋಳ್ಪಾಡಿಯವರ ಪ್ರವಚನವು ಈಗಲೂ ಪುತ್ತೂರಿನಲ್ಲಿ ನಡೆಯುತ್ತಿದೆ.
ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಯಾಗಿದ್ದ ಲಕ್ಷ್ಮೀಶರು ಅಡಿಗರ ಹಾಗೆಯೇ ಶಬ್ದಪ್ರೇಮಿ. ಯೋಗ್ಯವಾದ ಪದಗಳನ್ನು ಬಳಸುವುದು, ಪದಗಳು ಹೊಳೆಯಿಸುವ ವಿವಿಧ ಅರ್ಥಗಳನ್ನು ಅನ್ವೇಷಿಸುವುದು ಅವರಿಗೆ ಇಷ್ಟವಾದ ಸಂಗತಿ. ಅಡಿಗರ ಜನ್ಮಶತಮಾನೋತ್ಸವ ವರ್ಷದಲ್ಲಿ ಹಲವೆಡೆ ಅಡಿಗರನ್ನು ಕುರಿತು ಅವರ ಉಪನ್ಯಾಸಗಳನ್ನು ನೀಡಿದ್ದಿದೆ. ಅದನ್ನೇ ಸಂದರ್ಭವಾಗಿಸಿ ಉದಯವಾಣಿಯವರು ಅವರಿಂದ ಅಡಿಗರ ಕವನಗಳ ವಿಶ್ಲೇಷಣೆಯ ಬರಹಗಳನ್ನು ಬರೆದುಕೊಡುವಂತೆ ವಿನಂತಿಸಿದರು. ಹಾಗೆ ಹುಟ್ಟಿಕೊಂಡ ಲೇಖನಗಳ ಸಂಕಲನವೇ `ಮಾತಿಗೆ ಮುನ್ನ’ (2018). ಇಲ್ಲಿ ಅಡಿಗರ ಕವನಗಳು ಒಂದು ನೆಪ. ಅದರೊಂದಿಗೆ ಬೇಂದ್ರೆ, ಮಧುರಚೆನ್ನ ಮುಂತಾದ ನಮ್ಮ ಕಾಲದ ಪ್ರಮುಖ ಕವಿಗಳೆಲ್ಲ ಬಂದು ಹೋಗುತ್ತಾರೆ. ಇಡೀ ಸಂಕಲನವು ಕನ್ನಡ ಕಾವ್ಯಾಭ್ಯಾಸದ ಉತ್ಕೃಷ್ಟ ಕೃತಿಯಾಗಿ ರೂಪುಗೊಂಡಿದೆ.
ಲಕ್ಷ್ಮೀಶ ತೋಳ್ಪಾಡಿಯವರು ಅಮೇರಿಕಕ್ಕೆ ಹೋಗಿಬಂದದ್ದು ಅವರಿಗೆಷ್ಟು ಖುಷಿ ಕೊಟ್ಟಿತ್ತೋ ಅಷ್ಟೇ ಎಲ್ಲ ಕನ್ನಡಿಗರೂ ಸಂಭ್ರಮಿಸುವಂತಾಯಿತು. ಅಮೇರಿಕದ ವಿವಿಧ ಕನ್ನಡ ಸಂಘಗಳಿಂದ ಆಹ್ವಾನಿಸಲ್ಪಟ್ಟು ಅಮೇರಿಕಕ್ಕೆ ತೆರಳಿದ ಅವರು ಸುಮಾರು ಎರಡು ತಿಂಗಳ ಅವಧಿಯಲ್ಲಿ ಅಲ್ಲಿನ ವಿವಿಧ ನಗರಗಳಲ್ಲಿ ಹತ್ತಾರು ಉಪನ್ಯಾಸಗಳನ್ನು ನೀಡಿದರು. ಅಲ್ಲೂ ಭಕ್ತಿಯ ಸ್ವರೂಪದ ಚರ್ಚೆಯಿಂದ ತೊಡಗಿ ವಚನ, ಕೀರ್ತನೆಗಳನ್ನು ಹಾದು ಆಧುನಿಕ ಕನ್ನಡ ಸಾಹಿತ್ಯದ ವರೆಗೆ ಅದರ ಹರಹು ಇತ್ತು. ಅಲ್ಲಿನ ಅನುಭವಗಳನ್ನೂ ಉಪನ್ಯಾಸಗಳ ಟಿಪ್ಪಣಿಗಳನ್ನೂ ಸೇರಿಸಿ ಮತ್ತೊಂದು ಕೃತಿಯೂ ಪ್ರಕಟಗೊಂಡಿದೆ. `ಭಕ್ತಿಯ ನೆಪದಲ್ಲಿ’ ಎಂಬ ಈ ಕೃತಿ 2017ರಲ್ಲಿ ಪ್ರಕಟವಾಯಿತು.
ಕಳೆದ ಎರಡು ದಶಕಗಳಿಂದೀಚೆಗೆ ಲಕ್ಷ್ಮೀಶ ತೋಳ್ಪಾಡಿಯವರು `ಏರಿದ ಎತ್ತರ’ ಎನ್ನುವುದಕ್ಕಿಂತಲೂ ವಿಸ್ತರಿಸಿದ ವಿದ್ವತ್ ವಲಯ ವಿಶೇಷವಾದುದು. ಆ ವಲಯದೊಳಗಿದ್ದು ಅನೇಕರು ಬೆಳೆಯುವುದಕ್ಕೆ ಅವರು ಕಾರಣರಾದರು. ಪ್ರಚಾರ, ಪ್ರಸಿದ್ಧಿಗಳಿಂದ ದೂರ ಉಳಿಯಬಯಸುವ ಅವರು ಸ್ಥಾನ, ಪದವಿ, ಸನ್ಮಾನಗಳನ್ನು ಪ್ರೀತಿಯಿಂದಲೇ ನಿರಾಕರಿಸುತ್ತಾ ಬಂದರು. ಕೆಲವೊಮ್ಮೆ ಅನಿವಾರ್ಯವಾಗಿ ಬಾಗಬೇಕಾದದ್ದೂ ಉಂಟು. ಅದು ಸಹಜ. ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕಾಂತಾವರ ಸಾಹಿತ್ಯ ಪುರಸ್ಕಾರ, ಕಡವ ಶಂಭುಶರ್ಮ ಪ್ರಶಸ್ತಿ, ರಾಮ ವಿಠಲ ಪ್ರಶಸ್ತಿ ಹೀಗೆ ಹಿತೈಷಿಗಳೂ ಅಭಿಮಾನಿಗಳೂ ಗೌರವಿಸಿದ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅವರ “ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ” ಕೃತಿಗೆ ಅಕಾಡೆಮಿ ಪ್ರಶಸ್ತಿಯನ್ನೂ ನೀಡಿ ಸತ್ಕರಿಸಿದೆ. ಆ ಕೃತಿಗೇ ಪ್ರಶಸ್ತಿ ಬಂದಿರುವುದಕ್ಕೆ ಅವರು ಸಂತೋಷಪಟ್ಟಿದ್ದರು.
ತೋಳ್ಪಾಡಿ ಅನೇಕರಿಗೆ ವಿಸ್ಮಯವಾಗಿಯೋ ಕುತೂಹಲವಾಗಿಯೋ ಕಂಡು ಬಂದುದರಲ್ಲಿ ಆಶ್ಚರ್ಯವಿಲ್ಲ. ಈ ಬಗೆಯ ಅಧ್ಯಯನ, ಆಸಕ್ತಿಗಳ ಜತೆ ನಮ್ಮ ಇಂದಿನ ಯುವ ತಲೆಮಾರು ಮುಖಾಮುಖಿಯಾಗಬೇಕಾದ ಅಗತ್ಯವಿದೆ. ಅವರದಕ್ಕೆ ಸದಾ ಸಿದ್ಧರು. ಯಾರೇ ಅವರ ಸಂಪರ್ಕಕ್ಕೆ ಬರಲಿ, ನಿಜವಾದ ಕುತೂಹಲಿಯಾದರೆ ಸಾಕಷ್ಟು ಸಮಯವನ್ನು ಅವರಿಗೆ ನೀಡಿ, ಸಂದೇಹ ನಿವಾರಿಸಿ, ಅವರಲ್ಲೂ ಚಿಂತನ ಚಿಲುಮೆಯನ್ನು ಹರಿಸಿ ಉತ್ತೇಜಿಸುವ ಚಿತ್ಪ್ರಭೆ ಅವರದ್ದು. ವಿಟ್ಲ ಬಳಿಯ ಮೈತ್ರೇಯಿ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆಯನ್ನೋ ಸಾಂಖ್ಯದರ್ಶನವನ್ನೋ ಬೋಧಿಸುವ ತೋಳ್ಪಾಡಿಯವರ ವಿಧಾನ ಅನನ್ಯ. ಎಲ್ಲ ಬಗೆಯ ಹೊಸ ವಿಚಾರಗಳಿಗೂ ತೆರೆದುಕೊಳ್ಳಲು ಬೇಕಾದ ಮುಗ್ಧತೆ ಮತ್ತು ಬೆರಗುಗಳನ್ನು ಸದಾ ಕಾಪಿಟ್ಟುಕೊಂಡಿರುವ ನಿತ್ಯಕುತೂಹಲಿ ಅವರು. ಜಿಜ್ಞಾಸುಗಳು ಸದಾ ಇಷ್ಟಪಡುವ ಸಹಜೀವಿಯೂ ಹೌದು.
ಇವರು 2033 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
ವರದರಾಜ ಚಂದ್ರಗಿರಿ
ಹಳಗನ್ನಡ ಸಾಹಿತ್ಯದಿಂದ ತೊಡಗಿ ಈಚಿನ ಸಾಹಿತ್ಯದ ಒಲವು-ನಿಲುವುಗಳವರೆಗೆ ವಿಸ್ತಾರವಾದ ಓದು, ಅಧ್ಯಯನದ ಹಿನ್ನೆಲೆಯಿರುವ ಡಾ. ವರದರಾಜ ಚಂದ್ರಗಿರಿ ಅವರು ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಓರ್ವ ಪ್ರಮುಖ ಸಂಪನ್ಮೂಲ ವ್ಯಕ್ತಿ. ತಮ್ಮ ಅಧ್ಯಯನಪೂರ್ಣ ಮಾತು, ಬರಹಗಳಿಂದ ಸಾಹಿತ್ಯ ವಲಯದಲ್ಲಿ ಜನಪ್ರಿಯರಾದವರು. ಅರಿವು-ಬೆರಗು, ನುಡಿನೋಟ, ವಿಶಿಷ್ಟ ಶೈಲಿಯ ಕತೆಗಾರ ವ್ಯಾಸ, ದುರ್ಗಾಪುರದ ವ್ಯಾಸಪಥ ಮುಂತಾದ ವಿಮರ್ಶಾ ಕೃತಿಗಳನ್ನಲ್ಲದೆ ಹಿರಿಯ ಕವಿ ಪೆರಡಾಲ ಕೃಷ್ಣಯ್ಯನವರ ಸಮಗ್ರ ಸಾಹಿತ್ಯ, ನವ್ಯ ಕತೆಗಾರ ಎಂ. ವ್ಯಾಸ ಅವರ ಸಾಹಿತ್ಯ ಇತ್ಯಾದಿಗಳನ್ನು ಸಂಗ್ರಹಿಸಿ ಪ್ರಕಟಿಸಿದವರು. ಪುತ್ತೂರಿನ ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಇವರು ಹಲವಾರು ಸಾಹಿತ್ಯ, ಶೈಕ್ಷಣಿಕ ಸಮಿತಿಗಳಲ್ಲಿ ಸಕ್ರಿಯರಾದವರು. ಉತ್ತಮ ಸಾಹಿತ್ಯ ಸಂಘಟಕರೂ ಹೌದು. ಪುತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರು.